ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಭೆ; ರಸ್ತೆ ಸುರಕ್ಷತೆಯ ಕುರಿತು ಚರ್ಚೆ

ಮಂಗಳೂರು: ಮಹಾನಗರಪಾಲಿಕೆಯ ಅಧಿಕಾರಿ ಹಾಗೂ ಅಧ್ಯಕ್ಷರು ದ. ಕ. ಜಿಲ್ಲಾ ಬಸ್ಸು ಮಾಲಕರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ಪೋಲಿಸ್ ಆಯುಕ್ತರ ಕಛೇರಿಯಲ್ಲಿ  ಸಭೆ ಇತ್ತೀಚೆಗೆ ಜರುಗಿತು.

ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆದಿದ್ದು ಸಭೆಯ ನಡಾವಳಿಗಳು ಇಂತಿವೆ

ಬೈಕಂಪಾಡಿ   ಸೇತುವೆಯ ಎರಡೂ ಕಡೆ ಪಾದಾಚಾರಿಗಳು ರಸ್ತೆ ದಾಟಲು ತೊಂದರೆಯಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಬಸ್ ತಂಗುದಾಣ ನಿರ್ಮಾಣ ಮಾಡುವುದು. ಸೇತುವೆಯ ಎರಡೂ ಕಡೆ ಸೂಚನಾ ಫಲಕಗಳನ್ನು, ಸೋಲಾರ್ ಸ್ಟಡ್ಸ್ ಹಾಗೂ ಸೋಲಾರ್ ಲೈಟ್ ವ್ಯವಸ್ಥೆ ಮಾಡುವುದು. ಸೇತುವೆಯ ಮೇಲೆ ಇರುವ ಹೈ ವೋಲ್ಟೇಜ್ ವಿದ್ಯುತ್ ಕಂಬ ಇದ್ದು, ಇದು ಬಹಳ ಅಪಾಯಕಾರಿಯಾಗಿದ್ದು, ಇಲಾಖೆಯಿಂದ ಅನೇಕ ಬಾರಿ ಪತ್ರ ವ್ಯವಹಾರ ಮಾಡಿದ್ದರೂ ಸಹ ತೆರವುಗೊಳಿಸದೇ ಇರುವುದರಿಂದ ಈ ಬಗ್ಗೆ ಶೀಘ್ರ ಕ್ರಮಕ್ಕಾಗಿ ಪೊಲೀಸ್ ಆಯುಕ್ತರ ಕಛೇರಿಯಿಂದ ವ್ಯವಸ್ಥಾಪಕ ನಿರ್ದೇಶಕರು,  ಮೆಸ್ಕಾಂ ಇವರಿಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.

ಕೂಳೂರು   ಸೇತುವೆಯ ಪ್ರಾರಂಭದಲ್ಲಿ ಮಂಗಳೂರು ಕಡೆಗೆ ಹೋಗುವಾಗ ತಕ್ಷಣ ತಿರುವು ಇದ್ದು, ಈ ಬಗ್ಗೆ ಸೂಚನಾ ಫಲಕ ಅಳವಡಿಸುವುದು. ಸೇತುವೆಯ ತಡೆಗೋಡೆಗೆ ರಿಫ್ಲೆಕ್ಟರ್‍ಗಳನ್ನು ಅಳವಡಿಸುವುದು, ಸೋಲಾರ್ ಲೈಟ್‍ನ ವ್ಯವಸ್ಥೆ ಹಾಗೂ ಅಪಘಾತ ವಲಯ ಎಂಬ ಬೋರ್ಡ್‍ಗಳನ್ನು ಅಳವಡಿಸುವುದು ಹಾಗೂ ಸೇತುವೆಯ ಕೊನೆಯಲ್ಲಿ ಅಯ್ಯಪ್ಪ ಗುಡಿಯ ಹತ್ತಿರ ರಸ್ತೆಯಲ್ಲಿನ ಹೊಂಡವನ್ನು  ಕೂಡಲೇ ಸರಿಪಡಿಸಲು ನಿರ್ಧರಿಸಲಾಯಿತು.

 ರಾಷ್ಟ್ರೀಯ ಹೆದ್ದಾರಿ 66 ಮುಲ್ಕಿಯಿಂದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಜಂಟಿ ಸರ್ವೆ ಮಾಡಿ ಫ್ಲೈ ಓವರ್, ಬಸ್ ಬೇ, ಬ್ಲಾಕ್ ಸ್ಪಾಟ್, ಅಂಡರ್‍ಪಾಸ್‍ಗಳನ್ನು ಗುರುತಿಸಿ ಶೀಘ್ರವಾಗಿ ಕಾಮಗಾರಿ ಮಾಡಲು ಕ್ರಮ,   ಕೊಟ್ಟಾರ ಚೌಕಿ ಸರ್ವೀಸ್ ರಸ್ತೆಯ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು. ಕೊಟ್ಟಾರ  ಚೌಕಿಯಿಂದ ಕೋಡಿಕಲ್ ಕ್ರಾಸ್‍ವರೆಗೆ ಹಾಲಿ ಒಂದೇ ರಸ್ತೆಯಲ್ಲಿ ವಾಹನಗಳು ಚಲಿಸುತ್ತಿದ್ದು, ರಸ್ತೆ ಮಧ್ಯೆ ಟ್ಯೂಬುಲರ್ ಕೋನ್ಸ್ ಅಥವಾ ಪ್ಲಾಸ್ಟಿಕ್ ಬೇರಿಕೇಡುಗಳನ್ನು ಅಳವಡಿಸಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು

ಸುರತ್ಕಲ್ ಫ್ಲೈಓವರ್ ಬಳಿಯ ಸರ್ವೀಸ್ ರಸ್ತೆ ಅಗಲೀಕರಣ ಕಾಮಾಗಾರಿ ಪೂರ್ಣಗೊಳಿಸುವಿಕೆ, ಪಣಂಬೂರು ಜಂಕ್ಷನ್‍ನಲ್ಲಿ ಪಾದಾಚಾರಿ ದಾಟು  ಸೂಚನಾ ಫಲಕ ಹಾಗೂ ಬ್ಲಿಂಕರ್‍ಗಳನ್ನು ಅಳವಡಿಕೆ, ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಿಂದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸೇರುವ ಪಣಂಬೂರು ರಸ್ತೆ ದುರಸ್ತಿ, ಪ್ರತಿ ಜಂಕ್ಷನ್‍ಗಳಲ್ಲಿ ಮಾರ್ಗಸೂಚಿ ಫಲಕಗಳ ಅಳವಡಿಕೆ, ನಂತೂರು ಜಂಕ್ಷನ್, ಕೆ.ಪಿ.ಟಿ. ಜಂಕ್ಷನ್, ಪಂಪ್‍ವೆಲ್ ಜಂಕ್ಷನ್‍ಗಳಲ್ಲಿ ಸರಿಯಾದ ರೀತಿಯಲ್ಲಿ ಸೂಚನಾ ಫಲಕಗಳು, ಬ್ಲಿಂಕರ್‍ಗಳನ್ನು ಅಳವಡಿಕೆ ಕುರಿತು ನಿರ್ಣಯಿಸಲಾಯಿತು.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ರಾವ್ & ರಾವ್ ವೃತ್ತದ ರಸ್ತೆಯ ಪಕ್ಕದ ಕೊನೆ 3 ಇಂಚು ಕೆಳಗಿದ್ದು, ಅಪಾಯಕಾರಿಯಾಗಿದ್ದು, ಅದರ ದುರಸ್ತಿ,                 ಬಿಜೈ ಕಾಪಿಕಾಡು ರಸ್ತೆಯಲ್ಲಿ ಅಳವಡಿಸಲಾದ ರೋಡ್ ಹಂಪ್ಸ್ ಹಾಳಾಗಿದ್ದು, ಅದನ್ನು ಸರಿಪಡಿಸಿ ಬ್ಲಿಂಕರ್‍ಗಳನ್ನು ಅಳವಡಿಕೆ, ಪಿ.ವಿ.ಎಸ್. ನಲ್ಲಿ ರಸ್ತೆಯ ದುರಸ್ತಿ, ಕೆಬಿ ಕಟ್ಟೆಯಲ್ಲಿನ ಪಾದಾಚಾರಿ ಮಾರ್ಗ ದುರಸ್ತಿ,  ಕೆ.ಎಸ್.ಆರ್.ಟಿ.ಸಿ ಜಂಕ್ಷನ್ ಬಳಿ ಡ್ರೈನೇಜ್ ದುರಸ್ತಿ,  ಲಾಲ್‍ಬಾಗ್‍ನ ಪಬ್ಬಾಸ್ ಬಳಿಯ ರಸ್ತೆ ದುರಸ್ತಿ,  ಪ್ರಮುಖ ಜಂಕ್ಷನ್‍ಗಳಲ್ಲಿ ಅಳವಡಿಸಿರುವ ಸಿಗ್ನಲ್‍ಗಳಿಗೆ ಹಾಗೂ ಸಿಸಿಟಿವಿ ಗಳಿಗೆ ನಿರಂತರ ವಿದ್ಯುಚ್ಪಕ್ತಿಯ ವ್ಯವಸ್ಥೆ ಮಾಡಲು ನಿರ್ಧರಿಸಲಾಯಿತು.

ಪ್ರತಿ ಸಾರ್ವಜನಿಕ ಸಂಪರ್ಕ ಸಭೆ, ಪ.ಜಾ/ಪ. ಪಂ. ಸಭೆಗಳಲ್ಲಿ ಬಸ್ಸು ಚಾಲಕರು ಹಾಗೂ ನಿರ್ವಾಹಕರುಗಳ ವರ್ತನೆ ಅದರಲ್ಲೂ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಬಸ್ಸು ಮಾಲಕರು ತಮ್ಮ ಚಾಲಕರು ಹಾಗೂ ನಿರ್ವಾಹಕರಿಗೆ ಆಗಿಂದಾಗ್ಯೆ ಸಭೆ ಕರೆದು ಸೂಕ್ತ ತಿಳುವಳಿಕೆಯನ್ನು ನೀಡಲು ಸೂಚಿಲಾಯಿತು.

ಬಸ್ಸುಗಳಲ್ಲಿ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಮೀಸಲಾದ ಆಸನಗಳಲ್ಲಿ ಬೇರೆ ಪ್ರಾಯಣಿಕರು ಕುಳಿತುಕೊಳ್ಳದಂತೆ ಈಗ ಇರುವ ವ್ಯವಸ್ಥೆಯಲ್ಲಿಯೇ ಕಟ್ಟುನಿಟ್ಟಾಗಿ ಜ್ಯಾರಿಗೆ ತರುವುದು. ಈ ಸಂದರ್ಭದಲ್ಲಿ ಏನಾದರೂ ಚಾಲಕ ಹಾಗೂ ನಿರ್ವಾಹಕರಿಗೆ ಬೇರೆ ಪ್ರಯಾಣಿಕರಿಂದ ತೊಂದರೆಯಾದಲ್ಲಿ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಲಾಯಿತು

ಬಸ್ಸುಗಳಲ್ಲಿ ಟೇಪ್ ರೆಕಾರ್ಡರ್ ಹಾಕದಂತೆ, ಕರ್ಕಶ ಹಾರ್ನ್ ಬಳಸದಂತೆ, ಟಿಂಟೆಡ್ ಪೇಪರ್‍ಗಳನ್ನು ತೆರವುಗೊಳಿಸುವಂತೆ, ಟೈರ್‍ಗಳನ್ನು ಬಸ್ಸಿನ ಒಳಗಡೆ ಪ್ರಯಾಣಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಇಡದಂತೆ ಕ್ರಮ ಕೈಗೊಳ್ಳಲಾಯಿತು. ಬಸ್ಸುಗಳು ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿದ್ದು, ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದ್ದು, ಬಸ್ಸು ಸ್ಟಾಪ್‍ಗಳಲ್ಲಿ ಹಾಗೂ ಬಸ್ ತಂಗುದಾಣಗಳಲ್ಲಿ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಬದಿಯಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಸಾಗಿಸುವುದು ಹಾಗೂ ಚಾಲಕರುಗಳು ಅಪಾಯಕಾರಿ ರೀತಿಯಲ್ಲಿ ಬಸ್ಸನ್ನು ಚಾಲನೆ ಮಾಡದಂತೆ ಮಾಲಕರುಗಳು ಚಾಲಕರುಗಳಿಗೆ ತಿಳುವಳಿಕೆ ನೀಡುವಂತೆ ಸೂಚಿಲಾಯಿತು.

ಸಭೆಯಲ್ಲಿ ನಗರ ಪೋಲಿಸ್ ಆಯುಕ್ತ ಎಂ ಚಂದ್ರಶೇಖರ್, ಉಪ ಪೋಲಿಸ್ ಆಯುಕ್ತ ಡಾ ಸಂಜೀವ್ ಪಾಟೀಲ್, ಉಪ ಸಾರಿಗೆ ಆಯುಕ್ತ ಜಿ ಎಸ್ ಹೆಗ್ಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಇಂಜಿನಿಯರ್ ಅಜಿತ್ ಕುಮಾರ್ ಬೋಗಾರ್,  ಮಹಾನಗರಪಾಲಿಕೆಯ ಉಪ ಆಯುಕ್ತ ಎಂ ಶಿವಶಂಕರ ಸ್ವಾಮಿ, ಪಾಲಿಕೆ ವಿದ್ಯುತ್ ಕಾರ್ಯಪಾಲಕ ಅಭಿಯಂತರರು ಯಶವಂತ್ ಕಾಮತ್, ಹೆದ್ದಾರಿ ಪ್ರಾಧಿಕಾರದ ಅಸದುಲ್ಲಾ ಖಾನ್, ನವಯುಗ ಕಂಪೆನಿಯ ಭಾನುಪ್ರಕಾಶ್, ಆದರ್ಶ್, ದಿನಕರ್ ಮೋಗಿ, ಸಂಚಾರ ಉಪವಿಭಾಗದ ಸಹಾಯಕ ಪೋಲಿಸ್ ಆಯುಕ್ತ ಉದಯ ನಾಯಕ್, ಉತ್ತರ ಠಾಣೆಯ ಪೋಲಿಸ್ ನೀರಿಕ್ಷಕ ಮಂಜುನಾಥ್, ದಕ ಜಿಲ್ಲಾ ಬಸ್ಸು ಮಾಲಕರ ಸಂಘದ ರಾಜವರ್ಮ ಬಲ್ಲಾಳ್, ನೆಲ್ಸನ್ ಪಿರೇರಾ, ದಿಲ್ ರಾಜ್ ಆಳ್ವ, ಜಯಶೀಲ ಉಪಸ್ಥಿತರಿದ್ದರು

Leave a Reply

Please enter your comment!
Please enter your name here