ಮಂಗಳೂರು : ರೈತ ಚೈತನ್ಯ ಯಾತ್ರೆ ಯಶಸ್ವಿಗೊಳಿಸಲು ಕಾರ್ಯಕರ್ತರಿಗೆ ಕರೆ -ಸುನೀಲ್ ಕುಮಾರ್

ಮಂಗಳೂರು:  ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದ್ದರೂ, ಕಾಂಗ್ರೆಸ್ ಸರಕಾರ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ವಿಫಲವಾಗಿದೆ. ರಾಜ್ಯದ ರೈತರ ಸ್ಥೈರ್ಯ ತುಂಬುವ ಯಾವುದೇ ಕಾರ್ಯಕ್ರಮವನ್ನು ನೀಡದ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಜನಾಭಿಪ್ರಾಯ ಮೂಡಿಸಲು ರೈತ ಚೈತನ್ಯ ಯಾತ್ರೆಯನ್ನು ನಡೆಸಲು ನಿರ್ಧರಿಸಿದೆ.

IMG_4245

ರೈತ ಚೈತನ್ಯ ಯಾತ್ರೆಯು ಉಡುಪಿ, ದ.ಕ. ಮತ್ತು ಕೊಡಗು ಜಿಲ್ಲೆಗಳಲ್ಲಿ ಸೆಪ್ಟಂಬರ್ 11 ಮತ್ತು 12 ರಂದು ಸಂಚರಿಸಲಿದ್ದು, ಈ ಯಾತ್ರೆಯನ್ನು ಯಶಸ್ವಿಗೊಳಿಸಲು ಕಾರ್ಯಕರ್ತರಿಗೆ ರಾಜ್ಯ ಉಪಾಧ್ಯಕ್ಷರಾದ ಸುನೀಲ್ ಕುಮಾರ್‍ರವರು ಮಂಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ವಿಭಾಗ ಮಟ್ಟದ ಸಭೆಯಲ್ಲಿ ಕರೆ ನೀಡಿದರು. ಈ ಸಂದರ್ಭದಲ್ಲಿ ಉಡುಪಿಯಲ್ಲಿ, ಬಿ.ಸಿ.ರೋಡ್ ಮತ್ತು ಸೋಮವಾರಪೇಟೆಯಲ್ಲಿ ಸಾರ್ವಜನಿಕ ಸಭೆಗಳು ನಡೆಯಲಿದೆ. ರಾಜ್ಯದ 115 ತಾಲೂಕುಗಳಲ್ಲಿ ಬರ ಆವರಿಸಿಕೊಂಡಿದೆ. ರಾಜ್ಯದ ರೈತ ಕಂಗಾಲಾಗಿದ್ದಾನೆ. ರೈತರ ಸಾಲ ಮನ್ನಾ ಒಳಗೊಂಡಂತೆ ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಬಿಪಿಎಲ್ ಕಾರ್ಡ್ ರದ್ದುಗೊಳಿಸುತ್ತಿರುವ ರಾಜ್ಯ ಸರಕಾರ: ರಾಜ್ಯದಲ್ಲಿ ಸರಕಾರಿ ಸ್ಥಳದಲ್ಲಿ ವಾಸಿಸುತ್ತಿರುವ ಕುಟುಂಬಗಳು ಮನೆ ನಂಬ್ರವಿಲ್ಲದಿದ್ದರೂ ಬಿಪಿಎಲ್ ಕಾರ್ಡ್ ಹೊಂದಿರುತ್ತಾರೆ. ಇಂತಹ ಸಾವಿರಾರು ಬಡ ಕುಟುಂಬಗಳ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಹುನ್ನಾರವನ್ನು ರಾಜ್ಯ ಸರಕಾರ ನಡೆಸುತ್ತಿದೆ. ಲಾಟರಿ, ಕ್ರಿಕೆಟ್ ಬೆಟ್ಟಿಂಗ್, ಸರಕಾರಿ ಹಾಸ್ಟೆಲ್‍ಗಳಲ್ಲಿ ಇರುವ ಭ್ರಷ್ಟಾಚಾರಗಳಿಗೆ ಕಾಂಗ್ರೆಸ್ ರಕ್ಷಣೆಯನ್ನು ನೀಡುತ್ತಿದೆ. ರಾಜ್ಯ ಸರಕಾರ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಬದಲು ವೃತಾ ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡಿ ಕಾಲಹರಣ ಮಾಡುತ್ತಿದೆ.

ದ.ಕ.ಜಿಲ್ಲಾ ಅಧ್ಯಕ್ಷರಾದ ಪ್ರತಾಪ್‍ಸಿಂಹ ನಾಯಕ್‍ರವರು ಸಭೆಯನ್ನು ಸ್ವಾಗತಿಸಿದರು. ಕೊಡಗು ಜಿಲ್ಲಾ ಪ್ರ.ಕಾ. ರವಿ ಕಾಳಪ್ಪ ವಂದನಾರ್ಪಣೆ ಸಲ್ಲಿಸಿದರು. ಸಂಜೀವ ಮಠಂದೂರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಭೆಯಲ್ಲಿ ವಿಭಾಗ ಪ್ರಭಾರಿ ನಳಿನ್ ಕುಮಾರ್ ಕಟೀಲ್, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಕಾರ್ಯದರ್ಶಿ ಶ್ಯಾಮಲಾ ಕುಂದರ್, ಮೋನಪ್ಪ ಭಂಡಾರಿ, ಶಾಸಕ ಅಪ್ಪಚ್ಚುರಂಜನ್, ದ.ಕ., ಉಡುಪಿ ಮತ್ತು ಕೊಡುಗು ಜಿಲ್ಲೆಗಳ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here