ಮಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ 15 ಕ್ಕೂ ಅಧಿಕ ಸ್ಥಾನ ;ನಿರ್ಮಲ್ ಕುಮಾರ್ ಸುರಾನ

ಮಂಗಳೂರು: ರಾಜ್ಯದಲ್ಲಿ 15ಕ್ಕೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಲಿದ್ದು, ವ್ಯವಸ್ಥಿತವಾಗಿ ಚುನಾವಣಾ ತಯಾರಿ ಮತ್ತು ಪರಿಣಾಮಕಾರಿಯಾಗಿ ಮತದಾರರ ಭೇಟಿ ಮೂಲಕ ಅಭೂತಪೂರ್ವ ಗೆಲುವನ್ನು ಸಾಧಿಸುವ ವಿಶ್ವಾಸವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಸುರಾನ ವ್ಯಕ್ತಪಡಿಸಿದರು.
ಇಂದು (05.12.2015) ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮತದಾನದ ಪ್ರಕ್ರಿಯೆಯ ಬಗ್ಗೆ ಮಾಹಿತಿಗಳನ್ನು ನೀಡಿದರು. ಜಿಲ್ಲಾ ಮಟ್ಟದಲ್ಲಿ ಚುನಾವಣಾ ಸಮಿತಿಯನ್ನು ಘೋಷಿಸಿದ ಅವರು ಆತ್ಮವಿಶ್ವಾಸದಿಂದ ಗೆಲುವು ಸಾಧಿಸಲು ಕರೆ ನೀಡಿದರು. ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ನೇತೃತ್ವದಲ್ಲಿ ಸಂಜೀವ ಮಠಂದೂರು, ದೇವದಾಸ್ ಶೆಟ್ಟಿ, ಕುಶಾಲಪ್ಪ ಗೌಡ ಸೇರಿದಂತೆ ಜಿಲ್ಲೆಯ ಮಾಜಿ ಶಾಸಕರು ಮತ್ತು ಪ್ರಮುಖರ ಸಮಿತಿಯನ್ನು ಪ್ರಕಟಿಸಿದರು.
ವಿಧಾನಪರಿಷತ್ ಸದಸ್ಯ ಹಾಗೂ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವಧನ ನೀಡಿಕೆ, ಸೇರಿದಂತೆ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಬಿಜೆಪಿ ಶ್ಲಾಘನೀಯ ಸಾಧನೆಗೈದಿದೆ. ಮುಂದಿನ ಚುನಾವಣೆಯಲ್ಲಿ ವ್ಯವಸ್ಥಿತ ಮತ್ತು ಸಂಘಟಿತ ಪ್ರಯತ್ನದಿಂದ ಪ್ರಥಮ ಪ್ರಾಶಸ್ತ್ಯದ ಮತದಿಂದಲೇ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಚುನಾವಣೆ ಪ್ರಕ್ರಿಯೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿ, ಸಕಾರಾತ್ಮಕ ಅಂಗಗಳನ್ನು ಮುಂದಿರಿಸಿಕೊಂಡು ಮತದಾರರನ್ನು ಭೇಟಿ ಮಾಡಿ ಗೆಲುವಿಗೆ ವ್ಯವಸ್ಥಿತ ಪ್ರಯತ್ನ ಮಾಡಬೇಕೆಂದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪ್ರಭಾರಿ ಲಾಲಾಜಿ ಮೆಂಡನ್, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶೈಲಜಾ ಕೆ.ಟಿ.ಭಟ್ ವಂದಿಸಿದರು.

Leave a Reply

Please enter your comment!
Please enter your name here