ಮಂಗಳೂರು ವಿಶ್ವವಿದ್ಯಾಲಯದ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ

Spread the love

ಮಂಗಳೂರು ವಿಶ್ವವಿದ್ಯಾಲಯದ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವತಿಯಿಂದ ಇಂದು ಪಿವಿಎಸ್ ವೃತ್ತದ ಬಳಿ ಸುಮಾರು 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಯಿತು.

ವಿಶ್ವವಿದ್ಯಾಲಯದ ಪ್ರಾಥಮಿಕ ಕಾರ್ಯಗಳಾದ ಶಿಕ್ಷಣ, ಪರೀಕ್ಷೆ ಮತ್ತು ಫಲಿತಾಂಶ, ಅಂಕಪಟ್ಟಿ ನೀಡುವುದು ಪ್ರಮುಖವಾಗಿದೆ. ಆದರೆ ವಿಶ್ವವಿದ್ಯಾಲಯ ಪ್ರಮುಖವಾದ ಕೆಲಸಗಳನ್ನೇ ಮರೆತು ಅವ್ಯವಹಾರದ ಹಾದಿಗೆ ಹೋಗಿರುವುದು ದುರಾದೃಷ್ಟಕರ ಎಂದು ಶೀತಲ್ ಕುಮಾರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕರ್ತರಾದ ಕು|ಕೀರ್ತನ ಮಾತನಾಡಿ ವಿಶ್ವವಿದ್ಯಾಲಯವು ಸಮಾಜದಲ್ಲಿ ಸಮಸ್ಯೆಗಳು ಎದುರಾದಾಗ ಪರಿಹರಿಸುವ ದಾರಿಯನ್ನು ತೋರಿಸುವಂತಹ ಶಿಕ್ಷಣದ ನಿರೀಕ್ಷೆಯಲ್ಲಿ ನಾವೆಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದೇವೆ. ಆದರೆ ವಿಶ್ವ ವಿದ್ಯಾಲಯವು ಸಮಸ್ಯೆಗಳ ಆಲಯವಾಗಿರುವುದು ಮತ್ತು ಭ್ರಷ್ಟಾಚಾರದ ಕೇಂದ್ರವಾಗಿರುವುದು ಮತ್ತು ಬುದ್ಧಿವಂತರ ಊರೆಂದು ಕರೆಯಿಸಿಕೊಳ್ಳುವ ಮಂಗಳೂರಿಗೆ ವಿಶ್ವವಿದ್ಯಾಲಯವು ಅಪಕೀರ್ತಿಯನ್ನು ತರುತ್ತಿರುವುದು ಕರಾವಳಿ ಭಾಗಕ್ಕೆ ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಾಸ್ಟೆಲ್ ಪ್ರಮುಖ್ ರಾಕೇಶ್ ಮಾತನಾಡಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸಮಸ್ಯೆಗಳನ್ನು ಪರಿಹರಿಸಲಾಗದೆ ಸಮಸ್ಯೆಗಳ ಮರೆಮಾಚುವಿಕೆ ಮತ್ತು ವಿಷಯಗಳ ತಿರುಚುವಿಕೆಯಿಂದ ವಿಶ್ವವಿದ್ಯಾಲಯದ ಘನತೆಯನ್ನು ಹಾಳುಮಾಡಿತ್ತಿರುವ ಸಂಗತಿ ಜಗಜ್ಜಾಹೀರಾತಾಗಿರುವುದು ಕಂಡುಬರುತ್ತಿದೆ. ಈ ಹಿಂದೆ ಅನೇಕ ಹೋರಾಟಗಳು ಮತ್ತು ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಪತ್ರಿಕಾಗೋಷ್ಠಿಯ ವಿವರಣೆಯನ್ನು ಮತ್ತೊಮ್ಮೆ ಈ ಕೆಳಕಂಡಂತೆ ವಿವರಿಸಿದರು.

ಮಂಗಳೂರು ವಿಶ್ವವಿದ್ಯಾಲಯವು ದೇಶಕ್ಕೆ ಗಣನೀಯ ಸಂಖ್ಯೆಯ ಬುದ್ಧಿವಂತರನ್ನು ನೀಡಿರುವ ವಿಶ್ವವಿದ್ಯಾಲಯ. ಇಂತಹ ವಿಶ್ವವಿದ್ಯಾಲಯ ನಡೆಸಿದ ಪಬ್ಲಿಕ್ ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದ ಅಂಕ ಪಟ್ಟಿಯ ತಯಾರಿಯ ಬಗ್ಗೆ ಕಳೆದ 1 ವರ್ಷದಿಂದ ಅನೇಕರು ಸಂಶಯ ಪಡುವ ಸನ್ನಿವೇಶ ನಿರ್ಮಾಣಗೊಂಡಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. 2015-16 ಮತ್ತು 2016-17ರಲ್ಲಿ ಪರೀಕ್ಷೆಗೆ ಕುಳಿತ ಅನೇಕ ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಗೊಂದಲಗಳು ನಿರ್ಮಾಣವಾಗಿ ಸರಿಯಾದ ಫಲಿತಾಂಶ ಪ್ರಕಟವಾಗದಿರುವುದು, ಪರೀಕ್ಷೆಯ ಅಂಕಪಟ್ಟಿ ಒಂದು ವರ್ಷ ಕಳೆದರೂ ಸಿಗದಿರುವುದು ಮತ್ತು ಅದರ ಪರಿಣಾಮವಾಗಿ ಉದ್ಯೋಗ ಗಳಿಸಿಕೊಳ್ಳುವ ಹಾಗೂ ಉನ್ನತ ಶಿಕ್ಷಣಕ್ಕೆ ಸೇರುವಲ್ಲಿ ವಂಚಿತರಾಗಿರುವ ಅನೇಕ ಉದಾಹರಣೆಗಳು ಕಳೆದ ಒಂದೂವರೆ ವರ್ಷದಲ್ಲಿ ನಡೆದಿರುವುದು ಖೇದಕರವಾಗಿದೆ. ಈ ಎಲ್ಲಾ ಪ್ರಕರಣಗಳಿಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ಹಾಗೂ ಪರೀಕ್ಷಾಂಗ ಕುಲಸಚಿವರುಗಳೆ ನೇರವಾಗಿ ಹೊಣೆಗಾರರಾಗಿದ್ದಾರೆಂಬುವುದು ಅತ್ಯಂತ ಸ್ಪಷ್ಟವಾಗಿದ್ದು ಇಡೀ ಪ್ರಕರಣ ನಾಚಿಕೆಗೇಡಿನ ಸಂಗತಿಯಾಗಿದೆ.

ಈಗಾಗಲೇ ಪ್ರತಿಯೊಬ್ಬ ವಿದ್ಯಾರ್ಥಿಯ ಫಲಿತಾಂಶ ಪ್ರಕಟಿಸಲು ವಿಶ್ವವಿದ್ಯಾಲಯವು ಹೊರಗುತ್ತಿಗೆ ಸಂಸ್ಥೆಗೆ ರೂ.120/- ಹಣವನ್ನು ವಿನಿಯೋಗಿಸುತ್ತಿದೆ. ಈ ಹಿಂದೆ ರೂ.60/- ಹಣವನ್ನು ಖರ್ಚುಮಾಡಿ ಒಳ್ಳೆಯ ಫಲಿತಾಂಶವನ್ನು ಸರಿಯಾದ ಸಮಯಕ್ಕೆ ನೀಡುತ್ತಿತ್ತು.

ಇದೀಗ ಅದರ ದುಪ್ಪಟ್ಟು ಹಣವನ್ನು ನೀಡಲಾಗುತ್ತಿದ್ದರೂ ಪರೀಕ್ಷಾ ಫಲಿತಾಂಶ ಗೊಂದಲದ ಗೂಡಾಗಿದೆ. ಹಾಗೆ ದುಪ್ಪಟ್ಟು ಹಣ ನೀಡಿ ಹೊರಗುತ್ತಿಗೆ ಸಂಸ್ಥೆಯನ್ನು ಬದಲಾಯಿಸಿದ್ದರ ಉದ್ದೇಶವೂ ಸಂಶಯಾಸ್ಪದವಾಗಿದೆ ಮತ್ತು ಇದು ಯಾರ ಲಾಭಕ್ಕಾಗಿ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ? ಈಗಾಗಲೇ ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸುಮಾರು 210 ಅಂಗೀಕೃತ ಕಾಲೇಜುಗಳಿದ್ದು ಇದರಲ್ಲಿ 85000 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೋಸ್ಕರ ವಿಶ್ವವಿದ್ಯಾಲಯವು ಸುಮಾರು 1,02,00,000 ಹಣವನ್ನು ಪ್ರತಿ ಸೆಮಿಸ್ಟರ್‍ನಲ್ಲಿ ಹೊರಗುತ್ತಿಗೆ ಸಂಸ್ಥೆಗೆ ನೀಡುತ್ತಿದೆ. ಆದರೂ ಪರೀಕ್ಷಾ ಫಲಿತಾಂಶದಲ್ಲಿ ಗೊಂದಲಗಳು ಉಂಟಾಗಿ ಕೆಲವರ ಫಲಿತಾಂಶ ಪ್ರಕಟವಾಗದೆ ಅಂಕಪಟ್ಟಿ ಸಿಗದಿರುವ ಉದಾಹರಣೆಗಳಿವೆ. ಇದನ್ನು ಅಭಾವಿಪ ಮಂಗಳೂರು ಶಾಖೆ ಬಲವಾಗಿ ಖಂಡಿಸುತ್ತದೆ.

ಮಂಗಳೂರು ವಿಶ್ವವಿದ್ಯಾಲಯವು ಪ್ರತಿ ವಿದ್ಯಾರ್ಥಿಯಿಂದ ಪರೀಕ್ಷಾ ಶುಲ್ಕವಾಗಿ ರೂ.850/-,ಆನ್‍ಲೈನ್ ಶುಲ್ಕ ರೂ.200/-, ಅಂಕಪಟ್ಟಿ ಶುಲ್ಕ ರೂ.100/-, ಅರ್ಜಿ ಶುಲ್ಕ ರೂ.200/- ಇದನ್ನು ಲೆಕ್ಕ ಹಾಕಿದಾಗ ರೂ.1350/- ಒಬ್ಬ ವಿದ್ಯಾರ್ಥಿಯ ಪರೀಕ್ಷೆ ನಡೆಸಲು ಇಷ್ಟೊಂದು ಶುಲ್ಕ ವಸೂಲು ಮಾಡುವ ಅವಶ್ಯಕತೆ ಇದೆಯಾ? ಇಂದು ವಿದ್ಯಾರ್ಥಿಗಳಿಂದ ಖಾಸಗಿ ಕಾಲೇಜುಗಳಿಗಿಂತಲೂ ಹೆಚ್ಚಿನ ಹಣವನ್ನು ವಿಶ್ವವಿದ್ಯಾಲಯವು ವಸೂಲು ಮಾಡುತ್ತಿದೆ. ಇದರಿಂದ ವಿಶ್ವವಿದ್ಯಾಲಯವು ವ್ಯಾಪಕ ಭ್ರಷ್ಟಾಚಾರ ತೊಡಗಿದೆ ಎಂಬ ಅನುಮಾನವು ಯಾರಿಗಾದರೂ ಮೂಡುತ್ತದೆ. ಈಗಾಗಲೇ ರಾಜ್ಯ ಉನ್ನತ ಶಿಕ್ಷಣ ಸಚಿವರು “ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ” ಎಂದು ಹೇಳಿದ ಮಾತಿಗೆ ಮಂಗಳೂರು ವಿಶ್ವವಿದ್ಯಾಲಯವೂ ಪುಷ್ಠಿ ಕೊಟ್ಟಂತೆ ಕಾಣಿಸುತ್ತಿದೆ.

ವಿಶ್ವವಿದ್ಯಾಲಯ ಪರೀಕ್ಷಾ ಫಲಿತಾಂಶ ಪ್ರಕಟಣೆ ಹಾಗೂ ಅಂಕ ಪಟ್ಟಿಗಳ ತಯಾರಿಕೆ ಕುರಿತಂತೆ ಇಷ್ಟೊಂದು ದೋಷಗಳು ಕಾಣಬರುತ್ತಿದ್ದರೂ, ಈ ಕುರಿತು ಸ್ಪಷ್ಟ ಸಾಕ್ಷಾಧಾರಗಳಿದ್ದರೂ ವಿ.ವಿ.ಯ ಕುಲಪತಿಗಳು ಹಾಗೂ ಪರೀಕ್ಷಾಂಗ ಕುಲಸಚಿವರು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿ ಸಂಘವೊಂದರಿಂದ “ಗೊಂದಲ ರಹಿತ ಫಲಿತಾಂಶ”ಕ್ಕಾಗಿ ಅಭಿನಂದನೆ ಸ್ವೀಕರಿಸ ಹೊರಟಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ.
ಈ ಹಿನ್ನಲೆಯಲ್ಲಿ ಮಂಗಳೂರು ವಿ.ವಿಯ ಈ ಎರಡು ವರ್ಷಗಳಲ್ಲಿ ನಡೆಸಿದ ಪರೀಕ್ಷಾ ಪ್ರಕ್ರಿಯೆ, ಸಂಗ್ರಹಿಸಿದ ಮಿತಿಮೀರಿದ ಶುಲ್ಕ, ಹೊರಗುತ್ತಿಗೆ ಸಂಸ್ಥೆಯನ್ನು ಬದಲಿಸಿ ದುಪ್ಪಟ್ಟು ಶುಲ್ಕ ನೀಡಿದ್ದುದು, ಕಳೆದ ಸಾಲಿನಲ್ಲಿ ಸಾವಿರಗಟ್ಟಲೆ ಅಂಕಪಟ್ಟಿಯನ್ನು ದೋಷಪೂರಿತಗೊಳಿಸಿ ಮತ್ತು ಹಿಂಪಡೆದಿದ್ದು, ಈ ಬಾರಿ ಫಲಿತಾಂಶ ಪ್ರಕಟಿಸಿ ಅದನ್ನು 24 ಗಂಟೆಗಳಲ್ಲಿ ಹಿಂಪಡೆದಿದ್ದು, ಪುನ: ಈ ಬಾರಿಯೂ ನೂರಾರು ದೋಷಪೂರಿತ ಫಲಿತಾಂಶ ಪ್ರಕಟಿಸಿದ್ದುದು, ಇಲ್ಲವೇ ತಪ್ಪು ಅಂಕಪಟ್ಟಿ ನೀಡಿದ್ದು ಎಲ್ಲಾ ಅಂಶಗಳ ಬಗ್ಗೆ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರವು ಉನ್ನತ ಮಟ್ಟದ ತನಿಖೆಯನ್ನು ಕಾಲಮಿತಿ ನಿಗದಿಸಿ ನಡೆಸಲು ಅಭಾವಿಪವು ಆಗ್ರಹಿಸುತ್ತದೆ.

ಅಭಾವಿಪವು ಈ ಪ್ರತಿ ಸಂದರ್ಭದಲ್ಲಿಯೂ ವಿಶ್ವವಿದ್ಯಾಲಯಕ್ಕೆ ಸಲಹೆ ಸೂಚನೆಯನ್ನು ನೀಡುತ್ತಾ, ಎಚ್ಚರಿಸುತ್ತಾ, ಪ್ರತಿಭಟಿಸುತ್ತಾ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿತು. ಆದರೆ ವಿಶ್ವವಿದ್ಯಾಲಯವು ದಿನಾಂಕ 18.02.2017 ರಂದು ಮತ್ತೆ ತಪ್ಪು ಫಲಿತಾಂಶವನ್ನು ಪ್ರಕಟಿಸಿ ವಿದ್ಯಾರ್ಥಿಗಳನ್ನು ಹಾಗೂ ಅವರ ಪೆÇೀಷಕರನ್ನು ಪೇಚಿಗೆ ಸಿಲುಕಿಸಿತು. ಆದ್ದರಿಂದ ಈ ಗೊಂದಲಗಳಿಗೆ ಇತಿಶ್ರೀ ನೀಡಲೇಬೇಕೆಂದು ಇದಕ್ಕೆ ಕಾರಣಭೂತರಾದ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು ಹಾಗೂ ಪರೀಕ್ಷಾಂಗ ಕುಲಸಚಿವರ ರಾಜೀನಾಮೆಗೆ ಆಗ್ರಹಿಸಿ ಅನೇಕ ಹಂತದ ಹೋರಾಟಗಳು ಮುಗಿದಿವೆ, ಆದರೂ ಸಮಸ್ಯೆ ಬಗೆಹರಿಯದಿರುವುದು ಶೋಚನೀಯ ಸಂಗತಿಯಾಗಿದೆ. ಸಮಸ್ಯೆ ತಕ್ಷಣ ಪರಿಹರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅನೇಕ ರೀತಿಯ ಉಗ್ರ ಹೋರಾಟಗಳು ನಡೆಯಲಿದ್ದು ಮುಂದೆ ಆಗಬಹುದಾದ ಪರಿಣಾಮಕ್ಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ನೇರ ಹೊಣೆಯಾಗಿರುತ್ತದೆ ಎಂದು ತಿಳಿಸಲಾಯಿತು.

 ಹೋರಾಟದಲ್ಲಿ ವಿಭಾಗ ಸಹ ಸಂಚಾಲಕ್ ಚೇತನ್, ಜಿಲ್ಲಾ ಸಹ ಸಂಚಾಲಕ್ ಪದ್ಮಕುಮಾರ್, ನಗರ ಕಾರ್ಯದರ್ಶಿ ಜೀವನ್ ಮರೋಳಿ, ಅಭಿಷೇಕ್, ಶರೋಲ್, ಮನೋಜ್, ಸ್ವಾಗತ್, ವಿದ್ಯಾ ಇತರರು ಉಪಸ್ಥಿತರಿದ್ದರು.


Spread the love