ಮಂಗಳೂರು : ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ.ಆರ್.ಐ ಲ್ಯಾಬ್-  ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ

ಮಂಗಳೂರು : ಮಂಗಳೂರು ವೆನ್ಲಾಕ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು , ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಬಡ ರೋಗಿಗಳಿಗೂ ಪಂಚತಾರಾ ವ್ಯೆದ್ಯಕೀಯ ಸೌಲಭ್ಯ ಕೈಗೆಟಕುವಂತೆ ಮಾಡುವಲ್ಲಿ ಕರ್ನಾಟಕ ಸರ್ಕಾರ ಮುಂದಾಗಿದ್ದು,  ಇದೀಗ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಎಂ.ಆರ್.ಐ ಲ್ಯಾಬ್ ತೆರೆಯಲು ಆಸ್ಪತ್ರೆ ಆವರಣದಲ್ಲಿ  ಸ್ಥಳಾವಕಾಶ ಕಲ್ಪಿಸಲು ಜಿಲ್ಲಾಧಿಕಾರಿ ಹಾಗೂ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರಾದ ಎ.ಬಿ. ಇಬ್ರಾಹಿಂ ಅವರು ಸೂಚಿಸಿದ್ದಾರೆ.

ಅವರು ಮಂಗಳವಾರ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಗೆ ಅಧ್ಯಕ್ಷತೆ ವಹಿಸಿ ಆಸ್ಪತ್ರೆಗೆ ಬೇಕಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಿ ಈ ವಿಷಯ ತಿಳಿಸಿದರು.

ಆಸ್ಪತ್ರೆಗೆ ಅವಶ್ಯಕವಾಗಿ ಬೇಕಾದ ಲಿನನ್ ಮತ್ತು ಕಾಯರ್ ಐಟಂಗಳನ್ನು ರೂ.62 ಲಕ್ಷ  ವೆಚ್ಚದಲ್ಲಿ ಖರೀದಿಸುವುದು, ಆಸ್ಪತ್ರೆ ವಿವಿಧ ವಿಭಾಗಗಳ ನೀರಿನ ಪೈಪ್ ಶೌಚಾಲಯ , ವಿದ್ಯುತ್ ಸಂಪರ್ಕ ಮುಂತಾದ ಮೂಲಭೂತ ಸೌಲಭ್ಯಗಳ ದುರಸ್ತಿಗಾಗಿ ಟೆಂಡರ್ ಆಹ್ವಾನಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.  , ಎಲ್ಲಾ ಸಿವಿಲ್ ಕಾಮಗಾರಿಗಳನ್ನು  ಲೋಕೋಪಯೋಗಿ ಇಲಾಖೆ ಹಾಗೂ ವಿದ್ಯುತ್ ದುರಸ್ತೆ ಹಾಗೂ ಇನ್ನಿತರ ಕಾಮಗಾರಿಗಳನ್ನು ಮೆಸ್ಕಾಂ ಇಂಜಿನಿಯರುಗಳಿಂದ ಪರಿಶೀಲನೆಗೊಳಪಡಿಸಿ ಧೃಡೀಕರಿಸಿದ ನಂತರ ಬಿಲ್ಲು ಪಾವತಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಪಿ.ಐ ಶ್ರೀವಿದ್ಯಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ರಾಮಕೃಷ್ಣ ರಾವ್ , ನಿವಾಸಿ ವೈದ್ಯಾಧಿಕಾರಿ  ಡಾ.ವೀರಪ್ಪ, ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕ ಡಾ: ಶಕುಂತಳಾ ಮುಂತಾದವರು ಭಾಗವಹಿಸಿದ್ದರು.

Leave a Reply

Please enter your comment!
Please enter your name here