ಮಂಗಳೂರು: ಶ್ರೀ ನಾರಾಯಣಗುರುಗಳಿಗೆ ಅವಮಾನ : ಯುವವಾಹಿನಿಯಿಂದ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ಕೇರಳದ ಕಣ್ಣೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ದಚಿತ್ರದ ಮೂಲಕ ಅವರನ್ನು ಅವಮಾನಿಸಿ ನಂತರ ನಡೆದ ಘಟನೆಗಳಲ್ಲಿ ನಾರಾಯಣಗುರುಗಳ ವಿಗ್ರಹವನ್ನು ಧ್ವಂಸಗೊಳಿಸಿದ ಘಟನೆಯನ್ನು ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯು ತೀವ್ರವಾಗಿ ಖಂಡಿಸಿ ಈ ಬಗ್ಗೆ ಸೂಕ್ತ ತನಿಖೆಯು ನಡೆದು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಎ.ಬಿ.ಇಬ್ರಾಹಿಂರವರಿಗೆ ಯುವವಾಹಿನಿಯ ನಿಯೋಗವು ಮನವಿಯನ್ನು ಸಲ್ಲಿಸಿದೆ.

2

ಮಾನವೀಯ ಮೌಲ್ಯವನ್ನು ಜಗತ್ತಿಗೆ ಸಾರಿ ಪೂಜ್ಯ ಸ್ಥಾನದಲ್ಲಿರುವ ನಾರಾಯಣಗುರುಗಳನ್ನು ಆರಾಧಿಸುವ ಜಿಲ್ಲೆಯ ಅಸಂಖ್ಯಾತ ಭಕ್ತಾಧಿಗಳಿಗೆ ನೋವುಂಟು ಮಾಡಿದೆಯಲ್ಲದೇ ಸಾಮಾಜಿಕ ಜಾಲತಾಣದಿಂದ ಅವರನ್ನು ಅವಮಾನಿಸುವಂತೆ ಚಿತ್ರೀಕರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜಾತಿ ಮತ ಭೇಧವಿಲ್ಲದೇ ಬೀದಿಗಿಳಿದು ಉಗ್ರ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ನಿಯೋಗದಲ್ಲಿ ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸಹ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ಯುವವಾಹಿನಿಯ ಕೇಂದ್ರ ಸಮಿತಿಯ ರಾಜೀವ ಪೂಜಾರಿ, ಸಾಧು ಪೂಜಾರಿ, ಶಂಕರ ಸುವರ್ಣ, ಪರಮೇಶ್ವರ ಪೂಜಾರಿ, ಲಕ್ಷ್ಮಣ್ ಸಾಲ್ಯಾನ್, ಮೂಲ್ಕಿ ಚಂದ್ರಶೇಖರ ಸುವರ್ಣ, ಪ್ರೇಮ್‍ನಾಥ್ ಬಂಟ್ವಾಳ, ವಿಜಯಕುಮಾರ್ ಕುಬೆವೂರು, ಸಂಜೀವ ಸುವರ್ಣ, ಪದ್ಮನಾಭ, ಕೇಶವ ಸುವರ್ಣ, ಯೋಗೀಶ್ ಕೋಟ್ಯಾನ್ ಹಾಗೂ ಮಂಗಳೂರು, ಮೂಲ್ಕಿ, ಪಣಂಬೂರು, ಬಂಟ್ವಾಳ, ಪುತ್ತೂರು, ಬೆಳುವಾಯಿ, ಸುರತ್ಕಲ್ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.

Leave a Reply