ಮಂಗಳೂರು: ‘ಸಹಬಾಳ್ವೆಯ ಸಾಗರ’ – ಬೃಹತ್ ಸಾಂಸ್ಕೃತಿಕ ವೈವಿಧ್ಯ ಸಮಾವೇಶ – ಪೂರ್ವಭಾವಿ ಸಭೆ

Spread the love

ಮಂಗಳೂರು: ನಮ್ಮ ನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿಹಿಡಿಯುವತ್ತ, ವರ್ತಮಾನದ ತಲ್ಲಣಗಳಿಗೆ ಎದುರಾಗುವ ಪ್ರಯತ್ನವಾಗಿ ಕರ್ನಾಟಕ ಕೋಮುಸೌಹಾರ್ದ ವೇದಿಕೆಯು ಗಾಂಧಿಹತ್ಯೆಯಾದ ದಿನವಾದ ಜನವರಿ 30 ರಂದು ‘ಸಹಬಾಳ್ವೆ ಸಾಗರ’ ಎಂಬ ಬೃಹತ್ ಸಾಂಸ್ಕೃತಿಕ – ವೈವಿಧ್ಯ ರಾಷ್ಟ್ರೀಯ ಸಮಾವೇಶವನ್ನು ಮಂಗಳೂರಿನ ಟೌನ್‍ಹಾಲ್‍ನಲ್ಲಿ ಆಯೋಜಿಸಿದೆ. ಅಂದು ರಾಜ್ಯದ ಎಲ್ಲ ದಿಕ್ಕುಗಳಿಂದಲೂ ಹರಿದು ಬರುವ ನದಿ ಜನ ಜಾಥಾಗಳು ಮಂಗಳೂರಿನಲ್ಲಿ ಸಂಗಮಗೊಳ್ಳಲಿವೆ. ಸೂಫಿ, ವಚನ, ಯಕ್ಷಗಾನ, ಬ್ಯಾರಿ ದಫ್‍ ಹಾಡುಗಳು, ಧಾರ್ಮಿಕ ಸಹಬಾಳ್ವೆ, ವೈಚಾರಿಕ ವಿಚಾರಧಾರೆಗಳನ್ನು ಕಾರ್ಯಕ್ರಮವು ಒಳಗೊಳ್ಳಲಿದೆ. ಅಸಹಿಷ್ಣುತೆಯ ವಿರುದ್ಧ ಪ್ರಶಸ್ತಿ ಹಿಂತಿರುಗಿಸಿದ ಸಾಹಿತಿಗಳು, ಸಾಹಿತಿಗಳು, ಕಲಾವಿದರು, ಹೋರಾಟಗಾರರು, ರಾಜ್ಯ ಹಾಗೂ ಹೊರ ರಾಜ್ಯಗಳ ಸೌಹಾರ್ದಪ್ರಿಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸದರಿ ಸಮಾವೇಶಕ್ಕೆ ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನಾ ಸಭೆಯು ಇತ್ತೀಚೆಗೆ ಮಂಗಳೂರಲ್ಲಿ ನಡೆದಿದ್ದು, ಗೌರವಾಧ್ಯಕ್ಷರಾಗಿ ಖ್ಯಾತ ರಂಗಕರ್ಮಿ ಶ್ರೀ ಸದಾನಂದ ಸುವರ್ಣ, ಅಧ್ಯಕ್ಷರಾಗಿ ಖ್ಯಾತ ವೈದ್ಯರೂ ಪ್ರಗತಿಪರ ಚಿಂತಕರೂ ಆಗಿರುವ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಪ್ರಧಾನ ಕಾರ್ಯದರ್ಶಿಯಾಗಿ ಉಮರ್ ಯು ಎಚ್ ಮತ್ತು ಕೋಶಾಧಿಕಾರಿಯಾಗಿ ಸುರೇಶ್ ಭಟ್ ಬಾಕ್ರಬೈಲ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶ್ರೀಗಳಾದ ಸದಾನಂದ ಸುವರ್ಣ, ಕರ್ನಾಟಕ ಕೋಮುಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಲ್ ಅಶೋಕ್, ವೇದಿಕೆಯ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರಾದ ಸುರೇಶಭಟ್ ಬಾಕ್ರಬೈಲ್ ಮತ್ತಿತರರು ಉಪಸ್ಥಿತರಿದ್ದರು.


Spread the love