ಮಂಗಳೂರು: ಹಿಂದೂ ಸಂಘಟನೆಯ ಕಾರ್ಯಕರ್ತಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ ನಾಲ್ಕು ಪ್ರಮುಖ ಆರೋಪಿಗಳ ಬಂಧನ

ಮಂಗಳೂರು:  ಮೂಡಬಿದ್ರಿ ಸಮಾಜ ಮಂದಿರದ ಬಳಿಯಲ್ಲಿ ಪ್ರಶಾಂತ್ ಪೂಜಾರಿ ಕೊಲೆ ನಡೆಸಿದ ಆರೋಪಿಗಳ ಪೈಕಿ ಪ್ರಮುಖ 4 ಮಂದಿಯನ್ನು ಬಂಧಿಸಲು ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಈ ಕುರಿತು ಸುದ್ದಿಗೊಷ್ಟಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಪೋಲಿಸ್ ಕಮೀಷನರ್ ಮುರುಗನ್ ಆರೋಪಿಗಳನ್ನು ಮೊಹಮ್ಮದ್ ಶರೀಫ್, ಪ್ರಾಯ(42), ತೋಡಾರು, ಮಂಗಳೂರು ತಾಲೂಕು, ಮುಸ್ತಾಫ ಕಾವೂರು, ಪ್ರಾಯ(28), ಮೊಹಮ್ಮದ್ ಮುಸ್ತಾಫ, ಪ್ರಾಯ(25), ಬಜ್ಪೆ, ಮಂಗಳೂರು, ಕಬೀರ್, ಪ್ರಾಯ(28 ಕೈಕಂಬ, ಮಂಗಳೂರು ಎಂದು ಗುರುತಿಸಲಾಗಿದೆ.

3-police-theftcase-20151020-002

ಅಕ್ಟೋಬರ್ 9 ರಂದು ಬೆಳಿಗ್ಗೆ 6-30 ಗಂಟೆಗೆ ಪ್ರಶಾಂತ್ ಪೂಜಾರಿಯು ತಾನು ಕೆಲಸ ಮಾಡುವ ಮೂಡಬಿದ್ರಿಗೆ ಬಂದು ಸಮಾಜ ಮಂದಿರ ಕಟ್ಟಡದ ಮೇಲಿನ ಅಂತಸ್ತಿನಿಂದ ಹೂವನ್ನು ತೆಗೆದುಕೊಂಡು ಮೆಟ್ಟಿಲಿನಿಂದ ಇಳಿದು ಅಂಗಡಿಗೆ ಕಡೆಗೆ ಬರುತ್ತಿದ್ದಾಗ 3 ಮೋಟಾರ್ ಸೈಕಲ್ ನಲ್ಲಿ ಬಂದ 6 ಮಂದಿ ಯುವಕರ ಪೈಕಿ  3 ಮಂದಿ ಕೈಯಲ್ಲಿ ತಲವಾರು ಹಿಡಿದುಕೊಂಡು ಉಳಿದ 3 ಮಂದಿ ಮೋಟಾರು ಬೈಕ್ ನ್ನು ಚಾಲೂ ಸ್ಥಿತಿಯಲ್ಲಿಟ್ಟುಕೊಂಡಿದ್ದು, ತಲವಾರು ಹಿಡಿದುಕೊಂಡ 3 ಮಂದಿ ಯುವಕರು ಹೂವಿನ ಅಂಗಡಿ ಬಳಿಯಲ್ಲಿದ್ದ ಪ್ರಶಾಂತ್ ಪೂಜಾರಿಗೆ ಯದ್ವಾತದ್ವಾ ತಲವಾರಿನಿಂದ ಕಡಿದು ಅವರು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದು, ಗಂಭೀರ ಗಾಯಗೊಂಡ ಪ್ರಶಾಂತ್ ಪೂಜಾರಿಯನ್ನು ಆಟೋ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ಕೊಂಡು ಹೋದ ಸಮಯ ಗಂಭೀರ ಗಾಯಗೊಂಡ ಪ್ರಶಾಂತ್ ಪೂಜಾರಿಯು ಮೃತಪಟ್ಟಿದ್ದನು.

ಈ ಕೊಲೆ ಪ್ರಕರಣವನ್ನು ಭೇದಿಸಲು ಮಂಗಳೂರು ನಗರ ಅಪರಾಧ ಪತ್ತೆ ವಿಭಾಗ (ಸಿಸಿಬಿ) ಹಾಗೂ ಮಂಗಳೂರು ನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿನ 10 ಅಧಿಕಾರಿಗಳನ್ನೊಳಗೊಂಡಂತೆ ವಿವಿಧ ತಂಡಗಳನ್ನು ರಚಿಸಲಾಗಿತ್ತು. ಈ ಪೈಕಿ ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಮೊಹಮ್ಮದ್ ಹನೀಫ್ ಮತ್ತು ಆರೋಪಿಗಳಿಗೆ ಕೊಲೆ ಕೃತ್ಯಕ್ಕೆ ಸಹಕರಿಸಿದ ಇತರ 3 ಮಂದಿಯನ್ನು ಅಕ್ಟೋಬರ್ 18 ರಂದು ಬಂಧಿಸಲಾಗಿತ್ತು. ಇವರು ನೀಡಿದ ಮಾಹಿತಿಯಂತೆ ಈ ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಪ್ರಮುಖ 4 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುತ್ತಾರೆ.

ಆರೋಪಿಗಳನ್ನು ಕೂಲಂಕುಶವಾಗಿ ವಿಚಾರಿಸಿದಾಗ  ಹಿಂದೆ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಹಂಡೇಲು ಸುತ್ತು ಎಂಬಲ್ಲಿ ದಿನಾಂಕ: 20-09-2015 ರಂದು ಬೆಳಿಗ್ಗೆ ಸುಮಾರು 9-00 ಗಂಟೆಗೆ ಅಶೋಕ ಮತ್ತು ವಾಸು ಎಂಬವರಿಗೆ 3 ಬೈಕ್ ನಲ್ಲಿ ಬಂದು ತಲವಾರಿನಿಂದ ಅವರಿಗೆ ಕಡಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ  ಭಾಗಿಯಾದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಈ ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳ ಮಾಹಿತಿ ದೊರೆತಿದ್ದು, ಅವರ ಪತ್ತೆ ಕಾರ್ಯ ಜ್ಯಾರಿಯಲ್ಲಿದೆ.

ಅಲ್ಲದೇ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ ಬಳಿಯ ಹುಣಸೆಕಟ್ಟೆ ಎಂಬಲ್ಲಿ ದಿನಾಂಕ: 03-10-2015 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಬೈಕ್ ನಲ್ಲಿ ಹೋಗುತ್ತಿದ್ದ ಜಯ ಕೋಟ್ಯಾನ್ ಎಂಬವರಿಗೆ 3 ಬೈಕ್ ನಲ್ಲಿ ಇತರ ಆರೋಪಿಗಳ ಜೊತೆ ಬಂದು ತಲವಾರಿನಿಂದ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಒಪ್ಪಿಕೊಂಡಿರುತ್ತಾರೆ.

ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಒಟ್ಟು 8 ಮಂದಿಯನ್ನು ದಸ್ತಗಿರಿ ಮಾಡಲಾಗಿದ್ದು,  ದಸ್ತಗಿರಿ ಮಾಡಲಾದ ಆರೋಪಿಗಳಿಂದ  ಈ ಕೊಲೆ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳ ಸಂಪೂರ್ಣ ಮಾಹಿತಿ ದೊರೆತಿದ್ದು, ಭಾಗಿಯಾದ ಹಾಗೂ ಆರೋಪಿಗಳಿಗೆ ಸಹಕರಿಸಿದವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಪೊಲೀಸ್ ಕಮೀಷನರ್ ಶ್ರೀ.ಎಸ್.ಮುರುಗನ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಶ್ರೀ.-ಕೆ.ಎಂ. ಶಾಂತರಾಜು,   ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕ ಸೇರಿದಂತೆ ವಿಶೇಷ ತಂಡದ ಅಧಿಕಾರಿಗಳು  ಹಾಗೂ ಸಿಬ್ಬಂದಿಗಳು  ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Leave a Reply

Please enter your comment!
Please enter your name here