ಮಂಗಳೂರು: ಹೋಟೆಲ್ ಬಿಲ್ ಪಾವತಿಸದೆ 4.77 ಲಕ್ಷ ರೂ. ವಂಚನೆ: ದೂರು

Spread the love

ಮಂಗಳೂರು: ಸುಮಾರು 2 ತಿಂಗಳಿನಿಂದ ಹೋಟೆಲ್‌ನಲ್ಲಿ ರೂಂ ಪಡೆದು ವಾಸ್ತವ್ಯ ಹೂಡಿದ್ದ ಆರೋಪಿಯೋರ್ವ ಹೋಟೆಲ್‌ಗೆ 4,77,644 ರೂ. ಬಾಕಿ ಇರಿಸಿದ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿ ಕೆನೆಲ್‌ ಮರಿಯೊ ಎಂಬಾತ ನಗರದ ಗೇಟ್‌ ವೇ ಹೋಟೆಲ್‌ಗೆ ಕರೆ ಮಾಡಿ ಮೇ 23ರಿಂದ 5 ದಿನಗಳ ಕಾಲ ಕೊಠಡಿಯನ್ನು ಕಾಯ್ದಿರಿಸಿದ್ದ. ಕೆನೆಲ್‌ ಹೋಟೆಲ್‌ನ ಪರಿಚಯಸ್ಥ ಗ್ರಾಹಕನಾಗಿದ್ದರಿಂದ ಹೋಟೆಲ್‌ನ ವ್ಯವಸ್ಥಾಪಕ ಮುಹಮ್ಮದ್‌ ಇರ್ಷಾದ್‌ ಎಂಬವರು ಆರೋಪಿಯಿಂದ ಮುಂಗಡ ಹಣವನ್ನು ಪಡೆದುಕೊಂಡಿರಲಿಲ್ಲ. ಮೇ 23ರಿಂದ ವಾಸ್ತವ್ಯ ಮಾಡಿಕೊಂಡಿದ್ದ ಕೆನೆಲ್‌ 28ರಂದು ಚೆಕ್‌ಔಟ್‌ ಮಾಡದೆ, ಇನ್ನೂ ಒಂದು ವಾರಗಳ ಕಾಲ ಕೊಠಡಿಯನ್ನು ಕಾಯ್ದಿರಿಸುವಂತೆ ವಿನಂತಿ ಮಾಡಿದ್ದ. ಮುಂಗಡ ಹಣ ಕೇಳಿದಾಗ ಮುಂದಿನ ತಿಂಗಳ ಜೂ. 1ರಂದು ಪಾವತಿಸುವುದಾಗಿ ತಿಳಿಸಿದ್ದ. ಅದರಂತೆ ಜೂನ್‌ 1ರಂದು ಒಂದು ಲಕ್ಷ ರೂ. ಪಾವತಿ ಮಾಡಿದ್ದ ಎನ್ನಲಾಗಿದೆ.

ಬಳಿಕ ಆರೋಪಿ ವಾಸ್ತವ್ಯ ಮುಂದುವರಿಸಿ ಜುಲೈ 1ರಂದು 3.40 ಲಕ್ಷ ರೂ.ನ ಚೆಕ್‌ನ್ನು ನೀಡಿದ್ದ. ಹೋಟೆಲ್‌ ಸಿಬ್ಬಂದಿ ಆರೋಪಿ ನೀಡಿದ್ದ ಚೆಕ್‌ನ್ನು ಬ್ಯಾಂಕಿಗೆ ಹಾಕಿದಾಗ ಖಾತೆಯಲ್ಲಿ ಹಣವಿಲ್ಲದೆ ಚೆಕ್‌ ಬೌನ್ಸ್‌ ಆಗಿತ್ತು. ಈ ಬಗ್ಗೆ ಆರೋಪಿಯನ್ನು ಕೇಳಿದಾಗ ಜುಲೈ 17ರಂದು ಹೋಟೆಲ್‌ನಲ್ಲಿದ್ದ ತನ್ನ ಸೊತ್ತುಗಳನ್ನು ತೆಗೆದುಕೊಂಡು ಹೋಗಿ ಹಣ ಹೊಂದಾಣಿಕೆಯಾಗಿದ್ದು, ತರಲು ಹೋಗುತ್ತಿರುವುದಾಗಿ ಹೋಟೆಲ್‌ನವರನ್ನು ನಂಬಿಸಿ ಆಟೋದಲ್ಲಿ ತೆರಳಿದ್ದು ಅನಂತರ ಆತ ವಾಪಸಾಗಿರುವುದಿಲ್ಲ ಎಂದು ಮುಹಮ್ಮದ್‌ ಇರ್ಷಾದ್‌ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೇ 23ರಿಂದ ಜುಲೈ 17ರವರೆಗೆ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಕೆನೆಲ್‌ ಒಂದು ಲಕ್ಷ ರೂ. ಪಾವತಿಸಿ, 4,77,644 ರೂ.ಬಾಕಿ ಇರಿಸಿಕೊಂಡಿದ್ದಾನೆ ಎಂದು ಇರ್ಷಾದ್‌ ದೂರಿದ್ದಾರೆ.


Spread the love