ಮಂಜೇಶ್ವರ : ಹೊಸಂಗಡಿ: ರಸ್ತೆ ಅಪಘಾತಕ್ಕೆ ದಂಪತಿ ಬಲಿ; ಐವರು ಗಂಭೀರ ಗಾಯ

ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ 66ರ ಹೊಸಂಗಡಿ ಬಳಿಯ ವಾಮಂಜೂರು ಚೆಕ್‌ಪೋಸ್ಟ್ ಬಳಿ ರವಿವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ದಂಪತಿ ಮೃತಪಟ್ಟು, ಜೊತೆಗಿದ್ದ ಐವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಆಲ್ಟೋ ಕಾರು ವಾಮಂಜೂರು ಚೆಕ್‌ಪೋಸ್ಟ್ ಬಳಿ ನಿಂತಿದ್ದ ಟ್ಯಾಂಕರ್‌ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದ್ದು, ಕಾರು ಪ್ರಯಾಣಿಕರಾದ ಬಂದ್ಯೋಡು ಹೇರೂರು ನಿವಾಸಿ ಉಮೇಶ್(65), ಅವರ ಪತ್ನಿ ಶಾರದಾ(62) ಮೃತಪಟ್ಟವರಾಗಿದ್ದಾರೆ. ಕಾರಿನಲ್ಲಿದ್ದ ಸಹ ಪ್ರಯಾಣಿಕರಾದ ಶೋಭಾ(19), ಸಂಗೀತಾ (6), ಮನ್ವಿತಾ(3), ಚಿದಾನಂದ ಹಾಗೂ ಪಾರ್ವತಿ ಎಂಬವರು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಮೇಶ್ ದಂಪತಿಯು ಕುಟುಂಬದ ಐವರು ಸದಸ್ಯರೊಂದಿಗೆ ಮಂಗಳೂರು ಕಡೆಯಿಂದ ಬಂದ್ಯೋಡು ಕಡೆಗೆ ಆಲ್ಟೋ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಆಲ್ಟೋ ಕಾರು ವಾಮಂಜೂರು ಚೆಕ್‌ಪೋಸ್ಟ್ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ತಪಾಸಣೆಗಾಗಿ ನಿಲ್ಲಿಸಿದ್ದ ಟ್ಯಾಂಕರ್‌ಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಶಾರದಾ ಸ್ಥಳದಲ್ಲೇ ಮೃತರಾದರೆ, ಉಮೇಶ್ ಆಸ್ಪತ್ರೆಯಲ್ಲಿ ಮೃತರಾದರು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

Leave a Reply