ಮತದಾರರ ಜಾಗೃತಿ ಕಾರ್ಯಕ್ರಮ ತೀವ್ರಗೊಳಿಸಲು ಸಿ.ಇ.ಓ ಸೂಚನೆ  

Spread the love

ಮತದಾರರ ಜಾಗೃತಿ ಕಾರ್ಯಕ್ರಮ ತೀವ್ರಗೊಳಿಸಲು ಸಿ.ಇ.ಓ ಸೂಚನೆ  

ಮಂಗಳೂರು :ಈ ಬಾರಿ ಚುನಾವಣೆಯಲ್ಲಿ ಅತ್ಯಧಿಕ ಮತದಾನವಾಗಲು ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಎಲ್ಲಾ ಇಲಾಖೆಗಳು ತೀವ್ರಗೊಳಿಸಬೇಕು ಎಂದು ದ.ಕ ಜಿಲ್ಲಾಪಂಚಾಯತ್ ಸಿಇಓ ಡಾ: ಎಂ.ಆರ್. ರವಿ ಕರೆ ನೀಡಿದ್ದಾರೆ.

ಅವರು ಬುಧವಾರ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ತಳಮಟ್ಟದವರೆಗೂ ತಲುಪಬೇಕು. ಈ ಬಾರಿಯ ಚುನಾವಣೆ “ಒಳಗೊಳ್ಳುವಿಕೆ, ಸುಗಮ ಮತ್ತು ನೈತಿಕ ಚುನಾವಣೆ” ಎಂಬ ಧ್ಯೇಯವಾಕ್ಯದಲ್ಲಿ ನಡೆಯಲಿದೆ. ಮಹಿಳೆಯರು, ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸ್ವೀಪ್ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಲು ಅವರು ಸೂಚಿಸಿದರು.

ಯುವಕ/ಯುವತಿ ಮಂಡಲಗಳು, ಮೀನುಗಾರಿಕಾ ಸಂಘಗಳು, ಹಾಲು ಉತ್ಪಾದಕರ ಸಂಘ, ಬೀಡಿಕಾರ್ಮಿಕರು ಸೇರಿದಂತೆ ಸಮಾಜದ ವಿವಿಧ ವರ್ಗಗಳಲ್ಲಿ ಆಯಾ ಸಂಬಂಧಪಟ್ಟ ಇಲಾಖೆಗಳು ಜಾಗೃತಿ ಕಾರ್ಯಕ್ರಮ ನಡೆಸಬೇಕು. ವಿವಿಧ ಕ್ಷೇತ್ರಗಳ ಖ್ಯಾತನಾಮರ ಸಂದೇಶಗಳನ್ನು ಧ್ವನಿಮುದ್ರಿಕೆ ಮಾಡಿ ಪ್ರಚಾರ ಮಾಡಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತರ ಗಣೇಶ್ ಅರಳಿಕಟ್ಟೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಡಿಡಿಪಿಐ ಶಿವರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಜಿಲ್ಲಾ ಸ್ವೀಪ್ ಸಮಿತಿ ಕಾರ್ಯದರ್ಶಿ ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.


Spread the love