ಮಲೆಕುಡಿಯರ ಕಾಲನಿಗಳಿಗೆ ಸರ್ವ ಸೌಕರ್ಯ: ಜಿಲ್ಲಾಧಿಕಾರಿ ಸೂಚನೆ

ಮಂಗಳೂರು:  ಮಲೆಕುಡಿಯ ಜನಾಂಗದ ಅಭಿವೃದ್ಧಿಗೆ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕಾಲನಿಗಳನ್ನು ಗುರುತಿಸಿ ಅಲ್ಲಿ ಸಕಲ ರೀತಿಯ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.

dc ಮ

 ಅವರು ಇಂದು ತಮ್ಮ ಕಚೇರಿಯಲ್ಲಿ  ಮಲೆಕುಡಿಯ ಜನಾಂಗದವರ ವಿಶೇಷ ಅಭಿವೃದ್ಧಿ ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 4 ಹಾಗೂ ಉಳಿದ ತಾಲೂಕುಗಳಲ್ಲಿ ತಲಾ ಒಂದೊಂದು ಮಲೆಕುಡಿಯ ಜನಾಂಗದವರು ನೆಲೆಸಿರುವ ಕಾಲನಿಗಳನ್ನು ಗುರುತಿಸಿ, ಕಾರ್ಯಪ್ರವೃತ್ತರಾಗುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ದ.ಕ. ಜಿಲ್ಲೆಯಲ್ಲಿ 1589 ಮಲೆಕುಡಿಯ ಕುಟುಂಬಗಳಿದ್ದು, ಸುಮಾರು 7764 ಜನಸಂಖ್ಯೆ ಇದೆ. ಬುಡಕಟ್ಟು ಜನಾಂಗದಲ್ಲಿಯೇ ಅತ್ಯಂತ ಹಿಂದುಳಿದಿರುವ ಮಲೆಕುಡಿಯ ಜನಾಂಗದವರಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸಲು ರಾಜ್ಯ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದಕ್ಕಾಗಿ 2.27 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಇವುಗಳಲ್ಲಿ ಪ್ರತಿಯೊಂದು ಮನೆಗಳ ದುರಸ್ತಿಗೆ ರೂ. 25 ಸಾವಿರದಂತೆ 100 ಮನೆಗಳ ದುರಸ್ತಿಗೆ 25 ಲಕ್ಷ, ರಸ್ತೆ ಅಭಿವೃದ್ಧಿ ಮತ್ತು ಕಿರುಸೇತುವೆ ನಿರ್ಮಾಣಕ್ಕೆ 1.17 ಕೋಟಿ ರೂ., ಕುಡಿಯುವ ನೀರು ಯೋಜನೆಗೆ 20 ಲಕ್ಷ ರೂ., 2 ಸಮುದಾಯ ಭವನ ನಿರ್ಮಾಣಕ್ಕೆ 40 ಲಕ್ಷ ರೂ. ಹಾಗೂ ಸ್ವಯಂ ಉದ್ಯೋಗ ಯೋಜನೆಯಡಿ 10 ಫಲಾನುಭವಿಗಳಿಗೆ ಸಹಾಯಧನ ಮೂಲಕ ಪ್ರವಾಸಿ ಕಾರು ನೀಡಲು 25 ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಲೆಕುಡಿಯ ಜನಾಂಗದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಇದ್ದರೂ, ಫಲಾನುಭವಿಗಳು ಮುಂದೆ ಬರುತ್ತಿಲ್ಲ. ಇದರಿಂದ ಅನುದಾನ ಖರ್ಚಾಗದೆ ಉಳಿಯುತ್ತಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಎ.ಬಿ. ಇಬ್ರಾಹಿಂ ಸೂಚಿಸಿದರು.

ಬುಡಕಟ್ಟು ಜನಾಂಗದ ಸಂಸ್ಕøತಿಯನ್ನು ಅರಿತುಕೊಂಡು, ಯೋಜನೆಗಳನ್ನು ರೂಪಿಸುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಬ್ಬಾಸ್, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಸೋಮಪ್ಪ ನಾಯ್ಕ್, ವ್ಯವಸ್ಥಾಪಕ ಹೇಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here