ಮಾದಕ ವಸ್ತು ನಿಯಂತ್ರಣ: ಶಾಲಾ ಕಾಲೇಜುಗಳಲ್ಲಿ ನೋಡಲ್ ಶಿಕ್ಷಕರ ನೇಮಕಕ್ಕೆ ಡಿಸಿ ಸೂಚನೆ

ಮಾದಕ ವಸ್ತು ನಿಯಂತ್ರಣ: ಶಾಲಾ ಕಾಲೇಜುಗಳಲ್ಲಿ ನೋಡಲ್ ಶಿಕ್ಷಕರ ನೇಮಕಕ್ಕೆ ಡಿಸಿ ಸೂಚನೆ

ಮ0ಗಳೂರು ; ವಿದ್ಯಾರ್ಥಿಗಳನ್ನೇ ಗುರಿಯಾಗಿರಿಸಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಮಾರಾಟ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಅಲ್ಲಿನ ಶಿಕ್ಷಕರೊಬ್ಬರನ್ನು ಇಂತಹ ಚಟುವಟಿಕೆಗಳ ಮೇಲೆ ನಿಗಾ ಇಡಲು ನೋಡಲ್ ಆಗಿ ನೇಮಿಸಲು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ಸೂಚಿಸಿದ್ದಾರೆ.

ಅವರು ಬುಧವಾರ ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಮಾದಕ ವಸ್ತು ಸೇವನೆ ನಿಷೇಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೈಕ್ಷಣಿಕವಾಗಿ ಮುಂದುವರಿದು ಅತ್ಯುತ್ತಮ ವಿದ್ಯಾಸಂಸ್ಥೆಗಳಿರುವ ದ.ಕ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿರುವುದು ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ನುರಿತ ಶಿಕ್ಷಕರೊಬ್ಬರನ್ನು ನೇಮಿಸಿ, ವಿದ್ಯಾರ್ಥಿಗಳಲ್ಲಿ ಹಾಗೂ ತಮ್ಮ ಸಂಸ್ಥೆಯ ಪರಿಸರದಲ್ಲಿ ಮಾದಕ ವಸ್ತುಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಸೂಚಿಸುವಂತೆ ಅವರು ತಿಳಿಸಿದರು. ಈ ಶಿಕ್ಷಕರು ಪ್ರತೀ ತಿಂಗಳು ವರದಿ ಸಲ್ಲಿಸಬೇಕು. ಈ ವರದಿಯನ್ನು ಸ್ಥಳೀಯ ಪೊಲೀಸ್ ಠಾಣೆಗೂ ಕಳುಹಿಸಿ, ಸೂಕ್ತ ಕ್ರಮ ಜರುಗಿಸುವಂತೆ ಅವರು ನಿರ್ದೇಶಿಸಿದರು.

ಮಾದಕವಸ್ತುಗಳ ಚಟಕ್ಕೆ ಬಿದ್ದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಅದರಿಂದ ಹೊರಗೆ ತರಲು ತ್ವರಿತವಾಗಿ ಮುಂದಾಗಬೇಕು ಎಂದು ಡಾ.ಕೆ.ಜಿ. ಜಗದೀಶ ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ ಜಂಟೀ ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಈ ಸಂಬಂಧ ತಮ್ಮ ವ್ಯಾಪ್ತಿಯಲ್ಲಿ ಕೂಡಲೇ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು.

ಸಾಮೂಹಿಕ ವಿವಾಹ- ನೋಂದಣಿ ಕಡ್ಡಾಯ: ಇದೇ ಸಂದರ್ಭದಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಸಮನ್ವಯ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಸಾಮೂಹಿಕ ವಿವಾಹಗಳು ನಡೆಯುವ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕರ ವಿವಾಹವಾಗದಂತೆ ತೀವ್ರ ನಿಗ ವಹಿಸಬೇಕು. ಅಲ್ಲದೇ, ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಸಂಘಟಕರು, ಆ ಉದ್ದೇಶಕ್ಕಾಗಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ ಎಂದು ಹೇಳಿದರು.

ಬಾಲ್ಯ ವಿವಾಹ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಬೇಕು. ಆಹ್ವಾನ ಪತ್ರಿಕೆ ಮುದ್ರಿಸುವ ಪ್ರಿಂಟಿಂಗ್ ಪ್ರೆಸ್‍ಗಳು, ಮದುವೆ ಕಲ್ಯಾಣ ಮಂಟಪ, ಸಮುದಾಯಭವನಗಳು ವಧೂವರರ ವಯಸ್ಸು ಖಚಿತಪಡಿಸಿದ ನಂತರವೇ ಮುಂದುವರಿಯಬೇಕು ಎಂದು ಡಾ.ಕೆ.ಜಿ. ಜಗದೀಶ ತಿಳಿಸಿದರು.

ಅಂಗನವಾಡಿಗಳಿಗೆ ಜಮೀನು: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳು, ಸ್ವಂತ ಕಟ್ಟಡವಿಲ್ಲದ ಅಂಗನವಾಡಿಗಳಿಗೆ ಆದ್ಯತೆಯಲ್ಲಿ ಜಮೀನು ಒದಗಿಸಲು ಎಲ್ಲಾ ತಹಶೀಲ್ದಾರ್‍ಗಳಿಗೆ ಸೂಚಿಸಲಾಗುವುದು. ಆಮೀನು ಲಭ್ಯವಿದ್ದಲ್ಲಿ 30 ಸೆಂಟ್ಸ್‍ವರೆಗೂ ಜಮೀನು ಒದಗಿಸಲಾಗುವುದು. ಅಂಗನವಾಡಿಗಳಲ್ಲಿ ಹೊರಾಂಗಣ ಆಟದ ಉಯ್ಯಾಲೆ, ಜಾರುಬಂಡಿಯಂತಹ ಸಾಮಾಗ್ರಿಗಳನ್ನು ಒದಗಿಸಲು ಪರಿಶೀಲಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಿಖೇಶ್ ಶೆಟ್ಟಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್.ಉಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here