ಮುಂಬಯಿ, ಜ.03: ಪೇಜಾವರ ಮಠದ ಶಿಲಾಮಯ ಮಂದಿರ ಸೇವಾರ್ಪಣೆ

Spread the love

ಮುಂಬಯಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠ ಇದರ ಮುಂಬಯಿ ಶಾಖೆ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಅಲ್ಲಿರುವ ಶ್ರೀ ಪೇಜಾವರ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಮಂದಿರದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವ ದಿನಾಂಕ 02.01.2016ನೇ ಶನಿವಾರ ಮತ್ತು 03.01.2016ನೇ ಆದಿತ್ಯವಾರ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಅದ್ದೂರಿಯಿಂದ ಆಚರಿಸಲಾಗುವುದು.

ಆ ಪ್ರಯುಕ್ತ ಮಠದಲ್ಲಿ ಶನಿವಾರ ಬೆಳಿಗ್ಗೆ 8.00 ಗಂಟೆಯಿಂದ ವಿಷ್ಣುಯಾಗ, ಪವಮಾನ ಹೋಮ, ಕೂಷ್ಮಂಡ ಹೋಮ, ತಿಲ ಹೋಮ, ಮೃತ್ಯುಂಜಯ ಹೋಮ, ಸಂಜೆ 4.00 ಗಂಟೆಗೆ ಚಕ್ರಾಬ್ಜ ಮಂಡಲ ಪೂಜೆ, 4.10 ಗಂಟೆಯಿಂದ ಸೊನಟಾ ಸಿಂಫೆÇೀನೀಸ್ ಬಳಗದ ವಿಶ್ವನಾಥ್ ಶೆಟ್ಟಿ ಕಾಪು ಸಾರಥ್ಯದಲ್ಲಿ ಭಜನಾ ಸಂಧ್ಯಾ ಕಾರ್ಯಕ್ರಮ, 4.30 ಗಂಟೆಯಿಂದ ಬಿಲ್ಲವರ ಭವನದಿಂದ ಶ್ರೀ ಕೃಷ್ಣ ದೇವರ ಭವ್ಯ ಮೆರವಣಿಗೆ, 7.00 ಗಂಟೆಗೆ ಮಹಾರಾಷ್ಟ್ರ ಸರಕಾರದ ನಿವೇಶನ ಮತ್ತು ಕಾರ್ಮಿಕ ಸಚಿವ ಪ್ರಕಾಶ್ ಮೆಹ್ತಾ ಹಾಗೂ ಮಾಜಿ ಸಚಿವ ಹರ್ಷವರ್ಧನ್ ಪಾಟೀಲ್ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ಮತ್ತು ಡಿ.ಪಿ ಅನಂತ ಬೆಂಗಳೂರು ಮತ್ತು ಕಲಾಜಗತ್ತು ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರಿಗೆ ಸನ್ಮಾನ ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು.
ಭಾನುವಾರ ಮುಂಜಾನೆ 5.30 ಗಂಟೆಯಿಂದ 9.00 ಗಂಟೆ ವರೇಗೆ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಶುಭಹಸ್ತದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ, ಪ್ರತಿಷ್ಠೆ, ಅಷ್ಠಬಂಧ, ಪ್ರಸಾದ ವಿತರಣೆ, 9.30 ಗಂಟೆಯಿಂದ ತುಳಸೀ ಆರ್ಚನೆ, ಮಧ್ಯಾಹ್ನ 12.00 ಗಂಟೆಗೆ ಮಹಾ ಪ್ರಸಾದ ಬಳಿಕ ಅನ್ನಸಂತಾರ್ಪಣೆ ಜರುಗಲಿದೆ.

ಶ್ರೀ ದೇವಿ ಶಿಲ್ಪಕಲಾ ಕಾರ್ಕಳ ಇದರ ಎನ್.ನಾರಾಯಣ ಮೇಸ್ತ್ರಿ ನೇತೃತ್ವದಲ್ಲಿ ಶಿಲಾಮಯ ಮಂದಿರವು ತಾಮ್ರ ಕಲಶ, ಬೆಳ್ಳಿ ಕಲಶ, ಶಿಲಾನ್ಯಾಸ ಎಸೆ (ತಲಣ್‍ಕಲ್ಲು), ಆದಿಸ್ಥಾನ (ಪುದುಕ, ಜಗತಿ, ಕುಮುದಾ), ಆತ್ಯಾತ್ಮ ಮಂದಿರ (ಗರ್ಭಗುಡಿ), ಕರ್ಣ ಮಂಚಿಗೆ, ಮೂರ್ತಿ ಮತ್ತು ಪಾನಿ ಪೇಟಾ, ದ್ವಾರಬಂದ ಕಲ್ಲು, ಬೆಳ್ಳಿ ಕವಚ, ಮರದ ಮುಖ್ಯ ದ್ವಾರ ಇತ್ಯಾದಿ ಕಾಮಗಾರಿಗಳಿಂದ ಪೂರ್ಣಗೊಂಡಿದ್ದು, ಯತಿವರ್ಯರು ಆಗಮಿಸಿ ಸದ್ಭಕ್ತರಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಲಿರುವರು. ಮಹಾನಗರದಲ್ಲಿನ ಭಕ್ತಮಹಾಶಯರೆಲ್ಲರೂ ಈ ಪುಣ್ಯಾಧಿ ಉತ್ಸವದಲ್ಲಿ ಪಾಲ್ಗೊಂಡು ತನು-ಮನ-ಧನಗಳಿಂದ ಸಹಕರಿಸಿ, ಶ್ರೀಕೃಷ್ಣ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥರು, ಪದಾಧಿಕಾರಿಗಳು ಹಾಗೂ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಆಡಳಿತಾಧಿಕಾರಿಗಳಾದ ರಾಮದಾಸ ಉಪಾಧ್ಯಾಯ, ಪ್ರಕಾಶ್ ಆಚಾರ್ಯ ರಾಮಕುಂಜ, ನಿರಂಜನ್ ಗೋಗ್ಟೆ, ಶ್ರೀಹರಿ ಭಟ್ ಹಾಗೂ ಪುರೋಹಿತ ವರ್ಗವು ಈ ಮೂಲಕ ವಿನಂತಿಸಿದ್ದಾರೆ.


Spread the love