ಮ0ಗಳೂರು : ಚುನಾವಣಾ ಕರ್ತವ್ಯ ತಪ್ಪಿಸಿದರೆ ಶಿಸ್ತುಕ್ರಮ: ಡಿಸಿ ಎಚ್ಚರಿಕೆ

ಮ0ಗಳೂರು : ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಸಿಬ್ಬಂದಿಗಳಿಗೆ ಯಾವುದೇ ರೀತಿಯಲ್ಲಿ ಕರ್ತವ್ಯದಿಂದ ವಿನಾಯಿತಿ ನೀಡಲಾಗದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

 ಅವರು ಶನಿವಾರ ಸಂಜೆ ಚುನಾವಣೆ ಸಿದ್ಧತೆಗಳ ಬಗ್ಗೆ ತಮ್ಮ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ಚುನಾವಣೆಯ ಕರ್ತವ್ಯಕ್ಕೆ ನಿಯೋಜಿತರಾದ ಸಿಬ್ಬಂದಿಗಳಿಂದ ವಿನಾಯಿತಿ ಕೋರಿ ಭಾರೀ ಸಂಖ್ಯೆಯಲ್ಲಿ ಮನವಿಗಳು ಬರುತ್ತಿವೆ. ಯಾವುದೇ ನೈಜ ಕಾರಣಗಳಿಲ್ಲದೇ ಹಾಗೂ ಪೂರಕ ವೈದ್ಯಕೀಯ ದಾಖಲೆಗಳಿಲ್ಲದೆ ಆರೋಗ್ಯದ ನೆಪವೊಡ್ಡಿ ಚುನಾವಣಾ ಕರ್ತವ್ಯ ವಿನಾಯಿತಿ ನೀಡುವಂತೆ ಸರಕಾರಿ ನೌಕರರಿಂದ ಮನವಿಗಳು ಬರುತ್ತಿವೆ. ಸಮರ್ಪಕ ವೈದ್ಯಕೀಯ ಕಾರಣಗಳಿದ್ದರೆ, ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಖುದ್ದಾಗಿ ಬಂದು ಮನವಿ ನೀಡಬೇಕು, ನೈಜ ಪ್ರಕರಣಗಳನ್ನು ಪರಿಶೀಲಿಸಬಹುದು. ಆದರೆ, ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಆದೇಶವಾಗಿರುವ ಸಿಬ್ಬಂದಿಗಳು  ಕುಂಟುನೆಪವೊಡ್ಡಿ ಚುನಾವಣಾ ಕರ್ತವ್ಯದಿಂದ ಹಿಂಜರಿಯಲು ಯತ್ನಿಸಿದರೆ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

 ಚುನಾವಣಾ ಕರ್ತವ್ಯದಿಂದ ಕೈಬಿಡಲು ಕೋರಿ ಸಿಬ್ಬಂದಿಗಳು ಸಲ್ಲಿಸಿರುವ ಮನವಿಗಳನ್ನು ಸ್ವೀಕರಿಸಿರುವುದಕ್ಕೆ ತಹಶೀಲ್ದಾರ್‍ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಯಾವುದೇ ಕಾರಣಕ್ಕೂ  ಇಂತಹ ಮನವಿಗಳನ್ನು ಸ್ವೀಕರಿಸದಂತೆ ಮತ್ತು ಪುರಸ್ಕರಿಸದಂತೆ ಸೂಚಿಸಿದರು.

 ಚುನಾವಣೆಯ ಸೆಕ್ಟರ್ ಅಧಿಕಾರಿಗಳಿಗೆ ಫೆ.11ರಂದು ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಫೆಬ್ರವರಿ 13ರಂದು ತರಬೇತಿ ನಡೆಯಲಿದೆ. ಶೇಕಡಾ 25ರಷ್ಟು ಮತಗಟ್ಟೆಗಳ ವೀಡಿಯೋ ಚಿತ್ರೀಕರಣ ನಡೆಸಲಾಗುವುದು. ಚುನಾವಣೆಯಲ್ಲಿ ಮತದಾರರ ಬಲಗೈ ಹೆಬ್ಬೆರಳಿಗೆ ಶಾಯಿ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.

  ಚುನಾವಣೆಯ ಹೊಸ್ತಿಲಲ್ಲಿ ಜಿಲ್ಲೆಯ ಕೆಲವೆಡೆ ಮತದಾನ ಬಹಿಷ್ಕಾರದ ವರದಿಗಳು ಬರುತ್ತಿದ್ದು, ಈ ಬಗ್ಗೆ ತಹಶೀಲ್ದಾರ್‍ಗಳು ಕೂಡಲೇ ಅಲ್ಲಿಗೆ ಭೇಟಿ ನೀಡಿ, ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ತಾಲೂಕು ಚುನಾವಣಾಧಿಕಾರಿಗಳು, ತಹಶೀಲ್ದಾರ್‍ಗಳು ಉಪಸ್ಥಿತರಿದ್ದರು.

  ಮದ್ಯ ಮಾರಾಟ ಇಲ್ಲ

  ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಫೆ. 20 ರಂದು ಮತದಾನ ಹಾಗೂ 23 ರಂದು ಮತ ಎಣಿಕೆ ಕಾರ್ಯವು ನಡೆಯಲಿದ್ದು, ಫೆ. 19 ರ ಬೆಳಿಗ್ಗೆ 7 ಗಂಟೆಯಿಂದ ಫೆ.20 ರ ಮಧ್ಯರಾತ್ರಿಯವರೆಗೆ ಹಾಗೂ ಫೆ. 22ರ ರಾತ್ರಿ 10 ಗಂಟೆಯಿಂದ ಫೆ.23ರ ಮಧ್ಯರಾತ್ರಿಯವರೆಗೆ  ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನೊಳಗೊಂಡಂತೆ ಪೂರ್ಣ ಜಿಲ್ಲಾ ವ್ಯಾಪ್ತಿಗೆ ಪಾನ ನಿರೋಧ ದಿನವೆಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿ ಎ.ಬಿ. ಇಬ್ರಾಹಿಂ ಆದೇಶಿಸಿದ್ದಾರೆ.

      ಈ ದಿನಗಳಲ್ಲಿ ಮಧ್ಯದಂಗಡಿಗಳನ್ನು ಮತ್ತು ಇನ್ನುಳಿದ ಯಾವುದೇ ವಿಧದ ಮಧ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚಲು ಆದೇಶಿಸಿರುತ್ತಾರೆ.

Leave a Reply