ಮ0ಗಳೂರು : ದ.ಕ: ಎಸ್‍ಎಸ್‍ಎಲ್‍ಸಿ-33851, ದ್ವಿತೀಯ ಪಿಯುಸಿ-34760 ವಿದ್ಯಾರ್ಥಿಗಳು

ಮ0ಗಳೂರು : ಪ್ರಸಕ್ತ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ 33851 ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗೆ 34760 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

puc-exam-mangalorean-20150312-008

ಅವರು ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ವರ್ಷದ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ಸಿದ್ಧತೆಗಳ ಪರಿಶೀಲನೆ ನಡೆಸಲು ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರ, ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ, ಪರೀಕ್ಷಾ ಪದ್ಧತಿಯು ಉತ್ತಮ ರೀತಿಯಲ್ಲಿದೆ. ಯಾವುದೇ ವಾಮಮಾರ್ಗವಿಲ್ಲದೇ, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿ, ಪ್ರಾಮಾಣಿಕರಾಗಿ ಪರೀಕ್ಷೆ ಬರೆಯುವ ಸಂಪ್ರದಾಯ ಹಿಂದಿನಿಂದಲೇ ಇದೆ. ಶಿಕ್ಷಕರೂ ಇದಕ್ಕೆ ಪೂರಕವಾಗಿ ಸಹಕರಿಸುತ್ತಿದ್ದಾರೆ. ಪರೀಕ್ಷಾ ಪದ್ಧತಿಯು ಉತ್ತಮ ಹೆಸರು ಪಡೆದಿದೆ. ಈ ಕೀರ್ತಿಯನ್ನು ಉಳಿಸಿಕೊಂಡು ಹೋಗುವಂತೆ ಅವರು ಕರೆ ನೀಡಿದರು.
ಎಸ್‍ಎಸ್‍ಎಲ್‍ಸಿ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೋ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ 496 ಶಾಲೆಗಳ 33851 ವಿದ್ಯಾರ್ಥಿಗಳು 103 ಪರೀಕ್ಷಾ ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಬರೆಯಲಿದ್ದಾರೆ. ಇವರಲ್ಲಿ 17672 ಗಂಡುಮಕ್ಕಳು ಹಾಗೂ 16171 ಹೆಣ್ಣುಮಕ್ಕಳು ಒಳಗೊಂಡಿದ್ದಾರೆ ಎಂದರು. ಪರೀಕ್ಷೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಸೌಕರ್ಯ, ಪ್ರಶ್ನೆಪತ್ರಿಕೆಗಳನ್ನು ರವಾನಿಸಲು ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ, ಜಿಲ್ಲಾ ಮಟಟ್ದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಮೇಲುಸ್ತುವಾರಿಗೆ ನೇಮಿಸಲಾಗುವುದು ಎಂದು ಅವರು ಹೇಳಿದರು.
ದ್ವಿತೀಯ ಪಿಯುಸಿ: ಪದವಿಪೂರ್ವ ಶಿಕ್ಷಣ ಉಪನಿರ್ದೇಶಕ ತಿಮ್ಮಯ್ಯ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 34760 ವಿದ್ಯಾರ್ಥಿಗಳು 52 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 17352 ಹುಡುಗರು ಹಾಗೂ 17408 ಹುಡುಗಿಯರಿದ್ದಾರೆ. ಕಲಾ ವಿಭಾಗದಲ್ಲಿ 5882, ವಾಣಿಜ್ಯ ವಿಭಾಗದಲ್ಲಿ 15767 ಹಾಗೂ ವಿಜ್ಞಾನ ವಿಭಾಗದಲ್ಲಿ 13111 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ 31363 ಪ್ರಥಮ ಬಾರಿಗೆ, 1077 ವಿದ್ಯಾರ್ಥಿಗಳು ಪುನರಾವರ್ತಿತ ಹಾಗೂ 2320 ಮಂದಿ ಖಾಸಗಿಯಾಗಿ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉಪನಿರ್ದೇಶಕರ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ.( ದೂರವಾಣಿ ಸಂಖ್ಯೆ 0824-2425100 ಹಾಗೂ 2426100) ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಕುಮಾರ್, ಹೆಚ್ಚುವರಿ ಎಸ್‍ಪಿ ವಿ. ಶಾಂತಕುಮಾರ್ ಮತ್ತಿತರರು ಇದ್ದರು.

Leave a Reply

Please enter your comment!
Please enter your name here