ಮ0ಗಳೂರು: ಮೆಲ್ಕಾರ್-ತೊಕ್ಕೊಟು ರಸ್ತೆ: 500 ಮೀ ಚತುಷ್ಪಥ- ಸಚಿವ ರೈ

ಮ0ಗಳೂರು ;- ಮೆಲ್ಕಾರ್ ತೊಕ್ಕೊಟು ರಸ್ತೆಯಲ್ಲಿ ಮೆಲ್ಕಾರ್‍ನಿಂದ ಮೊದಲ 500 ಮೀಟರ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಅವರು ಸೋಮವಾರ ಮೆಲ್ಕಾರ್‍ನಲ್ಲಿ ನಡೆದ ಮೆಲ್ಕಾರ್ ಜಂಕ್ಷನ್ ಅಭಿವೃದ್ಧಿ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಸ್ಥಳೀಯ ನಾಗರೀಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಈ ರಸ್ತೆಯ ಅಭಿವೃದ್ಧಿಗೆ ಈಗಾಗಲೇ ರಾಜ್ಯ ಸರಕಾರ 2 ಕೋಟಿ ರೂ. ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಜನವರಿ 5ರಂದು ಕಾಮಗಾರಿಗೆ ಶಿಲಾನ್ಯಾಸ ಮಾಡಲಾಗುವುದು. ಮೆಲ್ಕಾರ್‍ನಿಂದ ಮಾರ್ನಬೈಲ್ ಜಂಕ್ಷನ್‍ವರೆಗೆ ರಸ್ತೆ ಅಗಲೀಕರಣವಾಗಲಿದ್ದು, 500 ಮೀಟರ್ ಚತುಷ್ಫಥ ನಂತರ 1.5 ಕಿಮೀ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಹಾಸನ-ಬಿ.ಸಿ.ರೋಡ್ ವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮುಂದಿನ ದಿನಗಳಲ್ಲಿ ಚತುಷ್ಪತಗೊಳಿಸಲಿದ್ದು, ಅದುವರೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲಿದೆ. ಈಗಾಗಲೇ ಅಗಲೀಕರಣಗೊಂಡಿರುವ ಹೆದ್ದಾರಿಗೆ ಶೀಘ್ರವೇ ಡಾಂಬರೀಕರಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರದವರು ಕೂಡಲೇ ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯ ಪರಿಮಿತಿಯನ್ನು ಗುರುತು ಮಾಡಬೇಕು. ರಸ್ತೆಯಲ್ಲಿರುವ ವಿದ್ಯುತ್ ಕಂಬಗಳನ್ನು ಹಾಗೂ ದೂರವಾಣಿ ಕೇಬಲ್‍ಗಳನ್ನು ಸಂಬಂಧಪಟ್ಟ ಇಲಾಖೆಯವರು ಸ್ಥಳಾಂತರಿಸಬೇಕು ಎಂದು ಸೂಚಿಸಿದ ಅವರು, ಮೆಲ್ಕಾರ್ ಜಂಕ್ಷನ್ ಅಭಿವೃದ್ಧಿಗೆ ಎಲ್ಲಾ ಇಲಾಖೆಯವರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಚಿವರು ಹೇಳಿದರು.
ಮೆಲ್ಕಾರ್‍ನಲ್ಲಿ ಎರಡು ಬಸ್‍ತಂಗುದಾಣಗಳನ್ನು ಹಾಗೂ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗುವುದು. ಬಸ್ ನಿಲ್ಲಲು ಪ್ರತ್ಯೇಕ ಬೇ ನಿರ್ಮಾಣವಾಗಲಿದೆ. ರಿಕ್ಷಾ ಪಾರ್ಕಿಂಗ್ ಸಮರ್ಪಕಗೊಳಿಸಲಾಗುವುದು. ಇಲ್ಲಿನ ಸಂಚಾರ ಸಮಸ್ಯೆಗೆ ಪ್ರಮುಖ ಕಾರಣವಾಗಿರುವ ಬಸ್‍ಗಳ ಅಡ್ಡಾದಿಡ್ಡಿ ನಿಲುಗಡೆಯ ನಿಯಂತ್ರಣಕ್ಕೆ ಕೂಡಲೇ ಕ್ರಮಕೈಗೊಳ್ಳಲು ಸಚಿವ ರಮಾನಾಥ ರೈ ಅವರು ಆರ್‍ಟಿಓ ಮತ್ತು ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಇಂದಿನ ಸಭೆಯಲ್ಲಿ ಆಗಿರುವ ನಿರ್ಧಾರಗಳ ಮೇಲುಸ್ತುವಾರಿಯನ್ನು ಜಿಲ್ಲಾಧಿಕಾರಿಗಳು ಆಗಿಂದಾಗ್ಗೆ ಪರಿಶೀಲಿಸಲಿದ್ದಾರೆ. ಮೆಲ್ಕಾರ್ ಜಂಕ್ಷನ್‍ನಲ್ಲಿ ಪ್ರಸಕ್ತ ಕಾಮಗಾರಿಗಳಿಂದ ಉಂಟಾಗಿರುವ ಧೂಳಿನ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಅಭಿವೃದ್ಧಿ ಕಾಮಗಾರಿಗಳ ಜಾರಿಯ ಸಂದರ್ಭದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವುದು ಸಹಜ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಸಚಿವರು ಕೋರಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಉಪವಿಭಾಗಾಧಿಕಾರಿ ಡಾ.ಅಶೋಕ್, ಪಿಡಬ್ಲ್ಯುಡಿ ಅಧೀಕ್ಷಕ ಅಭಿಯಂತರ ಕಾಂತರಾಜು, ತಹಶೀಲ್ದಾರ್ ಪುರಂದರ ಮತ್ತಿತರರು ಇದ್ದರು.

Leave a Reply