ಮಂಗಳೂರು: ಸಾಮಾಜಿಕ ನ್ಯಾಯದ ಗುರಿ ಸಾಧಿಸಿ ಮಾನವೀಯ ಸಮಾಜ ನಿರ್ಮಿಸೋಣ: ಗಣೇಶ್

ಮ0ಗಳೂರು:  ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬರು ಕಾನೂನು ಪಾಲಿಸಿ ಉತ್ತಮ ನಾಗರಿಕರಾಗಿ ಬಾಳಿ ಸಾಮಾಜಿಕ ನ್ಯಾಯದ ಗುರಿ ಸಾಧನೆಗೆ ಸಹಕರಿಸಿ ಮಾನವೀಯ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಅಗತ್ಯವೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಗಣೇಶ್ ಅವರು ತಿಳಿಸಿದರು.

ಅವರು ಮಂಗಳೂರು ತಾಲ್ಲೂಕು ಮೂಡುಶೆಡ್ಡೆ ಗ್ರಾ.ಪಂ ವ್ಯಾಪ್ತಿಯ ಎದುರುಪದವು ಗ್ರಾಮಾಭಿವೃದ್ಧಿ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ ಮತ್ತು ಜನ ಶಿಕ್ಷಣ ಟ್ರಸ್ಟ್ ಇವುಗಳ ಸಹಭಾಗಿತ್ವದಲ್ಲಿ ನಡೆದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲಾ ರೀತಿಯ ಶೋಷಣೆ, ಅಸಮಾನತೆ, ತಾರತಮ್ಯಗಳನ್ನು ಅಳಿಸಿ ಸರ್ವರಿಗೂ ಸಮಬಾಳು ಮತ್ತು ಸಮಾನತೆಗಾಗಿ ಸಂವಿಧಾನದ ಆಶಯದಂತೆ ರೂಪಿತವಾಗಿರುವ ಕಾನೂನುಗಳ ಅರಿವು ಪಡೆದುಕೊಳ್ಳಬೇಕು. ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ, ಪೋಕ್ಸೋ, ಬಾಲಾಪರಾಧಿ ತಡೆ ಕಾಯಿದೆ ಇತ್ಯಾದಿ ಜನಪರ ಕಾನೂನುಗಳನ್ನು ಬಳಸಿಕೊಂಡು ದೌರ್ಜನ್ಯ ಮುಕ್ತ ಮಾನವೀಯ ಸಮಾಜ ನಿರ್ಮಾಣ ಕಾರ್ಯಕ್ಕೆ ವಿಶ್ವ ಸಾಮಾಜಿಕ  ನ್ಯಾಯ ದಿನಾಚರಣೆಯು ಪ್ರೇರಣೆಯಾಗಲಿ ಎಂದು ಆಶಿಸಿದರು.

ಪ್ರತಿ ಕುಟುಂಬ ಸದಸ್ಯರ ಹಕ್ಕು, ಹಿತರಕ್ಷಣೆಯೊಂದಿಗೆ ಸಮಾನತೆ ಮತ್ತು ನ್ಯಾಯಯುತವಾಗಿ ಬದುಕುವ ಮನೋಬಾವ ಬೆಳೆಸಲು ಮತ್ತು ಸಾಮಾಜಿಕ ನ್ಯಾಯದ ಗುರಿ ಸಾಧನೆಗೆ ಕಾನೂನು ಅರಿವು ಅಭಿಯಾನ ಆರಂಭಿಸುವುದು ಅಗತ್ಯವೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾತ್ಮಗಾಂಧಿ ನರೇಗಾದ ಮಾಜಿ ಒಂಬುಡ್ಸ್‍ಮೆನ್ ಶೀನ ಶೆಟ್ಟಿ ತಿಳಿಸಿದರು.

 ಇದೇ ಸಂದರ್ಭದಲ್ಲಿ ಅವರು ಸಂಪೂರ್ಣ ಸ್ವಚ್ಛ, ಸಾಮಾಜಿಕ ನ್ಯಾಯಯುತ ಗ್ರಾಮ ನಿರ್ಮಾಣದ ಕುರಿತು ಪ್ರತಿಜ್ಞಾವಿಧಿ ಭೋಧಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ಧ ಮಂಗಳೂರು ವಕೀಲರ ಸಂಘದ ಕಾರ್ಯದರ್ಶಿ ಎಚ್. ವಿ. ರಾಘವೇಂದ್ರ ನಾಗರಿಕರು ಕಾನೂನಿನ ಅರಿವು ಪಡೆದು ಕಾನೂನು ಪಾಲಿಸಿ ಬದುಕಲು ಯತ್ನಿಸಿದಾಗ ಮಾನವೀಯ ಸಮಾಜ ನಿರ್ಮಾಣ ಸಾಧ್ಯವೆಂದರು. ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಾಕ್ಷರತೆ ಅಭಿಯಾನದಿಂದ ಅರಿವು ಪಡೆದು ಆದರ್ಶ ಸಂಸಾರ ನಡೆಸುತ್ತಿರುವ ಪಾತುಂಞ ಮತ್ತು ಮಹಮ್ಮದ್‍ರವರು  ಸ್ವಅನುಭವದ ಪ್ರೇರಣಾ ಮಾತುಗಳನ್ನಾಡಿದರು.

Leave a Reply