ಯುವಜನತೆಯನ್ನು ಸಂಘಟಿಸಲು ಅಂಬೇಡ್ಕರ್- ನೆಹರು ಅಧ್ಯಯನ ಕಮ್ಮಟ

ಯುವಜನತೆಯನ್ನು ಸಂಘಟಿಸಲು ಅಂಬೇಡ್ಕರ್- ನೆಹರು ಅಧ್ಯಯನ ಕಮ್ಮಟ

ಮಂಗಳೂರು: ಹೊಸ ಚಿಂತನೆ, ಹೊಸದಿಕ್ಕು, ಹೊಸ ಶಕ್ತಿಯ ಧ್ಯೇಯ ವಾಕ್ಯದಡಿಯಲ್ಲಿ ನಗರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಪ್ರತಿನಿಧಿಗಳ ಸಮಾವೇಶದಲ್ಲಿ ಕರಾವಳಿ ಕರ್ನಾಟಕದಲ್ಲಿ ವ್ಯಾಪಕವಾಗಿ ಅಭಿವ್ಯಾಕ್ತಗೊಳ್ಳುತ್ತಿರುವ ಸಾಂಸ್ಕೃತಿಕ ಪ್ರಕ್ಷುಬ್ದತೆ, ಸಾಮಾಜಿಕ ಅಭದ್ರತೆ ಹಾಗೂ ಮತೀಯ ದ್ವೇಷ ರಾಜಕಾರಣವನ್ನು ಸಮರ್ಥವಾಗಿ ಎದುರಿಸಲು ವೈಚಾರಿಕವಾಗಿ ಯುವಜನತೆಯನ್ನು ಸಂಘಟಿಸಲು ಅಂಬೇಡ್ಕರ್- ನೆಹರು ಅಧ್ಯಯನ ಕಮ್ಮಟ {ಅನೆಕ}ದ ರಚನೆಯನ್ನು ವಿದ್ಯುಕ್ತವಾಗಿ ಘೋಷಿಸಲಾಯಿತು. ಆಧುನಿಕ ಭಾರತವನ್ನು ರೂಪಿಸುವಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಪಂಡಿತ್ ಜವಾಹರ್‍ಲಾಲ್ ನೆಹರು ಅವರ ಕೊಡುಗೆಯನ್ನು ಸಮಾವೇಶದಲ್ಲಿ ಕೊಂಡಾಡಲಾಯಿತು. ಅವರಿಬ್ಬರ ಪ್ರಭಾವ, ಜನಮನದಲ್ಲಿ ಅವರ ಸ್ಥಾನಮಾನ ಮತ್ತು ಸ್ವತಂತ್ರ ಭಾರತದಲ್ಲಿ ಅವರ ಪ್ರಸ್ತುತತೆ ಅವರು ಬದುಕಿದ್ದ ಕಾಲಕ್ಕಿಂತ ಇದು ನೂರ್ಮಡಿಯಾಗಿದೆ.

ಕರಾವಳಿ ಕರ್ನಾಟಕವನ್ನು ಆವರಿಸಿರುವ ಧಾರ್ಮಿಕ ಕಟುಪಂಥದ ರಾಜಕಾರಣವನ್ನು ಅದು ಪ್ರತಿನಿಧಿಸುವ ಮತೀಯ ಬರ್ಬರತೆಯನ್ನು ತಾತ್ವಿಕವಾಗಿ ಪ್ರತಿರೋಧಿಸುವ ಕೆಲಸವನ್ನು ಅಂಬೇಡ್ಕರ್-ನೆಹರು ಅಧ್ಯಯನ್ ಕಮ್ಮಟ{ಅನೆಕ} ಮಾಡಲಿದೆ. ಅಂಬೇಡ್ಕರ್ ಹಾಗೂ ನೆಹರೂರವರ ಚಿಂತನೆಗಳನ್ನು ತನ್ನ ಕ್ರಿಯಾಶೀಲ ಕಾರ್ಯಕ್ರಮಗಳ ಮೂಲಕ ವಿಶೇಷವಾಗಿ ಯುವಜನಾಂಗವನ್ನು ತಲುಪುವ, ಸಂವಾದಿಸುವ, ಚರ್ಚಿಸುವ ಹಾಗು ಉದಾತ್ತ ಮೌಲ್ಯಗಳಿಗೆ ಅವರನ್ನು ನಿರ್ದಿಷ್ಟ ಕ್ರಿಯಾಚರಣೆ ಮೂಲಕ ಪ್ರಚೋದಿಸುವಲ್ಲಿ ಅಧ್ಯಯನ ಕಮ್ಮಟವು ಹೆಚ್ಚಿನ ಪ್ರಯತ್ನ ಮಾಡಲಿದೆ.

ಅಂಬೇಡ್ಕರ್ ಹಾಗೂ ನೆಹರು ಕನಸಿನ ಸಾಂಸ್ಕೃತಿಕ ಘನತೆ, ಪ್ರಜಾತಾಂತ್ರಿಕ ಸಮಾನತಾವಾದಿ, ಧರ್ಮ ಸಹಿಷ್ಣು ಸಮಾಜ ಹಾಗೂ ಸೆಕ್ಯೂಲರ್ ಧೋರಣೆಯ ಭಾರತವನ್ನು ತಳಮಟ್ಟದಿಂದ ಕಟ್ಟುವುದೇ ಈ ಅಧ್ಯಯನ ಕಮ್ಮಟದ ಗುರಿಯಾಗಿದೆ. ಈ ಅಧ್ಯಯನ್ ಕಮ್ಮಟ{ಅನೆಕ}ಕರಾವಳಿ ಕರ್ನಾಟಕ ಸಂಚಾಲಕರಾಗಿ ಬಂಟ್ವಾಳದ ಲ್ಯೂಕ್‍ಮನ್ ಅವರನ್ನು ನೇಮಕ ಮಾಡಲಾಯಿತು. ಸಹ ಸಂಚಾಲಕರಾಗಿ ಮಂಗಳೂರಿನ ಪ್ರೇಮನಾಥ್ ಬಲ್ಲಾಳ್‍ಬಾಗ್, ಆಯ್ಕೆಗೊಂಡರು. ಸಮಿತಿಯ ಕಾರ್ಯಕಾರಿ ಸದಸ್ಯರುಗಳಾಗಿ, ಬಿ. ಪ್ರಹ್ಲಾದ್ ಪುತ್ತೂರು, ಚಂದ್ರಹಾಸ ಕೊಣಾಜೆ, ನಜರ್ ಶಾ ಉಳ್ಳಾಲ ಮತ್ತು ಅಕ್ಬರ್ ಆಲಿ ಬೆಳ್ತಂಗಡಿ ಇವರು ಆಯ್ಕೆಗೊಂಡರು.

Leave a Reply

Please enter your comment!
Please enter your name here