ರಮಝಾನ್ ಆತ್ಮ ಸಂಸ್ಕರಣೆಯ ತಿಂಗಳು

ರಮಝಾನ್ ಆತ್ಮ ಸಂಸ್ಕರಣೆಯ ತಿಂಗಳು

ಸಲೀಮ್ ಬೋಳಂಗಡಿ

ಮುಸ್ಲಿಮರ ಪಾಲಿನ ವಸಂತ ಮಾಸವೆಂದೇ ಬಿಂಬಿತವಾದ ಪವಿತ್ರ ರಮಝಾನ್ ತಿಂಗಳ ಆಗಮನವಾಗಿದೆ. ಈ ತಿಂಗಳು ಆಗಮಿಸಿದಾಗ ಮುಸ್ಲಿಮ್ ಭಕ್ತಾದಿಗಳು ಪುಳಕಿತಗೊಳ್ಳುತ್ತಾರೆ. ಇದು ಪವಿತ್ರ ಕುರ್‍ಆನ್ ಅವತರಿಸಿದ ಮಾಸವಾಗಿದೆ. ಆದ್ದರಿಂದಲೇ ಈ ಮಾಸವು ಪವಿತ್ರವಾಗಿದೆ. ಈ ತಿಂಗಳಲ್ಲಿ ಒಂದು ಪುಣ್ಯಕಾರ್ಯವೆಸಗಿದರೆ ಎಪ್ಪತ್ತು ಪಟ್ಟು ಪುಣ್ಯವನ್ನು ದೇವನು ದಯಪಾಲಿಸುತ್ತಾನೆ. ಆದ್ದರಿಂದಲೇ ಮುಸ್ಲಿಮ್ ಭಕ್ತಾದಿಗಳು ಸುವರ್ಣಾವಕಾಶವನ್ನು ವ್ಯರ್ಥಗೊಳಿಸುವುದಿಲ್ಲ. ಹೆಚ್ಚು ಹೆಚ್ಚು ಸತ್ಕರ್ಮಗಳು ನಮಾಝ್, ದಾನ ಧರ್ಮದಂತಹ ಪುಣ್ಯ ಕರ್ಮಗಳಲ್ಲಿ ತೊಡಗಿಸಿ ಕೊಳ್ಳುತ್ತಾರೆ. ಈ ತಿಂಗಳಲ್ಲಿ ಪ್ರವಾದಿ ಮುಹಮ್ಮದ್‍ರು(ಸ) ಅತ್ಯಂತ ಉದಾರಿಗಳಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಆದ್ದರಿಂದ ಅವರ ಅನುಯಾಯಿಗಳು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಹಗಲು ರಾತ್ರಿಗಳಲ್ಲಿ ದೇವನ ದಾಸ್ಯ ಆರಾಧನೆಗಳಲ್ಲಿ ನಿರತರಾಗುತ್ತಾರೆ.
ರಮಝಾನ್ ಎಂಬುದು ಸಂಸ್ಕರಣೆಯ ಮಾಸವಾಗಿದೆ. ಅಂದರೆ ಹಗಲಿಡೀ ಹಸಿದು ರಾತ್ರಿ ಹೊಟ್ಟೆ ಬಿರಿಯುವಷ್ಟು ತಿನ್ನುವುದು ಉಪವಾಸವಲ್ಲ. ಬಡವನ ಹಸಿವಿನ ಬೇಗೆಯನ್ನು ಸ್ವತಃ ಅನುಭವಿಸುವ ಮಾಸವಾಗಿದೆ. ಮುಂಜಾನೆಯಿಂದ ಮುಸ್ಸಂಜೆಯ ತನಕ ಅನ್ನಾಹಾರ ತೊರೆಯಬೇಕು. ಕೇವಲ ಅನ್ನಾಹಾರ ತೊರೆದರೆ ಸಾಲದು. ತನ್ನ ಚಿತ್ತವನ್ನು ನಿಯಂತ್ರಿಸಿಕೊಳ್ಳಬೇಕು. ಪಾಪಗಳಿಂದ ಸ್ವಯಂ ತಡೆದಿರಿಸಿ ಕೊಳ್ಳಬೇಕು. ಸುಳ್ಳು, ಮೋಸ, ವಂಚನೆಯನ್ನು ತೊರೆಯದೆ ಮಾಡುವ ಉಪವಾಸವು ದೇವನ ಬಳಿ ಸ್ವೀಕೃತವಾಗದು. ಸುಳ್ಳು, ಮೋಸಗಳನ್ನು ತೊರೆಯದೆ ಅನ್ನಾಹಾರಗಳನ್ನು ತೊರೆದ ಉಪವಾಸ ಅಲ್ಲಾಹನಿಗೆ ಅಗತ್ಯವಿಲ್ಲ. ಈ ಮಾಸದ ಉದ್ದೇಶವೇ ಸಂಸ್ಕರಣೆಯಾಗಿದೆ. ಈ ತಿಂಗಳಲ್ಲಿ ಸ್ವಯಂ ನಿಯಂತ್ರಿಸಿ ಕೊಳ್ಳಬೇಕಾಗಿದೆ ಮತ್ತು ಅದನ್ನು ಉಳಿದ ಹನ್ನೊಂದು ತಿಂಗಳಿಗೆ ವಿಸ್ತರಿಸಬೇಕಾಗಿದೆ. ಬಡವನ ಹಸಿವನ್ನು ಅರಿಯಲು ಶ್ರೀಮಂತರಿಗೆ ಈ ತಿಂಗಳು ಸುವರ್ಣಾವಕಾಶವಾಗಿದೆ. ಆ ಮೂಲಕ ಹಸಿವಿನ ಬೇಗೆಯನ್ನು ಅರಿತ ಬಳಿಕ ತನಗೆ ದೇವನು ನೀಡಿದ ಅನುಗ್ರಹಗಳನ್ನು ಸ್ಮರಿಸಿ ಬಡಬಗ್ಗರಿಗೆ ನೆರವಾಗಲು ಹಾತೊರೆಯುತ್ತಾನೆ. ರಮಝಾನ್ ವ್ರತಧಾರಿಯೋರ್ವನಲ್ಲಿ ಯಾರಾದರೂ ಜಗಳಕ್ಕಿಳಿದರೆ ಆತ ನಾನು ಉಪವಾಸಿಗ ಎಂದು ಹೇಳಿ ಅಲ್ಲಿಂದ ನಿರ್ಗಮಿಸಬೇಕು ಎಂದು ಪ್ರವಾದಿವರ್ಯರು(ಸ) ಕಲಿಸಿದ್ದಾರೆ. ಆದ್ದರಿಂದಲೇ ಇದು ತರಬೇತಿಯ ಮಾಸವಾಗಿದೆ. ಕೆಡುಕುಗಳು ಕೈ ಬೀಸಿ ಕರೆಯುತ್ತಿದ್ದರೂ, ಕಾಲು ಕೆರೆದು ಜಗಳಕ್ಕಿಳಿದರೂ ಉದ್ರೇಕಗೊಳ್ಳದೆ ಸಹನೆಯಿಂದಲೇ ಅದರಿಂದ ಪಾರಾಗಲು ಉಪವಾಸಿಗ ಬಯಸುತ್ತಾರೆ. ಹೀಗೆ ರಮಝಾನ್ ಓರ್ವನನ್ನು ಮಾನಸಿಕವಾಗಿ ಶುಚಿಗೊಳಿಸಿದಂತೆ ಆರೋಗ್ಯದ ದೃಷ್ಠಿಯಿಂದಲೂ ಈ ಉಪವಾಸ ವ್ರತ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅಧ್ಯಯನಗಳಿಂದ ತಿಳಿದು ಬರುತ್ತದೆ.

Ramzan-Eid-ul-Fitr-Mubarak-child

ನಿರಂತರವಾಗಿ ತಿನ್ನುತ್ತಾ ಕುಡಿಯುತ್ತಾ ಇರುವವರ ಅಭ್ಯಾಸಗಳನ್ನು ತೊರೆಯಲು ಇದು ಸಕಾಲವಾಗಿದೆ. ಇತರ ತಿಂಗಳಲ್ಲಿ ತಿನ್ನಬಹುದಾದ ಆಹಾರ ಪಾನೀಯಗಳು ಈ ತಿಂಗಳಲ್ಲಿ ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ನಿಷಿದ್ಧವಾಗಿರುತ್ತದೆ. ತನ್ನ ಕಣ್ಣ ಮುಂದೆಯೇ ಆಹಾರ ಖಾದ್ಯಗಳಿದ್ದರೂ ದೇವಭಯದಿಂದ ರಮಝಾನಿನ ಪಾವಿತ್ರ್ಯತೆಯನ್ನು ಉಳಿಸಲು ತನ್ನ ದೇಹೇಚ್ಛೆ ಅಭಿಲಾಷೆಗಳನ್ನು ತೊರೆಯುತ್ತಾನೆ. ಈ ಮೂಲಕ ಹಸಿವಿನ ಅಂತರಾಳವನ್ನು ಆತ ಅರಿಯುತ್ತಾನೆ. ಇಂತಹವರ ಉಪವಾಸ ಫಲಪ್ರದವಾಗಿದೆ. ಧರ್ಮ ಸಮ್ಮತವಾಗಿರುವ ಪತಿ ಪತ್ನಿಯರ ಮಿಲನ ಸಂಬಂಧಕ್ಕೂ ವ್ರತದ ಸಂದರ್ಭದಲ್ಲಿ ತಡೆ ನೀಡಲಾಗಿದೆ. ಅಂದರೆ ಮುಂಜಾನೆಯಿಂದ ಮುಸ್ಸಂಜೆಯ ತನಕ ಆತ ತನ್ನ ಭಾವನೆ ದೇಹೆಚ್ಛೆಗಳನ್ನು ನಿಯಂತ್ರಿಸಿಕೊಳ್ಳಬೇಕಾಗಿದೆ. ಇವೆಲ್ಲವೂ ಮನುಷ್ಯನಲ್ಲಿ ದೇವಭಯವನ್ನು ಬೆಳೆಸಲಿಕ್ಕಾಗಿದೆ. ಪ್ರವಾದಿ ಮುಹಮ್ಮದ್‍ರು(ಸ) ಹೇಳುತ್ತಾರೆ, “ಯಾರು ರಮಝಾನಿನ ಉಪವಾಸವನ್ನು ವಿಶ್ವಾಸ ಹಾಗೂ ಆತ್ಮಾವಲೋಕನದೊಂದಿಗೆ ಆಚರಿಸುತ್ತಾನೋ ಅವನ ಗತ ಪಾಪಗಳು ಕ್ಷಮಿಸಲ್ಪಡುವುದು.”
ಇಂತಹ ಪ್ರತಿಫಲಗಳನ್ನು ಬಯಸಿ ಉಪವಾಸಿಗ ನಿರಂತರ ಒಂದು ತಿಂಗಳ ಕಾಲ ಹದಿಮೂರರಿಂದ ಹದಿನಾಲ್ಕು ಗಂಟೆಗಳ ಕಾಲ ಅನ್ನಾಹಾರಗಳನ್ನು ತೊರೆದು ತನ್ನ ಆತ್ಮವನ್ನು ನಿಯಂತ್ರಣದಲ್ಲಿರಿಸಿ ಉಪವಾಸ ಆಚರಿಸುವನು. ಒಂದು ತಿಂಗಳು ಕಳೆದಾಗ ಆತ ದೇವನಾದೇಶಗಳನ್ನು ಪಾಲಿಸಿದರೆ ಅಪ್ಪಟ ಚಿನ್ನದಂತಹ ವ್ಯಕ್ತಿಯಾಗಿ ಹೊರಬರುತ್ತಾನೆ. ಆದ್ದರಿಂದಲೇ ಇದನ್ನು ಸಂಸ್ಕರಣೆಯ ಮಾಸ ಎಂದು ಕರೆದಿರುವುದು.
ಒಮ್ಮೆ ಪ್ರವಾದಿವರ್ಯರು(ಸ) ಹೇಳಿದರು, “ಎಷ್ಟೋ ಉಪವಾಸಿಗರಿದ್ದಾರೆ. ಅವರಿಗೆ ಹಸಿವು ಬಾಯಾರಿಕೆಯಲ್ಲಿ ಏನೂ ಸಿಗದು. ಎಷ್ಟೋ ರಾತ್ರಿ ನಮಾಝ್ ಮಾಡುವವರಿದ್ದಾರೆ. ಅದರಿಂದ ರಾತ್ರಿ ಜಾಗರಣೆಯಲ್ಲದೆ ಏನೂ ದೊರೆಯದು.” ಆದ್ದರಿಂದ ದುಷ್ಕøತ್ಯಗಳಲ್ಲಿ ಭಾಗಿಯಾಗಿ ಮಾಡುವ ಉಪವಾಸ ಸಿಂಧುವಾಗದು.
ಉಪವಾಸವು ದೇಹೇಚ್ಛೆಯ ಎದುರು ದೇವೇಚ್ಛೆಯ ಹೋರಾಟವಾಗಿದೆ. ಕೆಡುಕಿನಿಂದ ದೂರವಿರುವುದು ಹೇಳಿದಷ್ಟು ಸುಲಭ ವಿಚಾರವಲ್ಲ. ತನ್ನ ಚಿತ್ತ ಮತ್ತು ಆತ್ಮವನ್ನು ನಿಯಂತ್ರಿಸಲು ಉಪವಾಸ ಪ್ರೇರಕವಾಗಿದೆ. ಕೆಡುಕಿನಿಂದ ದೂರ ಸರಿದು ಒಳಿತಿಗೆ ಪ್ರೇರಣೆ ನೀಡುವ ಮಾಸವಾಗಿದೆ. ಆದ್ದರಿಂದ ರಮಝಾನ್ ಕೇವಲ ಹಸಿವು ಬಾಯಾರಿಕೆಯನ್ನು ನಿಯಂತ್ರಿಸುವ ಮಾಸವಲ್ಲ. ಓರ್ವನನ್ನು ಸಂಪೂರ್ಣವಾಗಿ ಸಂಸ್ಕರಿಸುವ ಸಹನೆಯ ಮಾಸವಾಗಿದೆ. ಈ ಮಾಸದಲ್ಲಿ ಮುಸ್ಲಿಮರು ಹೆಚ್ಚಾಗಿ ದಾನ ಧರ್ಮಕ್ಕಾಗಿ ಹಾತೊರೆಯುತ್ತಾರೆ. ಆದ್ದರಿಂದ ಆತ ಸೊತ್ತು ವಿತ್ತಾದಿಗಳನ್ನು ಲೆಕ್ಕ ಮಾಡಿ ಅದರಲ್ಲಿ ಇಂತಿಷ್ಟು ಅಂಶವನ್ನು ಬಡವರು, ಅನಾಥರು, ನಿರ್ಗತಿಕರು, ವಿಧವೆಯರು ಹಾಗೂ ಸಹಾಯ ಯಾಚಿಸುವವರನ್ನು ಹುಡುಕಿ ಅವರಿಗೆ ಹಂಚಲು ಅವರ ಮನೆ ಬಾಗಿಲಿಗೆ ತಲುಪುತ್ತಾನೆ.
ರಮಝಾನ್ ಎಂದರೆ ಬೇಡುವ ತಿಂಗಳಲ್ಲ. ಇಂದು ಸಮಾಜದಲ್ಲಿ ಕಂಡು ಬರುವ ಯಾಚಕರ ಹಾವಳಿ ಇಸ್ಲಾಮ್‍ಗೆ ಅನ್ಯವಾಗಿದೆ. ಅದು ಇಲ್ಲಿನ ಶ್ರೀಮಂತರು ತಮ್ಮ ಕರ್ತವ್ಯದ ನಿಭಾವಣೆಯಲ್ಲಿ ವಿಫಲವಾದ ಕಾರಣದಿಂದಾಗಿದೆ. ಇದು ರಮಝಾನ್‍ನ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದೆ ಎಂದರೂ ತಪ್ಪಾಗಲಾರದು. ಇದು ದೇವನಲ್ಲಿ ಯಾಚಿಸುವ ತಿಂಗಳಾಗಿದೆ. ಮುಸ್ಲಿಮ್ ಸಮುದಾಯದ ಉನ್ನತರೆನಿಸಿ ಕೊಂಡವರು ಈ ಬಗ್ಗೆ ಜಾಗೃತರಾಗುವ ಅಗತ್ಯವಿದೆ. ರಮಝಾನ್ ಎಂದರೆ ಬೇಡುವ ತಿಂಗಳು ಎಂದು ಇತರರು ಭಾವಿಸುವಷ್ಟು ಇದು ವ್ಯಾಪಕವಾಗಿದೆ. ಸಮುದಾಯದ ಕೆಲ ಪ್ರತಿಷ್ಠಿತರ, ಶ್ರೀಮಂತರ ಬೇಜವಾಬ್ಧಾರಿತನದಿಂದಾಗಿ ಈ ಸಮಸ್ಯೆ ತಲೆದೋರಿದೆ. ಆದರೂ ತಮ್ಮ ಸೊತ್ತಿನ ಅಂಕಿಅಂಶವನ್ನು ಲೆಕ್ಕ ಹಾಕಿ ಧರ್ಮ ಸೂಚಿಸಿದನುಸಾರವಾಗಿ ದಾನಧರ್ಮ ನಿರತರಾಗಿರುವವರೂ ಈ ಸಮಾಜದಲ್ಲಿದ್ದಾರೆ. ಅದನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಅದು ತೋರಿಕೆಗೆ ಆಗಿರಬಾರದು. ರಮಝಾನಿನ ಪುಣ್ಯದ ಶ್ರೇಷ್ಟತೆಯನ್ನು ಗಮನದಲ್ಲಿರಿಸಿ ಪ್ರಾಮಾಣಿಕವಾಗಿ ಈ ಪ್ರಯತ್ನ ಮುಸ್ಲಿಮ್ ಸಮಾಜದಲ್ಲಿ ಆಗಬೇಕಾದ ಅನಿವಾರ್ಯತೆ ಖಂಡಿತಾ ಇದೆ. ಈ ನಿಟ್ಟಿನಲ್ಲಿ ಸಮುದಾಯ ಈ ತಿಂಗಳನ್ನು ಸಕಾರಾತ್ಮಕವಾಗಿ ಬಳಸಬೇಕು.
ಈ ತಿಂಗಳಲ್ಲಿ ವ್ರತಧಾರಿಯ ಪ್ರಾರ್ಥನೆಯು ಸ್ವೀಕೃತವಾಗುತ್ತದೆ. ಅವನ ಗತ ಪಾಪಗಳೆಲ್ಲವೂ ಕ್ಷಮಿಸಲ್ಪಡುವುದು. ಬಡವರ, ನಿರ್ಗತಿಕರ ಕಣ್ಣೊರೆಸುವ ಈ ಮಾಸವನ್ನು ಸದುಪಯೋಗ ಪಡಿಸಿಕೊಂಡು ಇದರ ಪಾವಿತ್ರ್ಯತೆ ಉಳಿಸಬೇಕಾದ ಘನ ಜವಾಬ್ದಾರಿಕೆ ಇಲ್ಲಿನ ಮುಸ್ಲಿಮರಿಗಿದೆ. ಓರ್ವ ಮುಸ್ಲಿಮನ ಅಂತರಂಗ ಹಾಗೂ ಬಹಿರಂಗ ಶುದ್ಧಗೊಳಿಸುವ ಪಾವನ ಮಾಸದಲ್ಲಿ ಪ್ರತಿಷ್ಠಿತವಾದ ರಾತ್ರಿಯೊಂದಿದೆ. ಅದನ್ನು ಲೈಲತುಲ್ ಕದ್ರ್ ಎಂದು ಕರೆಯುತ್ತಾರೆ. ಇದು ರಮಝಾನಿನ ಕೊನೆಯ ಹತ್ತರ ಬೆಸ ರಾತ್ರಿಗಳಲ್ಲಿ ಒಂದು ದಿನ ಬರುತ್ತದೆ. ಈ ರಾತ್ರಿಯಲ್ಲಿಯೇ ಕುರ್‍ಆನ್ ಅವತೀರ್ಣಗೊಂಡಿರುತ್ತದೆ ಎಂದು ಇತಿಹಾಸ ಹೇಳುತ್ತದೆ. ಆದ್ದರಿಂದ ಈ ಲೈಲತುಲ್ ಕದ್ರ್ ರಾತ್ರಿಯನ್ನು ಸಾವಿರ ಮಾಸಗಳಿಗಿಂತ ಶ್ರೇಷ್ಟವಾದದ್ದು ಎಂದು ಕುರ್‍ಆನ್ ವರ್ಣಿಸಿದೆ. ಆದ್ದರಿಂದ ಈ ರಾತ್ರಿಗಳಲ್ಲಿ ಮುಸ್ಲಿಮರು ರಾತ್ರಿ ಜಾಗರಣೆಯಲ್ಲಿ ನಿರತರಾಗಿ ದೇವಧ್ಯಾನದಲ್ಲಿ ನಿಬಿಡರಾಗಿರುತ್ತಾರೆ. ಆದ್ದರಿಂದ ರಮಝಾನ್ ತಿಂಗಳು ಎಲ್ಲ ರೀತಿಯಿಂದ ಮುಸ್ಲಿಮರಿಗೆ ಅನುಗ್ರಹೀತ ಹಾಗೂ ಸಂಸ್ಕರಣೆಯ ಮಾಸವಾಗಿದೆ.

Leave a Reply

Please enter your comment!
Please enter your name here