ರಮಝಾನ್ ನಿನಗಿದೋ ಸುಸ್ವಾಗತ

Spread the love

ಸಬೀಹಾ ಫಾತಿಮ, ಪಕ್ಕಲಡ್ಕ, ಮಂಗಳೂರು

ಪವಿತ್ರ ರಮಝಾನ್ ತಿಂಗಳು ಬಂದಿದೆ. ಇದು ಉಪವಾಸದ ತಿಂಗಳು. ಚಂದ್ರಮಾನ ಕ್ಯಾಲೆಂಡರಿನ 9ನೇ ತಿಂಗಳು. ಎಲ್ಲ ಕಾಲಗಳಲ್ಲೂ ಜನರು ಒಂದಲ್ಲೊಂದು ರೀತಿಯಲ್ಲಿ ಉಪವಾಸವನ್ನು ಆಚರಿಸುತ್ತಿದ್ದರು. ಉಪವಾಸವನ್ನು ಆಚರಿಸುವ ಮೂಲಕ ದೇವನ ಸಂಪ್ರೀತಿಯನ್ನು ಗಳಿಸಬಹುದಾಗಿದೆ. ದೇವನು ನನ್ನನ್ನು ಸದಾ ವೀಕ್ಷಿಸುತ್ತಿದ್ದಾನೆ ಎಂಬ ಪ್ರಜ್ಞೆಯನ್ನು ಜೀವಂತವಿರಿಸಬಹುದಾಗಿದೆ.
ಈ ಜಗತ್ತಿಗೊಬ್ಬ ಸೃಷ್ಟಿಕರ್ತನಿದ್ದಾನೆ. ಅವನೇ ಈ ಜಗತ್ತನ್ನು ಅದೊಳಗೊಂಡಿರುವ ಸಕಲ ಚರಾಚರಗಳನ್ನು ಸೃಷ್ಟಿಸಿದ್ದಾನೆ. ಅವನೇ ಒಡೆಯ ಪಾಲಕ ಮಹೋನ್ನತ ಪ್ರಭು ಎಂಬುದು ಎಲ್ಲ ಆಸ್ತಿಕರ ನಂಬಿಕೆಯಾಗಿದೆ. ಅದೇ ರೀತಿಯಲ್ಲಿ ಈ ಜೀವನವೆಂಬುದು ಶಾಶ್ವತವಲ್ಲ ಎಂಬ ಅರಿವು ಕೂಡಾ ಎಲ್ಲರಿಗೂ ಇದೆ. ನಮಗೆ ತಿಳಿದೇ ಇಲ್ಲದಂತಹ ಒಂದು ನಿರ್ಧಿಷ್ಟ ಆಯುಷ್ಯವನ್ನು ಈ ಭೂಮಿಯ ಮೇಲೆ ನಾವು ಕಳೆಯಬೇಕಿದೆ. ಆ ಬಳಿಕ ಮರಣ ಹೊಂದಲಿದ್ದೇವೆ. ಮರಣದ ಬಳಿಕ ದೇವನು ನಮ್ಮನ್ನು ಪುನಃ ಸೃಷ್ಟಿಸುತ್ತಾನೆ. ಈ ಭೂಮಿಯ ಮೇಲೆ ನಾವು ಜೀವಿಸಿದ ರೀತಿಯ ನೀತಿಗಳನ್ನು ಅನುಸರಿಸಿ ಪರಲೋಕದಲ್ಲಿ ಪುರಸ್ಕಾರ ಶಿಕ್ಷೆಗಳು ಸಿಗುತ್ತವೆ. ಈ ನಂಬಿಕೆಯಲ್ಲಿ ಕೆಲವು ವ್ಯತ್ಯಾಸಗಳಿದ್ದರೂ ಎಲ್ಲ ಆಸ್ತಿಕರಲ್ಲೂ ಈ ನಂಬಿಕೆ ಇದ್ದೇ ಇದೆ.

muslim

ನಾವು ದೇವನ ಪುರಸ್ಕಾರವಾದ ಸ್ವರ್ಗವನ್ನು ಗಳಿಸಬೇಕಿದ್ದರೆ ಈ ಭೂಮಿಯ ಮೇಲೆ ಯಾವ ರೀತಿಯ ಜೀವನವನ್ನು ಸಾಗಿಸಬೇಕು? ಅದನ್ನು ತಿಳಿಸಿಕೊಡಬೇಕಾದವರು ಯಾರು ಎಂಬುದು ಎಲ್ಲರನ್ನು ಕಾಡುವ ಪ್ರಶ್ನೆ. ಅದಕ್ಕಾಗಿ ಸೃಷ್ಟಿಕರ್ತನು ಒಂದು ವ್ಯವಸ್ಥೆಯನ್ನು ಮಾಡಿದ್ದಾನೆ. ಅವನ ಗ್ರಂಥ ಮತ್ತು ಪ್ರವಾದಿಗಳ ಮೂಲಕ ಜೀವನದ ಸರಿ-ತಪ್ಪುಗಳನ್ನು ಜನರಿಗೆ ಮನವರಿಕೆ ಮಾಡಿಸುವ ಪ್ರಯತ್ನವನ್ನು ಸೃಷ್ಟಿಕರ್ತನು ಮಾಡಿರುವನು. ಈ ಆದೇಶಗಳನ್ನು ಪಾಲಿಸಿ ಯಾರು ಜೀವಿಸುತ್ತಾರೋ ಅವರು ಈ ಲೋಕದಲ್ಲೂ ಪರಲೋಕದಲ್ಲೂ ನೆಮ್ಮದಿ ಮತ್ತು ಸಂತೋಷದ ಜೀವನವನ್ನು ಸಾಗಿಸಬಲ್ಲರು.
ಪವಿತ್ರ ಕುರ್‍ಆನ್ ಈ ರೀತಿ ಜಗತ್ತಿನ ಸೃಷ್ಟಿಕರ್ತನಿಂದ ಅವತೀರ್ಣವಾದ ಅಂತಿಮ ದೇವವಾಣಿಯಾಗಿದೆ. ಪ್ರವಾದಿ ಮುಹಮ್ಮದರು(ಸ) ಅಂತಿಮ ಪ್ರವಾದಿಯಾಗಿದ್ದಾರೆ. ಈ ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯ ಆಧಾರದಲ್ಲಿ ಜೀವನವನ್ನು ಸುಭದ್ರ ಪಡಿಸಿಕೊಳ್ಳಬೇಕು ಎಂಬುದು ಇಸ್ಲಾಮಿನ ಸಂದೇಶವಾಗಿದೆ.
ಪವಿತ್ರ ಕುರ್‍ಆನ್ ಅವತೀರ್ಣವಾದ ತಿಂಗಳು ರಮಝಾನ್ ಆಗಿರುತ್ತದೆ. ಈ ಮುಂಚೆ ಬಂದ ಗ್ರಂಥಗಳು ಅವತೀರ್ಣವಾದ ತಿಂಗಳು ಕೂಡಾ ಇದುವೇ ಆಗಿರುತ್ತದೆ. ಇದೇ ತಿಂಗಳ ಎರಡು ಅಥವಾ ಮೂರನೇ ದಿನಾಂಕದಂದು ಹ. ಇಬ್ರಾಹೀಮರಿಗೆ(ಅ) ಗ್ರಂಥ ನೀಡಲ್ಪಟ್ಟಿತು. ಹ. ದಾವೂದರಿಗೆ(ಅ) ಇದೇ ತಿಂಗಳ 12 ಅಥವಾ 18ನೇ ದಿನಾಂಕದಂದು ಝಬೂರ್ ನೀಡಲ್ಪಟ್ಟಿತು. ಹ. ಮೂಸಾರಿಗೆ(ಅ) ಇದೇ ತಿಂಗಳ 6ನೇ ದಿನಾಂಕದಂದು ತೌರಾತ್ ಅವತೀರ್ಣವಾಯಿತು. ಹ. ಈಸಾರಿಗೂ(ಅ) ಈ ತಿಂಗಳ 12 ಅಥವಾ 13ನೇ ದಿನ ಇಂಜೀಲ್ ನೀಡಲ್ಪಟ್ಟಿತು. ಈ ಕಾರಣಕ್ಕಾಗಿಯೇ ರಮಝಾನ್ ತಿಂಗಳಿಗೆ ಮಿಕ್ಕೆಲ್ಲ ತಿಂಗಳುಗಳಿಗಿಂತ ಬಹಳ ಶ್ರೇಷ್ಠತೆ ಇದೆ.
ಜಗತ್ತಿನ ಜನರು ಅಜ್ಞಾನಾಂಧಕಾರದಲ್ಲಿ ಅಲೆದಾಡುತ್ತಿದ್ದಾಗ, ಅನೀತಿ-ಅನ್ಯಾಯ, ಕೊಲೆ ದರೋಡೆಗಳೇ ಮನುಷ್ಯನ ಜೀವನವಾದ ಸಂದರ್ಭದಲ್ಲಿ ದೇವನು ಜ್ಞಾನದ ಬೆಳಕಾದ ಪವಿತ್ರ ಕುರ್‍ಆನನ್ನು ಪ್ರವಾದಿ ಮುಹಮ್ಮದರ(ಸ) ಮೂಲಕ ಜಗತ್ತಿನ ಸಕಲ ಜನರ ಮಾರ್ಗದರ್ಶನಕ್ಕಾಗಿ ಅವತೀರ್ಣಗೊಳಿಸಿದನು. ಇದು ಕೇವಲ ಆರಾಧನೆಗಳನ್ನು ಕಲಿಸಲು ಮಾತ್ರ ಬಂದ ಗ್ರಂಥವಲ್ಲ ಬದಲಾಗಿ ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಜೀವನದ ವಿವಿಧ ಹಂತಗಳಲ್ಲಿ ಮನುಷ್ಯನಿಗೆ ಅಗತ್ಯವಾದ ಮಾರ್ಗದರ್ಶನವನ್ನು ಇದರಿಂದ ನೇರವಾಗಿ ಪಡೆಯಬಹುದಾಗಿದೆ. ಆ ಸಾಮಥ್ರ್ಯ ಈ ಗ್ರಂಥಕ್ಕಿದೆ. ಇದು ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜನೀತಿ ಶಾಸ್ತ್ರ, ಮಾನವಿಕಶಾಸ್ತ್ರ, ನ್ಯಾಯಶಾಸ್ತ್ರ ಮುಂತಾಗಿ ಈ ಜಗತ್ತಿನಲ್ಲಿ ಯಾವೆಲ್ಲ ಶಾಸ್ತ್ರ ಸಿದ್ಧಾಂತಗಳಿವೆಯೋ ಅವೆಲ್ಲವುಗಳ ಬಗ್ಗೆಯೂ ನೀತಿ ಸಂಹಿತೆಗಳನ್ನು ಒಳಗೊಂಡಿದೆ. ಈ ಎಲ್ಲ ಕಾರಣಗಳಿಗಾಗಿ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿ ಈ ಗ್ರಂಥವನ್ನೊಮ್ಮೆ ಓದಿ ನೋಡಲೇಬೇಕು. ಇದು ಜಗತ್ತಿನ ಎಲ್ಲ ಜನರ ಮಾರ್ಗದರ್ಶನಕ್ಕಾಗಿ ಬಂದಿದೆ ಎಂದು ಸ್ವತಃ ಈ ಗ್ರಂಥವೇ ಹೇಳುತ್ತದೆ.
ಈ ಕುರ್‍ಆನಿನ ಆದೇಶಗಳಂತೆ ಜೀವನವನ್ನು ಸಾಗಿಸುವ ವ್ಯಕ್ತಿ ಸಚ್ಚಾರಿತ್ರ್ಯವಂತನಾಗುತ್ತಾನೆ. ಜನರೆಲ್ಲರೂ ಅವನನ್ನು ಪ್ರೀತಿಸುತ್ತಾರೆ ದೇವನೂ ಅವನಿಂದ ಸಂಪ್ರೀತನಾಗುತ್ತಾನೆ. ಈ ಜಗತ್ತಿನಲ್ಲಿ ಇದಕ್ಕಿಂತ ದೊಡ್ಡ ಅದೃಷ್ಟ ಬೇರೆ ಇರಲಿಕ್ಕೆ ಸಾಧ್ಯವಿಲ್ಲ. ಇಂದು ಮನುಷ್ಯನ ಬಳಿ ಇರುವ ಕಾರು, ಬಂಗಲೆ, ಹಣ ಐಷಾರಾಮಿ ವಸ್ತುಗಳು ಅವನಿಗೆ ಮಾನಸಿಕ ನೆಮ್ಮದಿಯನ್ನು ಮರೀಚಿಕೆಯಾಗಿಸಿದೆ. ಈ ಗ್ರಂಥವನ್ನನುಸರಿಸಿದ ಜೀವನ ರೀತಿಯಿಂದ ನೆಮ್ಮದಿಯು ದೊರೆಯಬಹುದು. ಕುರ್‍ಆನಿನಂತೆ ಜೀವನವನ್ನು ಸಾಗಿಸಬೇಕಿದ್ದರೆ ಅದಕ್ಕೆ ನಿರಂತರ ತರಬೇತಿಯ ಅಗತ್ಯವಿರುತ್ತದೆ. ಆದುದರಿಂದ ಪ್ರತಿ ವರ್ಷ ಒಂದು ತಿಂಗಳನ್ನು ತರಬೇತಿಯ ತಿಂಗಳಾಗಿ ದೇವನು ನಿಶ್ಚಯಿಸಿದ್ದಾನೆ. ಅದುವೇ ಈ ರಮಝಾನ್ ತಿಂಗಳಾಗಿರುತ್ತದೆ.
ದ್ವಿತೀಯ ಖಲೀಫರಾದ ಹ. ಉಮರ್‍ರವರು(ರ) ರಮಝಾನ್ ತಿಂಗಳ ಉಪವಾಸದಿಂದ ಉಂಟಾಗುವ ತರಬೇತಿಯ ಕುರಿತು ಈ ರೀತಿ ಹೇಳಿರುವರು. “ಮುಳ್ಳುಗಂಟಿಗಳಿಂದ ತುಂಬಿದ ಒಂದು ಪ್ರದೇಶದ ಮೂಲಕ ಹಾದು ಹೋಗುವಾಗ ಮುಳ್ಳುಗಂಟಿಗಳು ನಮ್ಮ ವಸ್ತ್ರ, ದೇಹವನ್ನು ಚುಚ್ಚದಂತೆ ಯಾವ ರೀತಿ ಬಹಳ ಎಚ್ಚರಿಕೆಯಿಂದ ಸಾಗುತ್ತೇವೆಯೋ ಇದುವೇ ತಕ್ವಾ ಅಂದರೆ ದೇವಭಯವಾಗಿದೆ.
ಅಂದರೆ ಈ ಜಗತ್ತಿನಲ್ಲಿ ಅಷ್ಟೊಂದು ಅನೀತಿ, ಭ್ರಷ್ಟಾಚಾರ, ಮದ್ಯಪಾನ, ಜೂಜು ಬಡ್ಡಿ, ಅಶ್ಲಿಲತೆ, ವ್ಯಭಿಚಾರ, ಲಂಚ, ಮಾದಕ ವಸ್ತು ಸೇವನೆ ಮುಂತಾದ ಹತ್ತು ಹಲವು ಕೆಡುಕುಗಳಿವೆ ಇವುಗಳನ್ನು ಎಲ್ಲ ಧವರ್ಿೂಯರೂ ಕೆಡುಕೆಂದು ಒಪ್ಪಿಕೊಳ್ಳುತ್ತಾರೆ. ಈ ಎಲ್ಲ ಕೆಡುಕುಗಳಿಂದ ನಮ್ಮನ್ನು ಸದಾ ರಕ್ಷಿಸಿಕೊಂಡು ದೇವನು ನನ್ನನ್ನು ನೋಡುತ್ತಿದ್ದಾನೆ ಎಂಬ ಪ್ರಜ್ಞೆಯನ್ನು ಸದಾ ಜಾಗೃತವಾಗಿರಿಸಿಕೊಂಡು ಪಾವನ ಜೀವನವನ್ನು ಸಾಗಿಸಬೇಕು. ರಮಝಾನಿನಲ್ಲಿ ಇದಕ್ಕೆ ತರಬೇತಿ ಸಿಗುತ್ತದೆ. ಏಕೆಂದರೆ ರಮಝಾನ್ ತಿಂಗಳು ಪೂರ್ತಿ ಹಗಲಿನ ವೇಳೆ ಆಹಾರ ಪಾನೀಯ, ವಿಷಯಾಸಕ್ತಿಗಳನ್ನು ಪೂರೈಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಸಿವು, ಬಾಯಾರಿಕೆ ಮತ್ತು ಲೈಂಗಿಕ ಬಯಕೆಗಳು ಮನುಷ್ಯ ಪ್ರಕೃತಿಯಾಗಿದೆ. ಅದನ್ನು ಬಹಳ ಹೊತ್ತು ಅದುಮಿಡಲು ಮನುಷ್ಯನಿಗೆ ಕಷ್ಟ ಸಾಧ್ಯ. ಬೇರೆ ತಿಂಗಳಲ್ಲಿ ಧರ್ಮಸಮ್ಮತವಾದ ಈ ಕೆಲಸಗಳನ್ನು ಒಂದು ತಿಂಗಳಲ್ಲಿ ಹಗಲಿನ ಕೆಲವು ಗಂಟೆಗಳ ಕಾಲ ನಿಷೇಧಿಸುವ ಮೂಲಕ ನಮ್ಮಲ್ಲಿ ಆತ್ಮ ನಿಯಂತ್ರಣದ ಶಕ್ತಿಯನ್ನು ಉಪವಾಸ ಬೆಳೆಸುತ್ತದೆ. ಈ ದಿನಗಳಲ್ಲಿ ಜನರ ಕಣ್ಣು ತಪ್ಪಿಸಿ ಆಹಾರ ಪಾನೀಯ ಸೇವಿಸಲು ಸಾಧ್ಯವಿದೆ. ಆದರೆ ದೇವನು ನನ್ನನ್ನು ಸದಾ ನೋಡುತ್ತಿದ್ದಾನೆ ಎಂಬ ಪ್ರಜ್ಞೆ ಅಂತಹ ಕೆಲಸಗಳಿಂದ ನಮ್ಮನ್ನು ತಡೆದು ನಿಲ್ಲಿಸುತ್ತದೆ. `ಈ ದೇವನು ಸದಾ ವೀಕ್ಷಿಸುತ್ತಾನೆ’ ಎಂಬ ಪ್ರಜ್ಞೆ ಉಳಿದ ತಿಂಗಳುಗಳಲ್ಲಿ ಸದಾ ಜಾಗೃತವಾಗಿರುವುದೇ ಈ ತರಬೇತಿಯ ಪರಿಣಾಮವಾಗಿದೆ. ಒಂದು ತಿಂಗಳು ಸಭ್ಯರಾಗಿದ್ದು, ಉಳಿದ ತಿಂಗಳುಗಳಲ್ಲಿ ಅನಾಗರಿಕರಂತೆ ವರ್ತಿಸುವವರು ರಮಝಾನಿನ ಉಪವಾಸದಿಂದ ಯಾವುದೇ ತರಬೇತಿಯನ್ನು ಗಳಿಸಿಲ್ಲವೆಂದೇ ಅರ್ಥ.
ಅದೇ ರೀತಿಯಲ್ಲಿ ಈ ತಿಂಗಳು ಕ್ಷಮೆ, ಸಹನೆ ಮತ್ತು ಸಹಾನುಭೂತಿಯ ತಿಂಗಳಾಗಿದೆ. ಈ ಉದಾತ್ತ ಶಿಕ್ಷಣವನ್ನು ರಮಝಾನ್ ನೀಡುತ್ತದೆ. ಜೀವನದಲ್ಲಿ ಕ್ಷಮೆ ಮತ್ತು ಸಹನೆಗೆ ಬಹಳ ಪ್ರಾಮುಖ್ಯತೆ ಇದೆ. ಸಹನೆ ಮತ್ತು ಕ್ಷಮಿಸುವ ಸ್ವಭಾವದ ಕೊರತೆಯು ಆತ್ಮಹತ್ಯೆಯು ಇಷ್ಟರ ಮಟ್ಟಿಗೆ ವಿಪರೀತವಾಗಿ ಹೆಚ್ಚುತ್ತಿರುವುದರ ಹಿಂದಿರುವ ಪ್ರಧಾನ ಕಾರಣವಾಗಿದೆ. ಜಗತ್ತಿನಾದ್ಯಂತ ಒಪ್ಪೊತ್ತಿನ ಆಹಾರವಿಲ್ಲದೆ ಕಷ್ಟ ಪಡುವ ಜನರಿದ್ದಾರೆ. ಅವರು ಅನುಭವಿಸುತ್ತಿರುವ ಹಸಿವು ಎಷ್ಟು ತೀಕ್ಷ್ಣವಾಗಿರುತ್ತದೆ. ಎಂಬುದು ಕೂಡಾ ಉಪವಾಸಿಗನಿಗೆ ಚೆನ್ನಾಗಿ ಮನವರಿಕೆಯಾಗುತ್ತದೆ. ಇದು ಅವನ ಬಗ್ಗೆ ಅನುಕಂಪ ಮತ್ತು ಅವರ ಹಸಿವನ್ನು ನೀಗಿಸಲು ಸಹಾಯ ಒದಗಿಸಲು ನಮ್ಮನ್ನು ಆಂತರಿಕವಾಗಿ ಪ್ರೇರಣೆ ನೀಡುತ್ತದೆ. ಒಟ್ಟಿನಲ್ಲಿ ಉಪವಾಸ ವೃತವು ಪಾವನ ಜೀವನಕ್ಕೆ ಪ್ರೇರಕವಾಗುವ ವಿಶಿಷ್ಟ ಆರಾಧನೆಯಾಗಿದೆ. ಅದು ದೇಹೇಚ್ಛೆಗಳ ನಿಯಂತ್ರಣಕ್ಕೆ ಶಕ್ತಿ ನೀಡುತ್ತದೆ. ಅಮಿತ ಆಕಾಂಕ್ಷೆಗಳಿಗೆ ಕಡಿವಾಣ ತೊಡಿಸುತ್ತದೆ. ಸಂಯಮ ಶೀಲತೆಯನ್ನು ಘೋಷಿಸುತ್ತದೆ. ಪಂಚೇಂದ್ರಿಯಗಳನ್ನು ನಿಯಂತ್ರಿಸುವ ತರಬೇತಿಯನ್ನು ನೀಡುತ್ತದೆ. ಉಪವಾಸವು ಆತ್ಮೋನ್ನತಿಯನ್ನು ಸಾಧಿಸುವ ಮಹಾ ಸಾಧನವಾಗಿದೆ.

ಈ ಉಪವಾಸವನ್ನು ಆಚರಿಸುವ ಬಗೆ ಹೇಗೆ?
* ರಮಝಾನ್ ತಿಂಗಳ ಬಾಲ ಚಂದಿರ ಕಾಣಿಸಿಕೊಂಡರೆ ರಮಝಾನ್ ಆರಂಭವಾಯಿತೆಂದು ಅರ್ಥ. ಮುಂದಿನ ಒಂದು ತಿಂಗಳು ಹಗಲಿನ ವೇಳೆ ಉಪವಾಸ.
* ಆ ದಿನ ತಡರಾತ್ರಿ ಎದ್ದು `ಸಹರಿ’ ಸೇವಿಸಬೇಕು. ಇದರಿಂದ ಉಪವಾಸವಿರಲು ಸುಲಭವಾಗುತ್ತದೆ. ಅಲ್ಲದೆ ಬಳಲಿಕೆ ಮತ್ತು ಆಲಸ್ಯ ಉಂಟಾಗುವುದಿಲ್ಲ. ಪ್ರವಾದಿಯವರು(ಸ) ಹೇಳಿರುವರು, “ಸಹರಿ ಉಣ್ಣಿರಿ. ಏಕೆಂದರೆ ಸಹರಿಯಲ್ಲಿ ಸಮೃದ್ಧಿ ಇದೆ. ಏನೂ ಸಿಗದಿದ್ದರೆ ನೀರಿನ ಕೆಲವು ಗುಟುಕುಗಳನ್ನಾದರೂ ಕುಡಿಯಿರಿ. ದೇವಚರರು ಸಹರಿ ಉಣ್ಣುವವರ ರಕ್ಷಣೆಗಾಗಿ ಪ್ರಾರ್ಥಿಸುತ್ತಿರುತ್ತಾರೆ.
* ಬೆಳಗಿನ ಆದಾನ್ ಕರೆಯಿಂದ ಆರಂಭಿಸಿ ಮುಸ್ಸಂಜೆಯ ಆದಾನ್ ಕರೆಯ ವರೆಗೆ ಆಹಾರ, ಪಾನೀಯ, ಲೈಂಗಿಕ ಬಯಕೆಗಳನ್ನು ಪೂರೈಸುವುದರಿಂದ ಸಂಪೂರ್ಣ ದೂರವಿರಿ.
* ಮುಸ್ಸಂಜೆಯ ಆದಾನ್ ಕರೆಯೊಂದಿಗೆ ಉಪವಾಸ ತೊರೆಯಿರಿ. ಇದಕ್ಕೆ ಇಫ್ತಾರ್ ಎನ್ನಲಾಗುತ್ತದೆ. ಸೂರ್ಯ ಅಸ್ತಮಿಸಿದ ಬಳಿಕ ಉಪವಾಸ ಪಾರಣೆಗೆ ತಡ ಮಾಡಬಾರದು. ಏಕೆಂದರೆ ಉಪವಾಸದ ನೈಜ ಉದ್ದೇಶವು ಅನುಸರಣೆಯ ಭಾವವನ್ನು ಸೃಷ್ಟಿಸುವುದಾಗಿದೆ. ಹಸಿವು ಬಾಯಾರಿಕೆಯಿಂದಿರುವುದಲ್ಲ.
* ಸಹರಿ ಪಾರಣೆಯ ವೇಳೆ ನಿರ್ದಿಷ್ಟ ಆಹಾರವನ್ನು ಸೇವನೆ ಮಾಡಬೇಕೆಂಬ ನಿಯಮವೇನಿಲ್ಲ. ಆರೋಗ್ಯಕ್ಕೆ ಪೂರಕವಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗೆ ಮಹತ್ವ ನೀಡಬೇಕು.
* ಇತರ ಉಪವಾಸಿಗರಿಗೆ ಪಾರಣೆ ಮಾಡಿಸುವ ಪ್ರಯತ್ನ ಮಾಡಿರಿ. ಇದು ಬಹಳ ಪುಣ್ಯ ಕಾರ್ಯ. ರಮಝಾನಿನಲ್ಲಿ ಒಬ್ಬನ ಉಪವಾಸ ಪಾರಣೆ ಮಾಡಿಸಿದರೆ ಅದರ ಪ್ರತಿಫಲವಾಗಿ ಅಲ್ಲಾಹನು ಅವನ ಪಾಪಗಳನ್ನು ಕ್ಷಮಿಸುವನು. ಅವನನ್ನು ನರಕಾಗ್ನಿಯಿಂದ ವಿಮೋಚನೆಗೊಳಿಸುವನು.


Spread the love