ಶಾಂತಿ ಕದಡುವವರ ವಿರುದ್ದ ಕ್ರಮ ಕೈಗೊಳ್ಳಲು ಮುತಾಲಿಕ್ ಆಗ್ರಹ

Spread the love

ಶಾಂತಿ ಕದಡುವವರ ವಿರುದ್ದ ಕ್ರಮ ಕೈಗೊಳ್ಳುಲು ಮುತಾಲಿಕ್ ಆಗ್ರಹ
ಭಟ್ಕಳ: ಭಟ್ಕಳದಲ್ಲಿ ದೇವರ ಸ್ಥಳಗಳನ್ನೇ ಗುರಿಯಾಗಿಸಿಕೊಂಡು ಪದೇ ಪದೇ ದನದ ಮಾಂಸ ಎಸೆಯುತ್ತಿರುವುದರ ಹಿಂದೆ ಶಾಂತಿ ಕದಡಿ ಗಲಭೆ ನಡೆಸುವ ಹುನ್ನಾರವಿದ್ದು, ಇಂತಹ ಕೃತ್ಯ ಎಸಗುವ ಆರೋಪಿಗಳು ಯಾರೇ ಇದ್ದರೂ ಕೂಡ ಅವರನ್ನು ಪೊಲೀಸರು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು. ಭಟ್ಕಳದಲ್ಲಿ ಖಾಸಗೀ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಭಟ್ಕಳದ ವಿವಿಧ ಕಡೆ ನಾಗಬನದಲ್ಲಿ ದನದ ಮಾಂಸ ಎಸೆದು ಧಾರ್ಮಿಕ ಭಾವನೆಗೆ ದಕ್ಕೆ ತರುವ ಕೃತ್ಯ ನಡೆಯುತ್ತಿದೆ. ಇನ್ನೂ ತನಕ ಯಾವುದೇ ಪ್ರಕರಣದ ಆರೋಪಿಗಳನ್ನೂ ಬಂಧಿಸಿಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದು, ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದೂ ಹೇಳಿದರು.

pramod-muthalik-press-meet-bhatkal

ಮಂಗಳೂರು ಡಿವೈಎಸ್ಪಿ ಗಣಪತಿ ಸಾವು ಆತ್ಮಹತ್ಯೆಯಲ್ಲ. ಅದೊಂದು ಸರಕಾರಿ ಪ್ರಾಯೋಜಿತ ಕೊಲೆಯಾಗಿದೆ. ಗಣಪತಿ ಮೇಲಾಧಿಕಾರಿಗಳು ಹಾಗೂ ಸರಕಾರದ ಒತ್ತಡದಿಂದಲೇ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳು ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆಲ್ಲಾ ಮೂಲ ಕಾರಣ ಮರಳು ಮಾಫಿಯಾ ಮತ್ತು ಸಾರಾಯಿ ದಂಧೆಯಾಗಿದೆ. ಸರಕಾರಕ್ಕೆ ಮಾನ ಮರ್ಯಾದೆ ಇದ್ದಲ್ಲಿ ಗಣಪತಿ ಸಾವು ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಸಚಿವ ಕೆ. ಜೆ. ಜಾರ್ಜ ಅವರನ್ನು ಸಂಪುಟದಿಂದ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ ಅವರು ರಾಜ್ಯದ 8 ಜಿಲ್ಲೆಗಳಿಗೆ ಹೋಗದಂತೆ ನನ್ನ ಮೇಲೆ ಸರ್ಕಾರ ನಿರ್ಬಂಧ ಹೇರಿದೆ. ಇದರ ಹಿಂದೆ ಹಿಂದೂ ಸಂಘಟನೆ ಮತ್ತು ಹಿಂದೂ ಮುಖಂಡರನ್ನು ಸರ್ವ ನಾಶ ಮಾಡುವ ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಚಿದೆ ಎಂದರು ಆಕ್ರೋಶ ವ್ಯಕ್ತಪಡಿಸಿದರು.
ಯಾರು ಎಷ್ಟೇ ನಿರ್ಬಂಧ ಹೇರಿದರೂ ಯಾರಿಂದಲೂ ಹಿಂದೂ ಸಂಘಟನೆ, ಮುಖಂಡರನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದ ಅವರು ಕಾಶ್ಮೀರದಲ್ಲಿ ಭಯೋತ್ಪಾದಕನೋರ್ವನನ್ನು ಕೊಂದಿರುವದಕ್ಕೆ ಪ್ರತಿಭಟನೆ ನಡೆಸುವುದರ ಮೂಲಕ ದೇಶದ್ರೋಹಿ ಕೆಲಸಕ್ಕೆ ಕುಮ್ಮಕ್ಕು ನೀಡಲಾಗಿದೆ. ವರ್ಷಂಪ್ರತಿ ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಆರಂಭವಾಗುವ ಸಂದರ್ಭದಲ್ಲೇ ಏನಾದರೊಂದು ಘಟನೆ ನಡೆಯುತ್ತಿದ್ದು, ಯಾತ್ರೆ ನಡೆಯಬಾರದು ಎನ್ನುವುದೇ ಇದರ ಉದ್ದೇಶವಾಗಿದೆ. ಕಾಶ್ಮೀರ ಪಾಕಿಸ್ತಾನ ಆಗುವುದರ ಮೊದಲು ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಒತ್ತಾಯಿಸಿದರು.
ಮುರ್ಡೇಶ್ವರದಲ್ಲಿ ಮದುವೆ ದಿಬ್ಬಣದ ಮೆರವಣಿಗೆಯ ಸಂದರ್ಭದಲ್ಲಿ ಡಿಜೆ ಹಾಕಲು ಪೊಲೀಸ್ ಇಲಾಖೆ ನಿರ್ಬಂಧ ಹೇರಿರುವುದಕ್ಕೆ ಮತ್ತು ಈ ಸಂಬಂಧ ಮದುವೆ ಮನೆಯವರಿಗೆ ಡಿಜೆ ಹಾಕದಂತೆ ನೋಟೀಸ್ ನೀಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು ಮದುವೆ ದಿಬ್ಬಣದ ಮೆರವಣಿಗೆ ನಡೆಸುವುದು ನಮ್ಮ ಹಕ್ಕಾಗಿದೆ. ಈ ರೀತಿ ನೋಟೀಸು ನೀಡಿ ಹೆದರಿಸುವ ಕೆಲಸ ಪೊಲೀಸರಿಂದ ಆಗಬಾರದು. ಇಂತಹ ನೋಟೀಸಿನ ವಿರುದ್ದ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶ್ರೀರಾಮ ಸೇನೆಯಿಂದ ಹಾಕಲಾಗುವುದು. ಪೊಲೀಸ್ ಇಲಾಖೆಯಿಂದ ಮದುವೆ ಮನೆಯವರಿಗೆ ಇದೇ ರೀತಿ ಕಿರುಕುಳ ಮುಂದುವರಿದಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾದೀತು ಎಂದು ಅವರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಿಲ್ಲಾ ಸಂಚಾಲಕ ಜಯಂತ ನಾಯ್ಕ ಮುರ್ಡೇಶ್ವರ ಮುಂತಾದವರಿದ್ದರು.


Spread the love