ಸಂವಿಧಾನದ ಬೆಳಕು ನಮ್ಮನ್ನು ಅಂಧಕಾರದಿಂದ ಬೆಳಕಿನತ್ತ ನಡೆಸಲಿ-ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಸಂವಿಧಾನದ ಬೆಳಕು ನಮ್ಮನ್ನು ಅಂಧಕಾರದಿಂದ ಬೆಳಕಿನತ್ತ ನಡೆಸಲಿ-ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಮಂಗಳೂರು: ಭಾರತದ ಸಂವಿಧಾನ ನಮ್ಮನ್ನು ನಿರಂತರ ಮುನ್ನಡೆಸುವ ಮಹಾನ್ ಬೆಳಕಾಗಿದೆ. ನಮ್ಮ ರಾಷ್ಟ್ರವನ್ನು ಅದು ಈಗಾಗಲೇ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಪಥದಲ್ಲಿ ಮುನ್ನಡೆಸಿದೆ. ಮಹಾತ್ಮ ಗಾಂಧೀಜಿಯವರ ಹಾಗೂ ಸಂವಿಧಾನದ ಪಿತಾಮಹರುಗಳ ಪ್ರೇರೇಪಣೆಯಿಂದ ರೂಪಿತವಾದ ನಮ್ಮ ಸಂವಿಧಾನ ಈ ಮಹಾನ್ ಶಕ್ತಿ ಸಂಚಯ ನಮ್ಮಲ್ಲಿ ಬಲ ತುಂಬಿ ನಮ್ಮ ಸಂವಿಧಾನದ ಮುಖಾಂತರ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಫಲಗಳು ಸರ್ವರಿಗೂ ಲಭಿಸುವಂತೆ ಮಾಡುವಲ್ಲಿ ನಮ್ಮನ್ನು ಸನ್ನದ್ಧಗೊಳಿಸಬೇಕು. ಶೋಷಣೆಗೆ ಒಳಗಾದವರ ಪಾಲಿಗೆ ಸಂವಿಧಾನ ನಿಜವಾಗಿಯೂ ಪ್ರಬಲ ಸಾಧನವಾಗಬೇಕು ಎಂದು ಮಂಗಳೂರಿನ ಧರ್ಮಾಧ್ಯಕ್ಷರಾದ ಅತಿ ವಂದನೀಯ ಸ್ವಾಮಿ ಪೀಟರ್ ಪಾವ್ಲ್ ಸಲ್ಡಾನ್ಹಾರವರು ತಿಳಿಸಿದರು.

ಅವರು ಮಂಗಳೂರು ಧರ್ಮಪ್ರಾಂತ್ಯದ ಶ್ರೀಸಾಮಾನ್ಯ ಆಯೋಗದ ವತಿಯಿಂದ ಪ್ರಕಟಿಸಲಾದ ಭಾರತೀಯ ಸಂವಿಧಾನದ ಕೊಂಕಣಿ ಭಾಷಾಂತರವನ್ನು ಲೋಕರ್ಪಣೆ ಮಾಡಿ ಮಾತನಾಡುತ್ತಿದ್ದರು.

ಸಂವಿಧಾನವು ಎಷ್ಟೇ ಉತ್ತಮವಾಗಿದ್ದರೂ ಅದನ್ನು ಕ್ರಮಕ್ಕೆ ಹಾಕುವ ಕೈಗಳು ಅಸಮರ್ಥ ಹಾಗೂ ಭೃಷ್ಟವಾಗಿದ್ದರೆ ಆ ಸಂವಿಧಾನವು ನಿಷ್ಪ್ರಯೋಜಕವಾಗುವ ಭೀತಿಯಿದೆ. ಆದುದರಿಂದ ಇಂದಿನ ಅನಿವಾರ್ಯತೆ ಬರೇ ಸಂವಿಧಾನದ ಅಧ್ಯಯನ ಮಾತ್ರವಲ್ಲ ಹೊರತಾಗಿ ಅದನ್ನು ಬಲಪಡಿಸುವುದು, ಸೂಕ್ತ ವ್ಯಕ್ತಿಗಳ ಕೈಗೆ ನಮ್ಮ ಸಂವಿಧಾನದ ಅಧಿಕಾರಗಳನ್ನು ನೀಡುವುದು ಆಗಿದೆ. ನಾವು ನಮ್ಮ ಹಕ್ಕುಗಳ ಬಗ್ಗೆ ಮಾತನಾಡುವಾಗ ನಮ್ಮ ಕರ್ತವ್ಯಗಳ ಬಗ್ಗೆ ಹಾಗೂ ನಮ್ಮ ಜವಾಬ್ಧಾರಿಗಳ ಬಗ್ಗೆ ಮಾತನಾಡುವುದನ್ನು ಮರೆಯಬಾರದು ಎಮದು ಅವರು ಕರೆ ನೀಡಿದರು.

ಭಾರತದ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯು ಇದೇ ಉದ್ದೇಶದಿಂದ ತನ್ನ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನದ ಕಲಿಕೆ ಕಡ್ಡಾಯ ಮಾಡಲು ನಿರ್ಧರಿಸದೆ, ಇದರಿಂದಾಗಿ ಮುಂದಿನ ಜನಾಂಗ ಹೆಚ್ಚು ಸಾಂವಿಧಾನಿಕ ಸಂವೇಧನೆ ಉಳ್ಳ ಹಾಗೂ ಜವಾಬ್ಧಾರಿಯುತ ಯುವ ಜನಾಂಗವಾಗಿ ಬೆಳೆಯುವುದು ಎನ್ನುವುದು ಅದರ ನಿರೀಕ್ಷೆಯಾಗಿದೆ ಎಂದು ಅವರು ತಿಳಿಸಿದರು ಹಾಗೂ ಕೊಂಕಣಿ ಮಾತೃಭಾಷಿಕರಾದ ಎಲ್ಲಾ ಜನರು ಈ ಸಂವಿಧಾನ ಕೃತಿಯ ಭಾಷಾಂತರದ ಉಪಯೋಗ ಮಾಡುವಂತೆ ಕರೆ ನೀಡಿದರು. ಮಂಗಳೂರು ಧರ್ಮಪ್ರಾಂತ್ಯದ ಶ್ರೀಸಾಮಾನ್ಯ ಆಯೋಗವು ಈ ಕೃತಿಯ ಭಾಷಾಂತರಕ್ಕಾಗಿ ತೆಗೆದುಕೊಂಡ ಶ್ರಮಕ್ಕೆ ಅವರಿಗೆ ಧನ್ಯವಾದ ಸಲ್ಲಿಸಿದ ಧರ್ಮಾಧ್ಯಕ್ಷರು ಅವರ ಜತೆ ಶ್ರಮಿಸಿದ ಧರ್ಮಪ್ರಾಂತ್ಯದ ನಾಗರೀಕ ಜಾಗೃತಿ ಮತ್ತು ಅಭಿವೃದ್ಧಿ ಆಯೋಗಕ್ಕೂ ಅಭಿನಂದನೆ ಸಲ್ಲಿಸಿದರು.

ಧರ್ಮಾಧ್ಯಕ್ಷರು ಭಾಷಾಂತರಕ್ಕಾರರಾದ ಪ್ರೊ. ಸ್ಟೀವನ್ ಕ್ವಾಡ್ರಸ್ ಪೆರ್ಮುದೆ ಅವರನ್ನು ಸನ್ಮಾನಿಸಿದರು. ಹಾಗೂ ಅವರ ಮುಂದಿನ ಯೋಜನೆಗಳಿಗೆ ಶುಭ ಹಾರೈಸಿದರು.

ಪ್ರೊ. ಸ್ಟೀವನ್ ಕ್ವಾಡ್ರಸ್ ಅವರು ತನಗೆ ಸಹಾಯ ಸಹಕಾರ ನೀಡಿದ ಎಲ್ಲರಿಗೂ ಅಭಿವಂದನೆ ಸಲ್ಲಿಸಿದರು. ವಂದನೀಯ ಸ್ವಾಮಿ ಜೆ ಬಿ ಕ್ರಾಸ್ತಾ ಎಲ್ಲರನ್ನೂ ಸ್ವಾಗತಿಸಿದರು.

 ರೊಯ್ ಕಾಸ್ತೆಲಿನೊ, ಸುಶೀಲ್ ನೊರೊನ್ಹಾ,  ಎಮ್ ಪಿ ನೊರೊನ್ಹಾ, ಸ್ವಾಮಿ ರೊಕ್ ಫೆರ್ನಾಂಡಿಸ್, ಸ್ವಾಮಿ ವಿಕ್ಟರ್ ಡಿಸೋಜಾ, ಸ್ವಾಮಿ ಫ್ಲೇವಿಯನ್ ಲೋಬೊ, ಸ್ವಾಮಿ ಅನಿಲ್ ಫೆರ್ನಾಂಡಿಸ್, ಅಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥೆ ವಂದನೀಯ ಭಗಿನಿ ಕಾರ್ಮೆಲ್ ರೀಟಾ ವೇದಿಕೆಯಲ್ಲಿದ್ದರು ಪ್ರೊ. ಜಾನ್ ಡಿಸಿಲ್ವಾ ಕಾರ್ಯಕ್ರಮ ನಿರ್ವಹಿಸಿದರು.