ಸಜಿಪಪಡು: ಕಾರು-ರಿಕ್ಷಾ ಡಿಕ್ಕಿ, ಪ್ರಯಾಣಿಕರಿಬ್ಬರು ಸಾವು

ಸಜಿಪಪಡು: ಕಾರು-ರಿಕ್ಷಾ ಡಿಕ್ಕಿ, ಪ್ರಯಾಣಿಕರಿಬ್ಬರು ಸಾವು

ಬಂಟ್ವಾಳ: ಇಲ್ಲಿನ ಸಜಿಪಪಡು ಗ್ರಾಮದ ಕಂಚಿಲ ಎಂಬಲ್ಲಿ ಸೋಮವಾರ ಸಂಜೆ ಕಾರು ಮತ್ತು ರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಂಚಿ ನಿವಾಸಿಗಳಾದ ಜೈನಾಬು (45) ಮತ್ತು ಇವರ ಸಹೋದರಿ ಜೋಹರಾ (55) ಮೃತರು. ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಆಶ್ರಫ್ ಮತ್ತು ಕಾರು ಚಾಲಕ ಮುಹಮ್ಮದ್ ಸಿರಾಜ್ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ಮಂಚಿ ನಿವಾಸಿ ಜೋಹರಾ ಅನಾರೋಗ್ಯದಿಂದ ಬಳಲುತ್ತಿದ್ದರು. ಸಹೋದರಿ ಜೈನಾಬು ಜೊತೆಗೆ ಸ್ಥಳೀಯ ನಿವಾಸಿ ಆಶ್ರಫ್ ಎಂಬವರ ಆಟೊ ರಿಕ್ಷಾದಲ್ಲಿ ಸೋಮವಾರ ಸಂಜೆ ಮಂಚಿಯಿಂದ ಚೇಳೂರು ಕಡೆಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಸಜಿಪಪಡು ಗ್ರಾಮದ ಕಂಚಿಲ ಎಂಬಲ್ಲಿ ಇನ್ನೊಂದು ವಾಹನ ಹಿಂದಿಕ್ಕುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಎದುರಿನಿಂದ ಬರುತ್ತಿದ್ದ ಆಟೊ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಯರಿಬ್ಬರನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಇಬ್ಬರೂ ಕೊನೆಯುಸಿರೆಳೆದಿದ್ದರು.

ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.