ಸರಕಾರಿ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ : ದ.ಕ. ಜಿಲ್ಲಾಧಿಕಾರಿ

ಸರಕಾರಿ ಸೌಲಭ್ಯಗಳಿಗೆ ಆಧಾರ್ ಕಡ್ಡಾಯ : ದ.ಕ. ಜಿಲ್ಲಾಧಿಕಾರಿ
ಮ0ಗಳೂರು : ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯಲು, ಆಧಾರ್ ಸಂಖ್ಯೆ ಹಾಗೂ ಅಂಚೆ/ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ.  ಸಾಮಾಜಿಕ ಭದ್ರತೆ ,ಮತ್ತು ಪಿಂಚಣಿ ಯೋಜನೆಗಳಾದ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ ವೇತನ, ನಿರ್ಗತಿಕ ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಹಾಗೂ ಮೈತ್ರಿ ಯೋಜನೆಗಳಡಿ ಸೌಲಭ್ಯ ಪಡೆಯುತ್ತಿರುವ  ಫಲಾನುಭವಿಯು ಆಧಾರ್ ಸಂಖ್ಯೆ, ಬ್ಯಾಂಕ್/ಅಂಚೆ ಖಾತೆ ವಿವರ ಮತ್ತು ಒಪ್ಪಿಗೆಯನ್ನು 2017ನೇ ಮಾರ್ಚ್ ಅಂತ್ಯದೊಳಗೆ ಸಲ್ಲಸಬೇಕು ಇಲ್ಲವಾದಲ್ಲಿ ಪಿಂಚಣಿಯನ್ನು ಸ್ಥಗಿತಗೊಳಿಸಲಾಗುವುದು.
ಆಧಾರ್ ಸಂಖ್ಯೆ ಸಂಗ್ರಹಣೆಗಾಗಿ ಸಂಬಂಧಿಸಿದ ರಾಜಸ್ವ ನಿರೀಕ್ಷಕರು/ ಗ್ರಾಮ ಲೆಕ್ಕಿಗರು/ ಗ್ರಾಮ ಸಹಾಯಕರು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಿಂಚಣಿ ಮಂಜೂರಾತಿ ಆದೇಶ ಸಂಖ್ಯೆ/ ಪಿ.ಪಿ.ಒ.ಐ.ಡಿ ಜೊತೆಗೆ ಆಧಾರ್ ಸಂಖ್ಯೆ, ಅಂಚೆ/ಬ್ಯಾಂಕ್ ಖಾತೆಸಂಖ್ಯೆ ಮತ್ತು ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಕೊಡಬೇಕು. ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರ ಮುಖಾಂತರ (ಹೋಬಳಿ ಮಟ್ಟದಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರಗಳು) ಹಾಗೂ ತಾಲ್ಲೂಕು ಕೇಂದ್ರ/ನಗರ ಪ್ರದೇಶಗಳಲ್ಲಿ ತಾಲ್ಲೂಕು ಕಛೇರಿಗಳನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನುನೀಡಬೇಕು. ಆಧಾರ್ ಸಂಖ್ಯೆ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿದವರು ಆಧಾರ್ ಸಂಖ್ಯೆ ದೊರೆತಿಲ್ಲವಾದ್ದಲ್ಲಿ, 28 ಅಂಕಿಯ ಇಐಡಿ ಸಂಖ್ಯೆಯನ್ನು ನೀಡಬಹುದಾಗಿರುತ್ತದೆ. ಇಐಡಿ ಸಂಖ್ಯೆಗೆ ಯಶಸ್ವಿಯಾಗಿ ಆಧಾರ್ ಸಂಖ್ಯೆ ಲಭ್ಯವಾದಲ್ಲಿ ಇಲಾಖೆ ವತಿಯಿಂದಲೇ ಅದನ್ನು ಸೇರಿಸಲಾಗುವುದು.
ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳಲು ಹೋಬಳಿ ಮಟ್ಟದಲ್ಲಿ ಇರುವ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ, ನಗರ ಪ್ರದೇಶಗಳ ಕರ್ನಾಟಕ ಒನ್/ಬೆಂಗಳೂರು ಒನ್ ಹಾಗೂ ಇನ್ನಿತರ ನೋಂದಣಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿರುತ್ತದೆ. ಕೇಂದ್ರ ಸರಕಾರದ ನೇರ ಹಣ ಸಂದಾಯ ಯೋಜನೆಯಡಿ (ಡಿಬಿಟಿ) ಪ್ರತಿ ಫಲಾನುಭವಿಯು ಸರ್ಕಾರದ ಸವಲತ್ತನ್ನು ಪಡೆಯಲು ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಅಥವಾ ಅಂಚೆ ಖಾತೆ ಸಂಖ್ಯೆ ಸಹ ಕಡ್ಡಾಯವಾಗಿದೆ. ಈ ಮಾಹಿತಿಯನ್ನು ಫಲಾನುಭವಿಗಳು ಆಧಾರ್ ಹೊಂದಾಣಿಕೆಯಾದ ಖಾತೆ ಮೂಲಕ ಪಿಂಚಣಿಯನ್ನು ಪಡೆಯುವುದಕ್ಕೆ ಒಪ್ಪಿಗೆ ಪತ್ರದೊಂದಿಗೆ ತಾಲ್ಲೂಕು ಕಛೇರಿ/ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಕೊಡಬೇಕು.
ಇ–ಮನಿಯಾರ್ಡರ್ ಮುಖಾಂತರ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಆಧಾರ್  ಕಾರ್ಡಿನ ಜೆರಾಕ್ಸ್ ಪ್ರತಿ, ಇ- ಮನಿಯಾರ್ಡರ್ ಸ್ವೀಕೃತಿ ರಶೀದಿ ಹಾಗೂ ಭಾವಚಿತ್ರವನ್ನು ಅಂಚೆ ಕಛೇರಿಗೆ ನೀಡಿ ಅಂಚೆ ಖಾತೆ ತೆರೆಯಲು ಕ್ರಮವಹಿಸಬೇಕು.  ನಗರ ಪ್ರದೇಶಗಳಲ್ಲಿ ವಾಸವಾಗಿದ್ದು, ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ವಾಸ ಸ್ಥಳ/ವಿಳಾಸ  ಬದಲಾವಣೆ ಮಾಡಿದ್ದಲ್ಲಿ ಬದಲಾದ ವಿಳಾಸದ ಜೊತೆಗೆ ಆಧಾರ್ ಜೋಡಣೆ ಬಗ್ಗೆ ಅಗತ್ಯ ಮಾಹಿತಿಯನ್ನು ಸಂಬಂಧಿಸಿದ ಅಟಲ್ ಜೀ ಜನಸ್ನೇಹಿ ಕೇಂದ್ರ/ತಾಲ್ಲೂಕು ಕಛೇರಿಯಲ್ಲಿ ನೀಡತಕ್ಕದ್ದು. ಇಲ್ಲವಾದ್ದಲ್ಲಿ ಪಿಂಚಣಿ ಮಂಜೂರಿ ವಿಳಾಸದಲ್ಲಿ ಫಲಾನುಭವಿ ಲಭ್ಯವಿಲ್ಲದ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಪಿಂಚಣಿ ಸ್ಥಗಿತಗೊಳಿಸಲಾಗುವುದು.
ಈ ಬಗ್ಗೆ ದೂರುಗಳು ಏನಾದರೂ ಇದ್ದಲ್ಲಿ ಸಂಬಂಧಿಸಿದ ಅಟಲ್ ಜೀ ಜನಸ್ನೇಹಿ ಕೇಂದ್ರ/ತಾಲ್ಲೂಕು ಕಚೇರಿ/ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, ಬೆಂಗಳೂರು ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ದ.ಕ. ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here