ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ : ಐಜಿಪಿ ಕಠಿಣ ಕ್ರಮದ ಎಚ್ಚರಿಕೆ

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ : ಐಜಿಪಿ ಕಠಿಣ ಕ್ರಮದ ಎಚ್ಚರಿಕೆ
ಮಂಗಳೂರು: ಸಮಾಜಘಾತುಕ ವ್ಯಕ್ತಿಗಳು, ಫೇಸ್ ಬುಕ್, ಟ್ವಿಟರ್, ವಾಟ್ಸಪ್, ಇನ್ಸ್ಟಾ ಗ್ರಾಮ್, ವಿ-ಚಾಟ್, ಸ್ಕೈಪ್ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಸುಳ್ಳು ಸಂದೇಶಗಳನ್ನು ಬಿತ್ತರಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಕೆಲಸಗಳನ್ನು ಮಾಡುತ್ತಿರುವುದು ಕಂಡು ಬಂದಿದೆ. ಈ ರೀತಿ ಸಾಮಾಜಿಕ ಜಾಲತಾಣಗಳು ಹಾಗೂ ಬರವಣಿಗೆಗಳ ಮುಖಾಂತರ ಸಂದೇಶಗಳನ್ನು ಕಳುಹಿಸುವುದು ಕಾನೂನಿಗೆ ವಿರುದ್ದವಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಪಿ ಹರಿಶೇಖರನ್ ಎಚ್ಚರಿಸಿದ್ದಾರೆ.
ವಿವಿಧ ಗುಂಪುಗಳ ನಡುವೆ ಮತ, ಮೂಲವಂಶ, ಜನ್ಮಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ದ್ವೇಷವನ್ನು ಉಂಟು ಮಾಡುವುದು ಮತ್ತು ಸೌಹಾರ್ಧಕ್ಕೆ ಭಾಧಕವಾಗುವ ಕೃತ್ಯಗಳನ್ನು ಮಾಡುವುದು ಮತ್ತು ಆಡಿದ ಮಾತುಗಳಿಂದ ಇಲ್ಲವೆ ಬರೆದ ಶಬ್ದಗಳಿಂದ ಅಥವಾ ಸಂಜ್ಞೆಗಳಿಂದ ಅಥವಾ ದೃಶ್ಯ ನಿರೂಪಣೆಗಳಿಂದ ಅಥವಾ ಬೇರೆ ರೀತಿಯಲ್ಲಿ ಮತ, ಮೂಲವಂಶ, ಜನ್ಮಸ್ಥಳ, ನಿವಾಸ, ಭಾಷೆ, ಜಾತಿ, ಕೋಮು ಅಥವಾ ಇತರ ಯಾವುದೇ ಪ್ರಾದೇಶಿಕ ಗುಂಪುಗಳ ನಡುವೆ ಅಥವಾ ಕೋಮುಗಳ ನಡುವೆ ಸೌಹಾರ್ಧ ಕೆಡಿಸುವ ಅಥವಾ ವೈರ, ದ್ವೇಷ ಅಥವಾ ವೈಮಸ್ಸಿನ ಭಾವನೆಗಳನ್ನು ಹೆಚ್ಚಿಸಿದರೆ ಅಥವಾ ಹೆಚ್ಚಿಸಲು ಪ್ರಯತ್ನಿಸಿದರೆ ಅಥವಾ ವಿವಿಧ ಮತೀಯ, ಮೂಲವಂಶಿಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳ ನಡುವಣ ಅಥವಾ ಜಾತಿ ಅಥವಾ ಕೋಮುಗಳ ನಡುವಣ ಸೌಹಾರ್ದಕ್ಕೆ ಭಾಧಕವಾಗುವ ಯಾವುದೇ ಕೃತ್ಯವನ್ನು ಮಾಡಿದರೆ ಮತ್ತು ಆದರಿಂದ ಸಾರ್ವಜನಿಕ ನೆಮ್ಮದಿಯನ್ನು ಕದಡಿದರೆ ಅಥವಾ ಕದಡುವ ಸಂಭವವಿದ್ದರೆ, ಅಂತಹ ವ್ಯಕ್ತಿಗಳ 3 ವರ್ಷಗಳ ಅವಧಿಯವರೆಗಿನ ಜೈಲು ಶಿಕ್ಷೆ ಅಥವಾ ಎರಡರಿಂದಲೂ ಶಿಕ್ಷೆಗೊಳಿಸಲು ಅವಕಾಶವಿದೆ ಎಂದು ಐಜಿಪಿ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಸುಳ್ಳು ಸಂದೇಶಗಳನ್ನು ಬಿತ್ತರಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಕೆಲಸಗಳನ್ನು ಮಾಡಿದರೆ ಐಟಿ ಕಾಯ್ದೆಯ ಪ್ರಕಾರ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಐಜಿಪಿ ಎಚ್ಚರಿಸಿದ್ದಾರೆ.

Leave a Reply

Please enter your comment!
Please enter your name here