ಸಾಮಾಜಿಕ ಜಾಲತಾಣ ಮೂಲಕ ಅಶಕ್ತರಿಗೆ ಸ್ಪಂದಿಸಿದ ಅಮೃತ ಸಂಜಿವಿನಿ

ಸಾಮಾಜಿಕ ಜಾಲತಾಣ ಮೂಲಕ ಅಶಕ್ತರಿಗೆ ಸ್ಪಂದಿಸಿದ ಅಮೃತ ಸಂಜಿವಿನಿ

ಮಂಗಳೂರು: ಸಶಕ್ತ ಸಮಾಜದಿಂದ ಅಶಕ್ತ ಸಮಾಜದೆಡೆಗೆ ಎನ್ನುವ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಸಂಚರಿಸುತ್ತಿರುವ ಅಮೃತಸಂಜೀವಿನಿ ಸೇವಾ ಸಂಸ್ಥೆಯು ಸಮಾಜದಲ್ಲಿ ಸೇವಾ ಚಿಂತನೆಯನ್ನು ಬಿತ್ತುವ ಕಾರ್ಯಕ್ಕೆ ಇಳಿದಿದೆ. ತನ್ನ 14ನೇ ಮಾಸಿಕ ಯೋಜನೆಗಾಗಿ ಕಾವೂರಿನ ಪ್ರತಿಭಾವಂತ ಬಡ ವಿಧ್ಯಾರ್ಥಿಯ ಸಮಸ್ಯೆಗೆ ಸಹಾಯ ಹಸ್ತ ಚಾಚಿದೆ.

amritha-sanjivini

ತಿಂಗಳಲ್ಲಿ ಕಡುಬಡತನದ ಒಂದು ಮನೆಯನ್ನು ಗುರುತಿಸಿ ಅವರ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣ ಮೂಲಕ ಪಸರಿಸಿ ದಾನಿಗಳಿಂದ ಬಂದ ಹಣವನ್ನು ತಿಂಗಳ ಮೂರನೇ ಭಾನುವಾರ ಗುರುತಿಸಿದ ಅಶಕ್ತ ಕುಟುಂಬದ ಮನೆಗೆ ತೆರಳಿ ಭಗವದ್ಗೀತೆಯೊಂದಿಗೆ ಸಹಾಯ ಹಸ್ತ ಚಾಚುತ್ತಾ ಸೇವಾ ಕಾರ್ಯದ ಜೊತೆಗೆ ಧರ್ಮ ಕಾರ್ಯದ ಕೆಲಸವನ್ನು ಒಟ್ಟೊಟ್ಟಿಗೆ ಮಾಡಿಕೊಂಡು ಬಂದಿದೆ. ಇದರ ಜೊತೆಗೆ ಮಾಧಕ ವಸ್ತು ನಿಷೇದ ದಿನಾಚರಣೆ, ರಕ್ತದಾನ ಶಿಬಿರ, ತೃತೀಯ ಲಿಂಗಿಗಳೊಂದಿಗೆ ರಕ್ಷಾಬಂಧನ ಮುಂತಾದ ಸಮಾಜಿಕ ಕೆಲಸವನ್ನು ಕೈಗೆತ್ತಿಕೊಂಡು ಜೈ ಎನಿಸಿಕೊಂಡಿದೆ.

ಅಂತರ್ಜಾಲದ ನೆರವಿನೊಂದಿಗೆ ಸತತ 14 ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದ ಅಮೃತಸಂಜೀವಿನಿ ಈವರೆಗೆ ಸುಮಾರು 10 ಲಕ್ಷಕ್ಕಿಂತಲೂ ಮೇಲ್ಪಟ್ಟು ಧನಸಹಾಯವನ್ನು ಗುರುತಿಸಲ್ಪಟ್ಟ ಸಮಾಜದ ಬಡ ಕಣ್ಣುಗಳಿಗೆ ನೀಡಿದೆ.

ಕಾವೂರಿನ ನಿವಾಸಿಯಾಗಿರುವ ಶಶಿಕಲಾ ಹಾಗೂ ಯೋಗಿಶ್ ಆಚಾರ್ಯ ಮಗನಾದ ನಿಖಿಲೇಶ್ ಇವರು ಒಂದು ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರೆ. ಮಾನವನ ದೇಹರಚನಾಂಗದಂತೆ ದೇಹದಲ್ಲಿರುವ ರಕ್ತವು ಹೃದಯದಲ್ಲಿ ಬಂದು ಶುದ್ಧೀಕರಣವಾಗುತ್ತದೆ. ಆದರೆ ನಿಖಿಲೇಶರ ದೇಹದಲ್ಲಿನ ರಕ್ತವು ಶುದ್ದೀಕರಣಕ್ಕೆ ಹೃದಯಕ್ಕೆ ಬರಬೇಕಾದ ರಕ್ತನಾಳದಲ್ಲಿ ಮಾಂಸವು ಬೆಳೆದಿದ್ದು ಸರಿಯಾಗಿ ಶುದ್ಧವಾಗದ ರಕ್ತವೇ ದೇಹದಲ್ಲಿ ಪುನರ್ಚಲನೆಯಾಗುತ್ತಿದೆ. ಇದರಿಂದ ಇವರು ಸ್ಮೃತಿ ತಪ್ಪುವುದು ಅಂಗಾಂಗ ಆರೋಗ್ಯದ ತೀವ್ರ ತೊಂದರೆಗೆ ತುತ್ತಾಗಿದ್ದಾರೆ. ಇದಕ್ಕೆ ಪರಿಹಾರವೆಂದರೆ ರಕ್ತನಾಳದ ಶಸ್ತ್ರಚಿಕಿತ್ಸೆಯನ್ನು ನಡೆಸುವುದು. ಆದರೆ ಮನೆಯು ಹೇಳತೀರದ ಬಡತನದಲ್ಲಿ ಮುಳುಗಿದೆ ಉಳಿದುಕೊಳ್ಳಲು ಸ್ವಂತ ಮನೆಯಿಲ್ಲದ ಪರಿಸ್ಥಿತಿ ಒಂದು ಕಡೆಯಾದರೆ ಪಾರ್ಶ್ವವಾಯು ಪೀಡಿತರಾಗಿ ಬಿದ್ದಿರುವ ಮನೆಯ ಯಜಮಾನ ಯೋಗೀಶ್ ಆಚಾರ್ಯ ಮತ್ತೊಂದು ಕಡೆ ಅತ್ಯಂತ ಕಡು ಬಡತನದಲ್ಲೂ ಏನಾದರೂ ಸಾಧಿಸಬೇಕೆಂಬ ಚಲಗಾರ ನಿಕಿಲೇಶರಿಗೆ ನಿಟ್ಟೆ ಕಾಲೇಜಿನಲ್ಲಿ ಸರಕಾರಿ ಸೀಟ್ ಲಭಿಸಿದರೂ ಕಾಲೇಜಿಗೆ ಹೋಗಲಾಗದ ದುಸ್ಥಿತಿ .

ಈ ಸಮಸ್ಯೆಯನ್ನು ಅರಿತ ಸಂಜೀವಿನಿಗಳ ತಂಡ ಯೋಜನೆಗೆ ಈ ಸಮಸ್ಯೆಯನ್ನು ಆರಿಸಿ ಸಮಾಜ ಬಂಧುಗಳಿಂದ ಸಂಗ್ರಹವಾದ 70,000ರೂಗಳನ್ನು ಯೋಜನೆಯ ಸಂತ್ರಸ್ತರಿಗೆ ನೀಡಲಾಯಿತು.

ಪ್ರತೀ ತಿಂಗಳು ತುರ್ತು ಸಹಾಯ ನೀಡುವ ಪದ್ಧತಿಯನ್ನ ಅಮೃತಸಂಜೀವಿನಿ ರೂಢಿಸಿಕೊಂಡಿದ್ದು ಗಂಟಲಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಸತ್ಯನಾರಾಯಣ ಎಂಬವರಿಗೆ ಶಸ್ತ್ರಚಿಕಿತ್ಸೆಗೆ ಬೇಕಾದ ಮೊತ್ತವನ್ನು ಹೊಂದಿಸುವುದು ಬಹು ಕಷ್ಟವಾದ ಪರಿಸ್ಥಿತಿಯಲ್ಲಿ ಇದ್ದುದರಿಂದ ಅಮೃತಸಂಜೀವಿನಿ ಸದಸ್ಯರು ಎ.ಜೆ. ಆಸ್ಪತ್ರೆಗೆ ತೆರಳಿ ಸತ್ಯನಾರಾಯಣ ಅವರಿಗೆ 20,000ರೂಗಳ ತುರ್ತು ಸಹಾಯ ನೀಡುವ ಮೂಲಕ ಅವರ ಕಣ್ಣೀರನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುವ ಪ್ರಯತ್ನ ಮಾಡಿದೆ.

ಒಟ್ಟಾರೆಯಾಗಿ ಅಮೃತಸಂಜೀವಿನಿತನ್ನ 14ನೇ ತಿಂಗಳ ಯೋಜನೆಯಲ್ಲಿ ಸಹೃದಯಿ ಸಂಜೀವಿನಿಗಳಿಂದ ಸಂಗ್ರಹಿಸಿ 90,000ರೂಗಳನ್ನು ಅಶಕ್ತರಿಗೆ ನೀಡಿ ಸಾರ್ಥಕ್ಯ ಮೆರೆದಿದೆ.

1 Comment

Leave a Reply

Please enter your comment!
Please enter your name here