ಸುಲ್ತಾನ್ ಬತ್ತೇರಿಯಲ್ಲಿ ಆಯುಷ್ -ಪೌಷ್ಠಿಕ ಆಹಾರ ಸಪ್ತಾಹ

ಸುಲ್ತಾನ್ ಬತ್ತೇರಿಯಲ್ಲಿ ಆಯುಷ್ -ಪೌಷ್ಠಿಕ ಆಹಾರ ಸಪ್ತಾಹ

ಮ0ಗಳೂರು : ಸಾರ್ವಜನಿಕರಿಗೆ ಪೌಷ್ಟಿಕ ಆಹಾರ ಸೇವನೆ ಬಗ್ಗೆ ಜಾಗೃತಿ ಮೂಡಿಸಲು ದ.ಕ. ಜಿಲ್ಲಾ ಆಯುಷ್ -ಆಯುರ್ವೇದ ಆಸ್ಪತ್ರೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಬೋಳೂರು ಇವರ ಸಹಯೋಗದೊಂದಿಗೆ ಆಯೋಜಿಸಲಾಗಿರುವ “ಪೌಷ್ಟಿಕ ಆಹಾರ ಸಪ್ತಾಹ“ ಕಾರ್ಯಕ್ರಮ ಗುರುವಾರ ಸುಲ್ತಾನ್ ಬತ್ತೇರಿ ಅಂಗನವಾಡಿಯಲ್ಲಿ ಜರಗಿತು.

ಕಾರ್ಯಕ್ರಮವನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾ:ಮಹಮದ್ ಇಕ್ಬಾಲ್ ಉದ್ಘಾಟಿಸಿದರು. ಅವರು ಮಾತನಾಡಿ, ಉತ್ತಮ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಪೌಷ್ಟಿಕ ಆಹಾರಗಳ ಸೇವನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳ ಅಗತ್ಯವಿದ್ದು, ಆಯುಷ್ ಇಲಾಖೆ ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಆಯುಷ್ ವೈದ್ಯರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ayush_2-1

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಆಯುಷ್ ವಿಶೇಷ ಚಿಕಿತ್ಸಾ ಘಟಕಗಳನ್ನು ಆರಂಭಿಸಿದ್ದು, ಸಪ್ಟೆಂಬರ್ 23ರಂದು ಉದ್ಘಾಟನೆಯಾಗಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಆಯುಷ್ ಆಸ್ಪತ್ರೆಯ ಆಯುರ್ವೇದ ತಜ್ಞ ವೈದ್ಯರಾದ ಡಾ:ದೇವದಾಸ್ ಮಾತನಾಡಿ, ಸಮಾಜದ ಸ್ವಾಸ್ತ್ಯಕ್ಕಾಗಿ ಪೌಷ್ಟಿಕ ಆಹಾರ ಸೇವನೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಆಯುಷ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಆಹಾರ ಸೇವನಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪರಿಸರದಲ್ಲಿ ದೊರೆಯುವ ಹಸಿರು ತರಕಾರಿ, ಸೊಪ್ಪುಗಳಲ್ಲಿ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ವಿಟಮಿನ್‍ಗಳು ಅತೀ ಹೆಚ್ಚು ಪ್ರಮಾಣದಲ್ಲಿ ಸಿಗುವುದರಿಂದ ಇವುಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ಅವರು ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಬೋಳೂರು ಇದರ ಗೌರವಾಧ್ಯಕ್ಷ ವಾಸುದೇವ ಬೋಳೂರು ವಹಿಸಿದ್ದರು. ಮಾಜಿ ಕಾರ್ಪೊರೇಟರ್ ಕಮಲಾಕ್ಷ ಸಾಲಿಯಾನ್ ಉಪಸ್ಥಿತರಿದ್ದರು.

Leave a Reply