ಸ್ಥೈರ್ಯ ನಿಧಿಯಡಿ ತಕ್ಷಣ ಪರಿಹಾರ: ಜಿಲ್ಲಾಧಿಕಾರಿ ಡಾ ವಿಶಾಲ್

ಉಡುಪಿ :– ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳಿಗೆ ಉಚಿತ ಚಿಕಿತ್ಸೆಯ ಜೊತೆಗೆ ತಕ್ಷಣದ ಅಗತ್ಯಗಳಿಗೆ ಅನುಗುಣವಾಗಿ ಐದು ಸಾವಿರ ರೂ.ಗಳ ನೆರವನ್ನು ತಕ್ಷಣವೇ ನೀಡುವಂತೆ ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಹೇಳಿದರು.
ಅವರಿಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ 14 ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಸ್ಥೈರ್ಯ ನಿಧಿ ಬಳಕೆಗೆ ಸಂಬಂಧಿಸಿದ ಮಾರ್ಗದರ್ಶಿ (ಗೈಡ್‍ಲೈನ್ಸ್) ಬಗ್ಗೆ ಸವಿವರ ಚರ್ಚೆ ನಡೆಯಿತು. ಅಂತಿಮವಾಗಿ ಜಿಲ್ಲಾಧಿಕಾರಿಗಳು ಉಚಿತ ವೈದ್ಯಕೀಯ ಸೇವೆಯ ಜೊತೆಗೆ ತಕ್ಷಣವೇ ಸಂತ್ರಸ್ತರಿಗೆ ಐದು ಸಾವಿರ ರೂ.ಗಳ ಪರಿಹಾರ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಗ್ರೇಸಿ ಗೊನ್ಸಾಲ್ವಿಸ್ ಅವರಿಗೆ ಸೂಚಿಸಿದರು.

dr.vishal-20160403

ಸ್ಥೈರ್ಯ ನಿಧಿಯಡಿ ಗರಿಷ್ಠ 2 ಲಕ್ಷ ರೂ.ಗಳವರೆಗೆ ಸಂತ್ರಸ್ತರಿಗೆ ನೀಡಲು ಅವಕಾಶವಿದ್ದು, ಪರಿಹಾರ ನೀಡಿಕೆಯಲ್ಲಿ ಯಾವುದೇ ರೀತಿಯ ವಿಳಂಬವಿಲ್ಲ; ಇಲಾಖೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಸರ್ಜನ್ ಜೊತೆ ಸೇರಿ ಸಂತ್ರಸ್ತರಿಗೆ ಸೇವೆ ನೀಡಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಾಂತ್ವನ ಯೋಜನೆಯಡಿ ಮಹಿಳೆ ಮತ್ತುಮಕ್ಕಳಿಗೆ ಸಂಬಂಧಿಸಿದ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಶೇಷ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಉಪನಿರ್ದೇಶಕರಾದ ಗ್ರೇಸಿ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ನಗರದಲ್ಲಿ ತಾಯಿ ಮಕ್ಕಳೊಂದಿಗೆ ಭಿಕ್ಷಾಟನೆಗಳು ಕಂಡು ಬಂದ ಬಗ್ಗೆ ಮಹಿಳಾ ಮಂಡಲದ ಒಕ್ಕೂಟದ ಅಧ್ಯಕ್ಷರು ಗಮನ ಸೆಳೆದಾಗ ಪೊಲೀಸ್ ಇಲಾಖೆಯ ನೆರವಿನೊಂದಿಗೆ ಎರಡು ಬಾರಿ ಇಂತಹವರಿಗೆ ಎಚ್ಚರಿಕೆ ನೀಡಿ ಮೂರನೇ ಬಾರಿ ಪೋಕ್ಸೋದಡಿ ಕೇಸು ದಾಖಲಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಬಾಲನ್ಯಾಯ ಕಾಯಿದೆಯಡಿ ಜಿಲ್ಲೆಯಲ್ಲಿ 27 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, 3 ಸಂಸ್ಥೆಗಳು ನೊಂದಾಯಿಸಲು ಬಾಕಿ ಇದ್ದು ಇವರ ಲೈಸನ್ಸ್ ರದ್ದುಪಡಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು.
ವರದಕ್ಷಿಣೆ ಕಾಯಿದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ನ್ಯಾಯಕೊಡಿಸಲು ಮುತುವರ್ಜಿ ವಹಿಸಿ ಎಂದು ಜಿಲ್ಲಾಧಿಕಾರಿಗಳು, ಸಮಾಲೋಚನೆ ಜೊತೆಗೆ ಕಾನೂನು ಕ್ರಮ ಪಕ್ಕಾ ಇರಬೇಕೆಂದ ಅವರು, ಸಮಾಲೋಚನೆ ಮತ್ತಿತರ ಒತ್ತಡಗಳು ಮಹಿಳೆಯ ಪ್ರಾಣಕ್ಕೆ ಕುತ್ತುಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ ಮಹಿಳೆಯರ ಮಾರಾಟದ ಪ್ರಕರಣಗಳಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಮಹಿಳೆಯರ ಮತ್ತು ಮಕ್ಕಳ ಸಾಗಾಣೆ ನಿವಾರಣೆ ಕುರಿತಾಗಿ ಅರಿವು ಮೂಡಿಸಲು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಕಾನೂನು ಸೇವಾ ಪ್ರಾಧಿಕಾರ, ಆರಕ್ಷಕ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಗಳಿಗೆ ವಿವಿಧ ರೀತಿಯ ಪೋಸ್ಟರ್ ಮತ್ತು ಸ್ಟಿಕರ್‍ಗಳನ್ನು ವಿತರಿಸಲಾಗಿದೆ.
ಕೊರಗ ಸಮುದಾಯ ಹಾಗೂ ವಿಜಯಪುರ, ಬಾಗಲಕೋಟೆಗಳಿಂದ ವಲಸೆ ಬಂದಿರುವ ಕಾರ್ಮಿಕರು, ಲಮಾಣಿಗಳು ವಾಸ್ತವ್ಯವಿರುವಲ್ಲಿ ಬಾಲ್ಯ ವಿವಾಹ ಜರುಗದಂತೆ ಗಮನಹರಿಸಬೇಕೆಂದು ಸಭೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿರುವ ಮಹಿಳಾ ವಿಶೇಷ ಚಿಕಿತ್ಸಾ ಘಟಕದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದ ಸರ್ಕಾರೇತರ ಸಂಘಸಂಸ್ಥೆಗಳ ಮುಖ್ಯಸ್ಥರಿಗೆ ಹೇಳಿದರು.
ಸಖಿ ವನ್ ಸ್ಟಾಪ್ ಸೆಂಟರ್‍ನ್ನು ತಾತ್ಕಾಲಿಕವಾಗಿ ಸ್ತ್ರೀಸೇವಾ ನಿಕೇತನದ ನೂತನ ಸಿಬ್ಬಂದಿ ವಸತಿಗೃಹದ ಕಟ್ಟಡದಲ್ಲಿ ಆರಂಭಿಸಲಾಗಿದ್ದು, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಚೇತನಾ ಯೋಜನೆಯಡಿ ಒಟ್ಟು 2 ಲಕ್ಷ ರೂ. ಸಹಾಯಧನವನ್ನು 10 ಲೈಂಗಿಕ ಕಾರ್ಯಕರ್ತೆಯರಿಗೆ 20, 000 ರೂ. ಗಳಂತೆ ಒದಗಿಸಲಾಗಿದೆ. 12 ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಶೇಷ ವಸತಿ ಯೋಜನೆಯಡಿ ನಿವೇಶನ ಮಂಜೂರಾತಿಗೆ ಕ್ರಮವಹಿಸಲಾಗಿದೆ.
ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಇಲಾಖೆಯ ವೀಣಾ, ಸರಳಾ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply