ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಮಂಗಳೂರು: ಸ್ವಾಮಿ ವಿವೇಕಾನಂದ ಮತ್ತು ಸೋದರಿ ನಿವೇದಿತಾ ಅವರ ಸಾಹಿತ್ಯ ಭಂಡಾರಗಳನ್ನು ಹೊತ್ತ ಭವ್ಯ ಪಲ್ಲಕ್ಕಿಯ ಮೆರವಣಿಗೆಯು ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಿಂದ ಆರಂಭವಾಯಿತು.

ಪಲ್ಲಕ್ಕಿ ಉತ್ಸವಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಡಾ|| ಎಂ. ಮೋಹನ್ ಆಳ್ವಾ ಅವರು ಚಾಲನೆ ನೀಡಿದರು. ಸ್ವಾಮೀಜಿಯ ಆಶಯದಂತೆ ನಮ್ಮ ಅಂತಃಕರಣದ ಕ್ಷಾತ್ರತೇಜವನ್ನು ಉದ್ದೀಪಿಸಲು, ಮಲಗಿಹ ಸಮಾಜವನ್ನು ಬಡಿದೆಬ್ಬಿಸಲು ಬೇಕಾದ ಚೆಂಡೆ, ಶಂಖನಾದ, ಜಾಗಟೆ, ನಗಾರಿ ವಾದ್ಯಗಳು ಮೆರವಣಿಗೆಗೆ ಇನ್ನಷ್ಟು ಮೆರುಗನ್ನು ನೀಡಿತು. ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತರು ಭಗವಧ್ವಜ ಹಿಡಿದುಕೊಂಡು ಶಿಸ್ತಿನ ಸೈನಿಕರಂತೆ ಮೆರವಣಿಗೆಯಲ್ಲಿ ಸಾಗಿದರು. ಪಲ್ಲಕ್ಕಿ ಉತ್ಸವದ ಮೆರವಣಿಗೆಯ ಸಮಾಪ್ತಿಯ ನಂತರ ಕೇಂದ್ರ ಮೈದಾನದಲ್ಲಿ ‘ಪಶ್ಚಿಮದಲ್ಲಿ ವಿವೇಕಾನಂದ ಮತ್ತು ಪೂರ್ವದಲ್ಲಿ ನಿವೇದಿತಾ’ ಪ್ರದರ್ಶಿನಿಯ ಉದ್ಘಾಟನೆಯು ಶ್ರೀಮತಿ ಸಂಧ್ಯಾ ಪೈ ಅವರಿಂದ ನೆರವೇರಿತು. ಸ್ವಾಮಿ ವಿವೇಕಾನಂದ ಮತ್ತು ಅಕ್ಕ ನಿವೇದಿತೆಯ ಪ್ರೇರಣೆಯಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಸಂಸ್ಥೆಗಳನ್ನೂ ಸಹ ಇಲ್ಲಿ ಕಾಣಬಹುದು.

ಸಾಹಿತ್ಯ ಸಮ್ಮೇಳನದ ಉದ್ಘಾಟನೆಯು ಗುಡ್ವಿನ್ ಮಂಟಪದಲ್ಲಿ ನೆರವೇರಿತು. ಗೋಪಿ ಭಟ್ ಮತ್ತು ತಂಡ ವೇದಘೋಷದ ಮೂಲಕ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಡೋದರಾ (ಬರೋಡಾ) ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿಖಿಲೇಶ್ವರಾನಂದಜಿ ಮಹಾರಾಜ್ ಬೆಳಗುತ್ತಿರುವ ದೀಪಕ್ಕೆ ತೈಲವನ್ನು ಎರೆಯುವುದರ ಮೂಲಕ ಉದ್ಘಾಟಿಸಿದರು. ಯುವಾಬ್ರಿಗೇಡ್‍ನ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಅತಿಥಿಗಳನ್ನು ಸ್ವಾಗತಿಸಿ ಸಮ್ಮೇಳನದ ಉದ್ದೇಶದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ನುಡಿದರು.

ಸ್ವಾಮಿ ನಿರ್ಭಯಾನಂದಜೀ ಮಹಾರಾಜ್, ವಿಜಯಾನಂದಜೀ ಮಹಾರಾಜ್, ಮಾತಾಜಿ ಯತೀಶ್ವರಿ ಕೃಷ್ಣಪ್ರಿಯ ಅಂಬಾಜಿ, ಸಮ್ಮೇಳನದ ಸಂಚಾಲಕರಾದ ಗಿರಿಧರ್ ಶೆಟ್ಟಿ, ಯುವಾಬ್ರಿಗೇಡ್‍ನ ರಾಜ್ಯ ಸಂಚಾಲಕರಾದ ಶ್ರೀ ನಿತ್ಯಾನಂದ ವಿವೇಕವಂಶಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮ್ಮೇಳನದ ಸರ್ವಾಧ್ಯಕ್ಷೆ ಮಾತಾಜಿ ಯತೀಶ್ವರಿ ಕೃಷ್ಣಪ್ರಿಯ ಅಂಬಾಜಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ವಾಮಿ ನಿಖಿಲೇಶ್ವರಾನಂದಜಿಯವರು ವಿವೇಕಾನಂದರ ಪ್ರೇರಣೆಯ ಮಾತುಗಳನ್ನಾಡಿದರು. ಈ ಸಮಾರಂಭದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನದ ಪ್ರಿಯಾ ಶಿವಮೊಗ್ಗ ಬರೆದ ಗುರು-ಶಿಷ್ಯೆ ಮತ್ತು ನಿತ್ಯಾನಂದ ವಿವೇಕವಂಶಿಯವರ ಸಾಗರದಾಚೆಯ ವಿವೇಕಾನಂದ ಪುಸ್ತಕ ಲೋಕಾರ್ಪಣೆಗೊಂಡಿತು. ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದಜಿ ಮಹಾರಾಜ್‍ರವರು ಯುವಕರನ್ನು ಕುರಿತು ಸ್ಫೂರ್ತಿಯುತ ನುಡಿಗಳನ್ನು ನುಡಿದರು. ಯುವಾಬ್ರಿಗೇಡ್‍ನ ಮಂಗಳೂರು ವಿಭಾಗ ಸಂಚಾಲಕರಾದ ಮಂಜಯ್ಯ ನೇರೆಂಕಿಯವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. ಯುವಾಬ್ರಿಗೇಡ್‍ನ ಕಾರ್ಯಕರ್ತರಾದ ವಿಕ್ರಮ್ ನಾಯಕ್‍ರವರು ಉದ್ಘಾಟನಾ ಸಮಾರಂಭದ ನಿರೂಪಣೆಯನ್ನು ನೆರವೇರಿಸಿಕೊಟ್ಟರು.

Leave a Reply

Please enter your comment!
Please enter your name here