ಸ್ವೇಚ್ಚಾಚಾರದ ಬದುಕು ದುರಂತದ ಸಂಕೇತ- ಸುಬ್ರಹ್ಮಣ್ಯ ಬಾಸ್ರಿ

Spread the love

ಸ್ವೇಚ್ಚಾಚಾರದ ಬದುಕು ದುರಂತದ ಸಂಕೇತ- ಸುಬ್ರಹ್ಮಣ್ಯ ಬಾಸ್ರಿ

ಉಡುಪಿ: ನಾವೀಗ ಸ್ವತಂತ್ರರಾಗಿದ್ದೇವೆ. ನಮ್ಮ ಜನ, ನಮ್ಮ ಪರಿಸರ, ನಮ್ಮ ಜಲ, ನಮ್ಮ ಸಂಸ್ಕೃತಿ ಎಂಬ ಅಭಿಮಾನ ಮತ್ತು ಸ್ವಾಭಿಮಾನದಿಂದ ಅನೇಕ ದೇಶಭಕ್ತರು ಮಾಡಿದ ತ್ಯಾಗ, ಹೋರಾಟ ಮತ್ತು ಪರಿಶ್ರಮದ ಫಲವಾಗಿ ಇಂದು ನಮ್ಮ ರಾಷ್ಟ್ರ ಸ್ವಾತಂತ್ರ್ಯ ಕಂಡು 70 ವರ್ಷಗಳನ್ನು ಕಂಡಿದೆ. ಇಂದು ಒಂದು ಕಡೆ ನಮ್ಮ ಸ್ವಾತಂತ್ರ್ಯವನ್ನು ಮೀರಿ ಸ್ವೇಚ್ಚಾಚಾರದತ್ತ ನಮ್ಮ ಬುದುಕು ಸಾಗುತ್ತಿರುವುದು ದುರಂತದ ಸಂಕೇತವಾಗಿದೆ. ನಮ್ಮ ಸ್ವಾತಂತ್ರ್ಯದ ನೆಪದಲ್ಲಿ ನಮ್ಮ ಪ್ರಕೃತಿಯ ಸ್ವಾತಂತ್ರ್ಯವನ್ನು ನಾವು ಕಸಿದುಕೊಳ್ಳುತ್ತಿದ್ದೇವೆ. ನಮ್ಮ ಐಷಾರಾಮಿ ಜೀವನಕ್ಕಾಗಿ ಗಿಡ ಮರಗಳ, ಪ್ರಾಣಿ ಪಕ್ಷಿಗಳ ಸ್ವಚ್ಛಂದವಾದ ಬದುಕಿಗೆ ಕೊಡಲಿ ಏಟು ನೀಡುತ್ತಿದ್ದೇವೆ. ಪರಿಣಾಮ ನಮ್ಮ ಪ್ರಾಕೃತಿಕ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದೇವೆ.

skpa

ಸ್ವಚ್ಛ ವಾತಾವರಣ, ನಿರ್ಮಲ ಪರಿಸರ ನಿರ್ಮಾಣಕ್ಕಾಗಿ, ನಮ್ಮ ಸ್ವಾರ್ಥವನ್ನು ಬದಿಗಿಟ್ಟು, ಮುಂದಿನ ಜನಾಂಗದ ದೃಷ್ಠಿಯಿಂದ ಗಿಡಮರಗಳನ್ನು ನೆಟ್ಟು ಪೋಷಿಷಿ ನಮ್ಮ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಈ ನೆಲೆಯಲ್ಲಿ ಇಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ಸ್ ಉಡುಪಿ ವಲಯದವರು ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸುವುದರ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸುತ್ತಿರುವುದು ಶ್ಲಾಘನೀಯ, ಎಂದು ರೋಟರಿ ಜಿಲ್ಲೆ 3182 ರ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ ಇಂದಿಲ್ಲಿ ಹೇಳಿದರು. ಶ್ರೀಯುತರು ಶ್ರೀಕೃಷ್ಣ ಬಾಲನಿಕೇತನದಲ್ಲಿ ಆಯೋಜಿಸಿದ ಸ್ವಾತಂತ್ರ್ಯೋತ್ಸವ ಹಾಗೂ ವನಮಹೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬಳಿಕ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು. ಚಿಕ್ಕು, ಕೈಬೇವು, ಮಲ್ಲಿಗೆ, ಬಿಲ್ವ ಪತ್ರೆ ಮುಂತಾದ ನಿತ್ಯೋಪಯೋಗಿ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಎಸ್‍ಕೆಪಿಎ ಉಡುಪಿ ವಲಯಾಧ್ಯಕ್ಷ ವಾಮನ ಪಡುಕೆರೆ, ಕಾರ್ಯದರ್ಶಿ ಸಂತೋಷ್ ಕೊರಂಗ್ರಪಾಡಿ, ಕೋಶಾಧಿಕಾರಿ ಮಂಜುನಾಥ್ ಸೇರಿಗಾರ್, ಜನಾರ್ದನ್ ಕೊಡವೂರು, ಪ್ರಕಾಶ್ ಕೊಡಂಕೂರು, ಸತೀಶ್ ಸೇರಿಗಾರ್, ನವೀನ್, ಸುರಭಿ ರತನ್, ಮಹೇಶ್ ನಿಟ್ಟೂರು ಶ್ರವಣ್ ಬಾಸ್ರಿ ಹಾಗು ಶ್ಯಾಮಲ ಉಪಸ್ಥಿತರಿದ್ದರು.


Spread the love