ಹವಾನಿಯಂತ್ರಣ ಕೊಠಡಿಗಳಿಂದ ಹೊರ ಬನ್ನಿ: ಸಿದ್ದರಾಮಯ್ಯ

ಹವಾನಿಯಂತ್ರಣ ಕೊಠಡಿಗಳಿಂದ ಹೊರ ಬನ್ನಿ: ಸಿದ್ದರಾಮಯ್ಯ

ಬೆಂಗಳೂರು : ಹವಾನಿಯಂತ್ರಣ ಕೊಠಡಿಗಳಿಂದ ಹೊರ ಬನ್ನಿ. ಹಳ್ಳಿಗಳಿಗೆ ತೆರಳಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ. ಬಡವರ ಕಣ್ಣೀರು ಒರೆಸಿ. ಇದು ಜಿಲ್ಲೆಗಳಲ್ಲಿನ ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿತನುಡಿ.

ರಾಜ್ಯದ ಎಲ್ಲಾ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳ ಎರಡು-ದಿನಗಳ ಸಮ್ಮೇಳನದಲ್ಲಿ ಪ್ರಾಸ್ತಾವಿಕ ಭಾಷಣ ಮಾಡುತ್ತಿದ್ದರು.

ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿದ್ದ ಅಧಿಕಾರ ಇದೀಗ ಇಲ್ಲದಿದ್ದರೂ, ಜಿಲ್ಲಾಧಿಕಾರಿಗಳ ಹುದ್ದೆ ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಹುದ್ದೆಯಾಗಿದೆ. ಜನಸಾಮಾನ್ಯರ ಕುಂದು-ಕೊರೆತೆಗಳಿಗೆ ಸ್ಪಂದಿಸುವುದು ಮಾತ್ರವಲ್ಲ, ಉತ್ತರದಾಯಿತ್ವವೂ ಜಿಲ್ಲಾಧಿಕಾರಿಗಳದ್ದೇ. ಅಂದಿನ ಕಾಲದಲ್ಲಿ ಅಧಿಕಾರಿಗಳು ಕುದುರೆಯ ಮೇಲೇರಿ ಹಳ್ಳಿ ಹಳ್ಳಿಗೆ ತೆರಳಿ ತಪಾಸಣೆ ಮಾಡುತ್ತಿದ್ದರು. ಇದೀಗ ಸರ್ಕಾರ ತಮಗೆ ಉತ್ತಮ ವಾಹನಗಳನ್ನು ನೀಡಿದೆ. ಅತ್ಯುತ್ತಮ ಸಂಪರ್ಕ ಸಾಧನಗಳನ್ನು ಒದಗಿಸಿದೆ. ಆದರೂ, ತಹಸೀಲ್ದಾರ್ ಕಚೇರಿಗಳಿಗೆ, ಶಾಲೆಗಳಿಗೆ, ವಸತಿ ನಿಲಯಗಳಿಗೆ ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಧೀನ ಕಚೇರಿಗಳು ಹಾಗೂ ಅಧೀನ ಅಧಿಕಾರಿಗಳು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಏಕೆ ಪರಿಶೀಲಿಸುತ್ತಿಲ್ಲ ? ಇದು ತಮ್ಮ ಕರ್ತವ್ಯವಲ್ಲವೇ ? ಎಂದು ಪ್ರಶ್ನಿಸಿದರು.

ಶಾಲೆಗಳಿಗೆ ಭೇಟಿ ನೀಡಿದಾಗ ಪ್ರತಿನಿತ್ಯ ಉಪಾಧ್ಯಾಯರು ಶಾಲೆಗೆ ಬರುತ್ತಿದ್ದಾರೆಯೇ ? ಕೆಲವೆಡೆ ಶಿಕ್ಷಕರು ಶಾಲೆಗಳಿಗೆ ತಾವು ಗೈರು ಹಾಜರಾಗಿ ಬದಲಿ ಶಿಕ್ಷಕರನ್ನು ನೇಮಕಮಾಡಿದ್ದಾರೆ ಎಂಬ ಆರೋಪಗಳ ಸತ್ಯಾಸತ್ಯೆಯ ವಾಸ್ತವಾಂಶವನ್ನು ಅರಿಯಲು ಸಾಧ್ಯವೇ ? ಬಿಸಿಯೂಟ ಹಾಲು ವಿತರಣೆ ಸಮರ್ಪಕವಾಗಿ ಆಗುತ್ತಿದೆಯೇ ? ಹಾಸ್ಟೆಲ್‍ಗಳಲ್ಲಿ ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೇ ? ಸಕಾಲದಲ್ಲಿ ಸಪ್ರಮಾಣದಲ್ಲಿ ಆಹಾರ ಕೊಡಲಾಗುತ್ತಿದೆಯೇ ? ಎಂಬುದು ಬೆಳಕಿಗೆ ಬರುತ್ತದೆ.

ಸರ್ಕಾರದ ಅವಶ್ಯಕತೆಗಳಿಗೆ ಭೂಮಿ ಇಲ್ಲ

ಸರ್ಕಾರದ ಅಂಗನವಾಡಿ, ಆಸ್ಪತ್ರೆ, ಶಾಲೆ ಹಾಗೂ ವಸತಿ ನಿಲಯಗಳಿಗೆ ಭೂಮಿ ದೊರಕಿಸಿಕೊಡಲು ಸೂಚಿಸಿದಾಗ ತಮ್ಮಿಂದ ನೀರಸ ಪ್ರತಿಕ್ರಿಯೆ ಬರುತ್ತದೆ. ಜಿಲ್ಲೆಗಳಲ್ಲಿ ಸರ್ಕಾರಿ ಭೂಮಿ ಎಷ್ಟಿದೆ ? ಗೋಮಾಳದ ಭೂಮಿ ಎಷ್ಟಿದೆ ? ಖರಾಬು ಜಮೀನು ಎಷ್ಟಿದೆ ? ಕೆರೆ-ಕುಂಟೆಗಳು ಎಷ್ಟಿವೆ ? ಎಂಬ ಮಾಹಿತಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಲ್ಲದೆ ಬೇರೆಲ್ಲಿ ಲಭ್ಯವಿರಬೇಕು. ನೀವೇ ಹೇಳಿ ?

ಸರ್ಕಾರಿ ಜಮೀನು ಅತಿಕ್ರಮವಾಗಿದ್ದರೆ, ಎಷ್ಟು ಪ್ರಕರಣಗಳಲ್ಲಿ ತೆರವುಗೊಳಿಸಿದ್ದೀರಿ. ತೆರವುಗೊಳಿಸಿದ ಜಮೀನಿನ ರಕ್ಷಣೆಗೆ ಏನು ಕ್ರಮ ಕೈಗೊಂಡಿದ್ದೀರಿ ? ಇನ್ನು ಮುಂದೆ ಸರ್ಕಾರಿ ಜಮೀನು ಅತಿಕ್ರಮಣ ಆಗದಂತೆ ಕೈಗೊಳ್ಳಬಹುದಾದ ಕ್ರಮ ಹಾಗೂ ಉಪ ಕ್ರಮಗಳೇನು ? ಎಂಬ ಬಗ್ಗೆ ಚಿಂತಿಸಿದ್ದೀರಾ. ನೀವೇ ಆತ್ಮವಿಮರ್ಶೆ ಮಾಡಿಕೊಳ್ಳಿ.

ಇನ್ನು ಮುಂದಾದರೂ ಅಂಗನವಾಡಿ, ಆಸ್ಪತ್ರೆ, ಶಾಲೆ ಹಾಗೂ ವಸತಿ ನಿಲಯಗಳಿಗೆ ಹಠಾತ್ ಭೇಟಿ ನೀಡಿ. ದಿನಚರಿ ವರದಿ ಸಲ್ಲಿಸುವ ಪರಿಪಾಠವನ್ನು ಬೆಳೆಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.

ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಸಾಶನ, ಮನಸ್ವಿನಿ ಯೋಜನೆಯ ಮಾಸಾಶನಕ್ಕೆ ಸಂಬಂಧಿಸಿದ ಸಾವಿರಾರು ಅರ್ಜಿಗಳು ಬಾಕಿ ಇದ್ದರೂ ಕ್ರಮ ಜರುಗಿಸದೇ ಇದ್ದರೆ ಹೇಗೆ ? ರಾಜ್ಯಾದ್ಯಂತ ಪೋಡಿ ಪ್ರಕರಣಗಳ ಬಾಕಿ ಸಂಖ್ಯೆ ಲಕ್ಷದ ಗಡಿ ದಾಟಿದ್ದರೂ, ಅವುಗಳತ್ತ ಜಿಲ್ಲಾಧಿಕಾರಿಗಳು ಗಮನಹರಿಸಿಲ್ಲ ಏಕೆ ? ಕುಡಿಯುವ ನೀರು ಪೂರೈಕೆಗಾಗಿ ರಾಜ್ಯ ಸರ್ಕಾರ ನಗರಾಭಿವೃದ್ಧಿ ಇಲಾಖೆಗೆ 141 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದ್ದರೂ, ಕೇವಲ 28 ರೂ ಮಾತ್ರ ವೆಚ್ಚವಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಮೈಸೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ಬೀದರ್, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಶೂನ್ಯ ವೆಚ್ಚ ಎಂದು ದಾಖಲೆಗಳು ತಿಳಿಸುತ್ತವೆ. ಈ ಜಿಲ್ಲೆಗಳಲ್ಲಿ ಕುಡಿಯುವ ನೀರು ಸಮಸ್ಯೆಗಳೇ ಇಲ್ಲವೇ ? ಎಂದು ಮುಖ್ಯಮಂತ್ರಿ ಸೋಜಿಗ ವ್ಯಕ್ತಪಡಿಸಿದರು.

ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರು ದುಡ್ಡುಕೊಟ್ಟವರ ಕೆಲಸ ಮಾಡಿಕೊಡುತ್ತಾರೆ. ಇಲ್ಲದಿದ್ದರೆ, ಅಲೆದಾಡಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಉಪ ನೋಂದಣಾಧಿಕಾರಿಗಳ ಕಚೇರಿಯ ಕಾರ್ಯ ಚಟುವಟಿಕೆಗಳೂ ಕೂಡಾ ಇದಕ್ಕಿಂತಲೂ ಭಿನ್ನವಿಲ್ಲ. ಲಂಚ ಕೊಡದಿದ್ದರೆ, ಸುರೇಶ ಎಂಬುದಕ್ಕೆ ಬದಲಾಗಿ ಸುರೇಶ್ ಎಂದು ದಾಖಲಿಸಿ, ತಿದ್ದುಪಡಿಗಾಗಿ ಸತಾಯಿಸುತ್ತಾರೆ ಹಾಗೂ ಸುತ್ತಾಡಿಸುತ್ತಾರೆ. ಇಂತಹ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳ ಹಾಗೂ ಇಲಾಖಾ ಮುಖ್ಯಸ್ಥರು ಮಧ್ಯೆ ಪ್ರವೇಶಿಸಿ, ಜನಸಾಮಾನ್ಯರಿಗೆ ನ್ಯಾಯದೊರಕಿಸಿಕೊಡಬೇಡವೇ ? ಇಂತಹುದಕ್ಕೆ ತಮ್ಮ ಆತ್ಮಸಾಕ್ಷಿ ಸ್ಪಂದಿಸುವುದಿಲ್ಲವೇ ? ಜನಸಾಮಾನ್ಯರ ಬಳಿ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರು ಹೇಗೆ ವರ್ತಿಸುತ್ತಾರೆ ಎಂಬುದರ ಬಗ್ಗೆ ತಮಗೆ ಅರಿವಿದೆಯೇ ? ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ಛೇಡಿಸಿದರು.

ನಿಮ್ಮ ಲೋಪ ನಮಗೆ ಶಾಪ !

ನಿಮ್ಮ ಕರ್ತವ್ಯ ಲೋಪಕ್ಕೆ ಜನ ನಮಗೆ ಶಾಪ ಹಾಕುತ್ತಾರೆ. ಐದು ವರ್ಷಗಳಿಗೊಮ್ಮೆ ತಮ್ಮ ಕೋಪದ ತಾಪವನ್ನು ಹೊರ ಹಾಕುತ್ತಾರೆ. ತಾವು ಮಾತ್ರ ನೇಮಕವಾದ್ದರಿಂದ ನಿವೃತ್ತಿಯವರೆಗೆ ನೆಮ್ಮದಿಯಿಂದ ಇರುತ್ತೀರಿ. ಆದರೆ, ಜನರ ಶಾಪ ತಮಗೂ ತಟ್ಟುತ್ತದೆ ಎಂಬುದನ್ನು ಮಾತ್ರ ಮರೆಯಬೇಡಿ ಎಂದರು.

ಜನಸಂಪರ್ಕ ಸಭೆ ಕಡ್ಡಾಯ

ಜಿಲ್ಲೆಗಳಲ್ಲಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ಜನಸಂಪರ್ಕ ಸಭೆ ನಡೆಯಬೇಕು. ಆ ಸಭೆಯಲ್ಲಿ ಜಿಲ್ಲಾ ಉಸ್ತವಾರಿ ಸಚಿವರೂ, ಜಿಲ್ಲಾ ಉಸ್ತವಾರಿ ಕಾರ್ಯದರ್ಶಿಗಳೂ, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೂ ಒಳಗೊಂಡಂತೆ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳೂ ಪಾಲ್ಗೊಳ್ಳಬೇಕು. ಜಿಲ್ಲಾ ಜನತೆಯ ಕುಂದು-ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿ, ನಿಯಮಾವಳಿಯ ಚೌಕಟ್ಟಿನಲ್ಲಿ ಅವುಗಳಿಗೆ ಕ್ಷಿಪ್ರವಾಗಿ ಸ್ಪಂದಿಸಬೇಕು. ತದ ನಂತರ, ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಸಭೆಯಲ್ಲಿ ಜನಸಂಪರ್ಕ ಸಭೆಯಲ್ಲಿ ಮೂಡಿಬಂದ ವಿಷಯಗಳು ಹಾಗೂ ಕೈಗೊಂಡ ಕ್ರಮಗಳ ಕುರಿತು ಪರಾಮರ್ಶಿಸಿ ಸರ್ಕಾರಕ್ಕೆ ಅನುಸರಣಾ ವರದಿ ಕಳುಹಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

ಬೇಜವಾಬ್ದಾರಿತನದ ಪರಮಾವಧಿ

ಮಾಧ್ಯಮಗಳಲ್ಲಿ ವ್ಯಕ್ತವಾಗುವ ದೂರುಗಳಿಗೆ ಕೂಡಲೇ ಸ್ಪಂದಿಸಿ, ಸ್ಪಷ್ಟನೆ ಕೊಡಿ. ಇಲ್ಲವಾದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಮುಖ್ಯಮಂತ್ರಿಗಳ ಸಚಿವಾಲಯವೇ ಪಟ್ಟಿ ಮಾಡಿ ಮಾಧ್ಯಮಗಳಲ್ಲಿ ಬಿತ್ತರಗೊಂಡ ಹಾಗೂ ಪ್ರಕಟಗೊಂಡ 160 ಪ್ರತಿಕೂಲ ವಿಚಾರಗಳನ್ನು ಜಿಲ್ಲೆಗಳಿಗೆ ಕಳುಹಿಸಿ ಕ್ರಮವಹಿಸಿ ಅನುಸರಣಾ ವರದಿ ಸಲ್ಲಿಸುವಂತೆ ಸೂಚಿಸಿದರೂ ಕೇವಲ 19 ವಿಚಾರಗಳಿಗೆ ಮಾತ್ರ ಸ್ಪಂದನೆ ದೊರೆತಿದೆ. ಉಳಿದ 141 ವಿಚಾರಗಳಿಗೆ ದೊರೆತಿಲ್ಲ ಎಂಬುದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಬೇಜವಾಬ್ದಾರಿತನದ ಪರಮಾವಧಿ ಎಂದು ಬಣ್ಣಿಸಬಹುದೇ ? ಇನ್ನು ಮುಂದೆ ಇಂತಹ ಧೋರಣೆಯನ್ನು ಸಹಿಸುವುದಿಲ್ಲ. ಮುಂದಿನ ಸಭೆಯಲ್ಲಿ ಇಂದಿನ ಸಭೆಯಲ್ಲಿ ಪ್ರಸ್ತಾಪಗೊಂಡ ಎಲ್ಲಾ ವಿಷಯಗಳ ಪ್ರಗತಿ ಪರಿಶೀಲಿಸುವುದಾಗಿ ತಿಳಿಸಿದ ಮುಖ್ಯಮಂತ್ರಿಯವರು ಇದು ನಾನು ತಮಗೆ ನೀಡುತ್ತಿರುವ ಕೊನೆಯ ಅವಕಾಶ ಎಂದು ಎಚ್ಚರಿಸಿದರು.

ಮಹತ್ವಯುತ ಈ ಸಭೆಯಲ್ಲಿ ರಾಜ್ಯ ಸಚಿವ ಸಂಪುಟದ ಎಲ್ಲಾ ಸಚಿವರೂ, ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್, ಅಪರ ಮುಖ್ಯ ಕಾರ್ಯದರ್ಶಿಗಳು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸರ್ಕಾರದ ಕಾರ್ಯದರ್ಶಿಗಳು, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಳಾದ ಎಲ್. ಕೆ. ಅತೀಕ್ ಹಾಗೂ ತುಷಾರ್ ಗಿರಿನಾಥ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

1 Comment

  1. ….said the guy sitting firmly in his air conditioned office eating chicken Tikka. You can tell how politicians are getting ready for assembly elections!!!

Leave a Reply

Please enter your comment!
Please enter your name here