ಹಾವೇರಿ: ರೈತರ ಸಾಲದ ಮೇಲಿನ ಬಡ್ಡಿ, ಸುಸ್ತಿ ಬಡ್ಡಿ ಮನ್ನಾ: ಸಿಎಂ ಘೋಷಣೆ

ಹಾವೇರಿ: ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರ ಸಾಲದ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಘೋಷಿಸಿದ್ದಾರೆ.
ಹಾವೇರಿ ಜಿಲ್ಲೆಯ ಗುಡಗೂರಿನಲ್ಲಿ ಕಾಂಗ್ರೆಸ್ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಸಾಲದ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಪ್ರಕಟಿಸಿದರು. ಅಲ್ಲದೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ನೀಡಲಾಗುತ್ತಿದ್ದ ಪರಿಹಾರದ ಮೊತ್ತವನ್ನು 2 ಲಕ್ಷದಿಂದ 5 ಲಕ್ಷ ರುಪಾಯಿಗೆ ಹೆಚ್ಚಿಸುವುದಾಗಿ ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಆರೋಗ್ಯ ಲಕ್ಷ್ಮಿ ಯೋಜನೆಯಡಿ ವಿಮೆ, ಮೃತ ರೈತನ ಪತ್ನಿಗೆ ಎರಡು ಸಾವಿರ ರುಪಾಯಿ ವಿಧವಾ ಮಾಶಾಸನ ಹಾಗೂ ಮೃತ ರೈತರ ಮಕ್ಕಳ ವಿದ್ಯಾಭ್ಯಾಸ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಸಿಎಂ ಹೇಳಿದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ದೇಶದೆಲ್ಲಡೆ ರೈತರ ಆತ್ಮಹತ್ಯೆ ಮಾಡಿಕೊಳುತ್ತಿದ್ದಾರೆ. ಆದರೆ ಬಿಜೆಪಿ ರಾಜ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಆರೋಪಿಸಿದರು.
ಸಹಕಾರಿ ಸಂಘಗಳಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ಪಡೆದು ಮರು ಪಾವತಿ ಮಾಡದೆ ಇರುವ ಸುಮಾರು 2.78 ಲಕ್ಷ ರೈತರಿಗೆ ಸುಸ್ತಿ ಬಡ್ಡಿ ಮನ್ನಾದಿಂದ ಅನುಕೂಲವಾಗಲಿದೆ.

ಹಾವೇರಿಗೆ ರಾಹುಲ್ ಭೇಟಿ, ಮೃತ ರೈತನ ಕುಟುಂಬಕ್ಕೆ ಸರ್ಕಾರಿ ನೌಕರಿ ಭರವಸೆ
ಹಾವೇರಿ: ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಮೈದೂರಿಗೆ ಭೇಟಿ ನೀಡಿದ್ದಾರೆ.
ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದ ಮೈದೂರಿನ ರೈತ ಅಶೋಕ್ ಅವರ ನಿವಾಸಕ್ಕೆ ಇಂದು ರಾಹುಲ್ ಗಾಂಧಿ ಭೇಟಿ ನೀಡಿ, ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ ಕೆಪಿಸಿಸಿ ವತಿಯಿಂದ 1 ಲಕ್ಷ ರುಪಾಯಿ ಪರಿಹಾರದ ಚೆಕ್‌ನ್ನು ನೀಡಿದರು.
ಇನ್ನು ಈ ವೇಳೆ ಉಪಸ್ಥಿತಿರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ, ಮೃತ ಅಶೋಕ್ ಅವರ ಪುತ್ರ ಕಿರಣ್‌ಗೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದರು.
ಈಗ ಮೃತ ರೈತ ಅಶೋಕ್ ಅವರ ನಿವಾಸದಿಂದ ಗುಡುಗೂರುವರೆಗೆ ರಾಹುಲ್ ಗಾಂಧಿ ಪಾತ್ರೆಯಾತ್ರೆ ಆರಂಭಿಸಿದ್ದು, ಅವರಿಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸಾಥ್ ನೀಡಿದ್ದಾರೆ.

Leave a Reply