ಹಿಂದೂ ಸಂಘಟನೆ ಕುರಿತು ಹೇಳಿಕೆ ನೀಡುವ ನೈತಿಕ ಹಕ್ಕು ರೈಗಿಲ್ಲ ; ಉಮಾನಾಥ ಕೋಟ್ಯಾನ್

ಹಿಂದೂ ಸಂಘಟನೆ ಕುರಿತು ಹೇಳಿಕೆ ನೀಡುವ ನೈತಿಕ ಹಕ್ಕು ರೈಗಿಲ್ಲ ; ಉಮಾನಾಥ ಕೋಟ್ಯಾನ್

ಮಂಗಳೂರು: ಹಿಂದೂ ಸಂಘಟನೆಯ ಕುರಿತು ಹೇಳಿಕೆ ನೀಡುವ ನೈತಿಕ ಹಕ್ಕು ದಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗಿಲ್ಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದ್ದರು.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಕೋಟ್ಯಾನ್ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈಯವರು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಮತೀಯ ಶಕ್ತಿಗಳ ವಿರುದ್ಧ ಪ್ರಜ್ಞಾವಂತರು ಜಾಗೃತರಾಗಬೇಕು ಹಾಗೂ ಅವರನ್ನು ದೂರ ಇಡಬೇಕೆಂದೂ, ಕೆಂಜೂರಿನಲ್ಲಿ ನಡೆದಿರುವ ಹತ್ಯೆಯ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೇ ಬಹುಶಃ ಸ್ವಾತಂತ್ರ್ಯ ಸಿಕ್ಕಿದ 70 ವರ್ಷಗಳಲ್ಲಿ ಸುಮಾರು 60 ವರ್ಷ ಈ ದೇಶವನ್ನು ಆಳಿದ ನಿಮ್ಮ ಸರಕಾರಕ್ಕೆ ದೇಶಪ್ರೇಮ ಅಥವಾ ರಾಷ್ಟ್ರಾಭಿಮಾನ ನಿಮಗಿದ್ದರೆ ಇವತ್ತು ದೇಶದ ಜಿಲ್ಲಾಕೇಂದ್ರಗಳಲ್ಲಿ ಉಗ್ರಗಾಮಿಗಳು ಮತ್ತು ಭಯೋತ್ಪಾದಕರ ತಂಗುದಾಣಗಳು ಬೇಕಾಬಿಟ್ಟಿಯಾಗಿ ಬೇರೂರುತ್ತಿರಲಿಲ್ಲ. ಇದರ ವಿರುದ್ಧ ಕಳೆದ ಹಲವಾರು ವರ್ಷಗಳಿಂದ ಭಾರತೀಯ ಜನತಾ ಪಾರ್ಟಿ, ವಿವಿಧ ಸಂಘಟನೆಗಳು ಸರಕಾರಕ್ಕೆ ಎಚ್ಚರಿಕೆಯನ್ನು ಕೊಡುತ್ತಾ ಬಂದರೂ ಕಾಂಗ್ರೆಸ್ಸಿಗರು ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಕಿವಿ ಇದ್ದರೂ ಕಿವಿ ಕೇಳದವರ ಹಾಗೆ ಇದನ್ನು ಬೆಳೆಸುತ್ತಾ ಬಂದಿದ್ದೀರಿ. ಕಾರಣ ನಿಮಗೆ ಈ ದೇಶದ ಜನರ ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ಕೇವಲ ಅಧಿಕಾರದ ಆಸೆಗಾಗಿ ಈ ದೇಶದ ಜನರ ನೆಮ್ಮದಿಯನ್ನೇ ಹಾಳುಮಾಡುತ್ತಾ ಬಂದ ನಿಮ್ಮ ಕಾಂಗ್ರೆಸ್ ಪಕ್ಷ ಇವತ್ತು ಭಾರತೀಯ ಜನತಾ ಪಾರ್ಟಿ ಮತ್ತು ಹಿಂದು ಸಂಘಟನೆಗಳ ಬಗ್ಗೆ ನೀವು ಬೇಜವಾಬ್ದಾರಿಯ ಮಾತನ್ನು ಆಡುತ್ತಿದ್ದೀರಿ.

ಕೆಂಜೂರಿನಲ್ಲಿ ನಡೆದಿರುವ ಪ್ರವೀಣ್ ಪೂಜಾರಿಯ ಹತ್ಯೆ ಇದು ನಿಜವಾಗಿಯೂ ಪ್ರತಿಯೊಬ್ಬನಿಗೂ ದುಃಖ ತರುವಂತ ಸಂಗತಿ. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೇ ಹಲವು ವರ್ಷಗಳಿಂದ ಗೋ ಹತ್ಯೆಯನ್ನು ನಿಷೇದಿಸಬೇಕು ಎಂದು ಭಾರತೀಯ ಜನತಾ ಪಾರ್ಟಿ ಒತ್ತಾಯಿಸುತ್ತಾ ಬಂದಿದೆ. ಆದರೆ ನಿಮ್ಮ ಸರಕಾರ ಬೇರೆ ಬೇರೆ ಕಾರಣಗಳನ್ನು ಕೊಡುತ್ತಾ ಅಲ್ಪಸಂಖ್ಯಾತರ ಓಲೈಕೆಗಾಗಿ ಗೋಹತ್ಯೆ ನಿಷೇದವನ್ನು ಜಾರಿಗೆ ತರಲಿಲ್ಲ. ಒಂದು ವೇಳೆ ಗೋ ಹತ್ಯೆ ನಿಷೇದ ಇವತ್ತು ಜಾರಿಯಾಗಿದ್ದರೆ, ಈ ರಾಜ್ಯದಲ್ಲಿ ಇವತ್ತು ಯಾರೂ ಗೋವುಗಳನ್ನು ಕದ್ದು ಕೊಂಡು ಹೋಗಿ ವಧೆ ಮಾಡುತ್ತಿರಲಿಲ್ಲ.

ಆದ್ದರಿಂದ ಪರೋಕ್ಷವಾಗಿ ಪ್ರವೀಣ್ ಪೂಜಾರಿಯ ಹತ್ಯೆಗೆ ನೀವು ಮತ್ತು ನಿಮ್ಮ ಸರಕಾರ ಕಾರಣವಾಗಿರುತ್ತದೆ. ಶೇ.80 ಮಂದಿ ಹಿಂದು ಸಂಘಟನೆಗಳಲ್ಲಿ ಕ್ರಿಮಿನಲ್‍ಗಳು ಇರುವುದು ಎಂದು ಹೇಳಿದ್ದೀರಿ. ಭಾರತೀಯ ಜನತಾ ಪಾರ್ಟಿಯ ಮತ್ತು ನಮ್ಮ ಪರಿವಾರ ಸಂಘಟನೆಗಳ ಕಾರ್ಯಕರ್ತರು ಈ ರಾಷ್ಟ್ರಕ್ಕಾಗಿ, ಗೋಮಾತೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನದ ಮೂಲಕ ರಾಷ್ಟ್ರ ರಕ್ಷಣೆಗಾಗಿ ನಿಂತಿದ್ದಾರೆ. ನೀವು ಗೋರಕ್ಷಕರನ್ನು ರೌಡಿಗಳು, ಕಿಡಿಗೇಡಿಗಳೆಂದು ಕರೆದಿದ್ದೀರಿ.

ಒಂದು ತಿಂಗಳ ಮೊದಲು ನಿಮ್ಮದೇ ಮಗ ಮಡಿಕೇರಿಯಲ್ಲಿ ಮಾಡಿದಂತಹ ಅನಾಹುತ ಮತ್ತು ಪುಂಡಾಟಿಕೆಗೆ ನೀವು ಏನೆಂದು ಹೇಳುವಿರಿ? ಇದು ನಿಜವಾದ ರೌಡಿಸಂ ಅಲ್ಲವೇ? ಆದ್ದರಿಂದ ಹಿಂದು ಸಂಘಟನೆ ಮತ್ತು ಕಾರ್ಯಕರ್ತರ ಬಗ್ಗೆ ಹೇಳಿಕೆ ಕೊಡುವಾಗ ಎಚ್ಚರವಿರಲಿ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್ ರವರು ಹೇಳಿದ್ದಾರೆ.

Leave a Reply