ಹಿರಿಯ ನಾಗರಿಕರಿಗೆ ಸೌಲಭ್ಯ ಒದಗಿಸಲು ಬದ್ಧ – ಜಿಲ್ಲಾಧಿಕಾರಿ ಟಿ. ವೆಂಕಟೇಶ್

ಹಿರಿಯ ನಾಗರಿಕರಿಗೆ ಸೌಲಭ್ಯ ಒದಗಿಸಲು ಬದ್ಧ – ಜಿಲ್ಲಾಧಿಕಾರಿ ಟಿ. ವೆಂಕಟೇಶ್

ಉಡುಪಿ:  ಎಲ್ಲ ಮಿತಿಗಳ ನಡುವೆಯೂ ಜಿಲ್ಲೆಯ ಹಿರಿಯ ನಾಗರಿಕರಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ತಲುಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.

ಅವರಿಂದು ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕರಿಗೆ ರಕ್ಷಣಾ ಕಾಯ್ದೆ ಅನುಷ್ಠಾನದ ಜಿಲ್ಲಾ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

dc-meeting-manipal

ಜಿಲ್ಲೆಯ ಆಸ್ಪತ್ರೆಯಲ್ಲಿ ಫಿಸಿಷಿಯನ್‍ಗಳ ಕೊರತೆ ಇರುವ ಬಗ್ಗೆ ಜಿಲ್ಲಾ ಸರ್ಜನ್ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಜಿಲ್ಲಾ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ 10 ಹಾಸಿಗೆಗಳ ವಾರ್ಡ್ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಸರ್ಜನ್ ಮಾಹಿತಿ ನೀಡಿದರು.

ಪೊಲೀಸ್ ಅಧೀಕ್ಷಕರ ಕಚೇರಿ ಆವರಣದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ನಡೆಸಲು ಸ್ಥಳಾವಕಾಶದ ಕೊರತೆ ಇರುವುದರಿಂದ ಭಾರತೀಯ ರೆಡ್ ಕ್ರಾಸ್ ಭವನದಲ್ಲಿ ತಾತ್ಕಾಲಿಕವಾಗಿ ನಡೆಸಲಾಗುತ್ತದೆ. ಆದರೆ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸಹಾಯವಾಣಿ ನಡೆಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 20 ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿದ್ದು ಎಲ್ಲರೂ ನೋಂದಾಯಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು. ನೋಂದಾಯಿಸಿಕೊಳ್ಳದೆ ಕರ್ತವ್ಯ ನಿರ್ವಹಿಸುವವರಿಗೆ ವೈಯಕ್ತಿಕವಾಗಿ ನೋಟೀಸು ನೀಡಲು ಜಿಲ್ಲಾಧಿಕಾರಿಗಳು ಹೇಳಿದರು.

ಕುಂದಾಪುರ ಹಿರಿಯ ನಾಗರಿಕರ ವೇದಿಕೆಯವರು ಜನವರಿ 2016ರಿಂದ ಗುರುತು ಚೀಟಿ ವಿತರಿಸುವ ಕಾರ್ಯವನ್ನು ಆರಂಭಿಸಿರುತ್ತಾರೆ. 12,740 ಕಾರ್ಡ್ ವಿತರಿಸಲಾಗಿದೆ; 2000 ಹಿರಿಯ ನಾಗರಿಕರು ಸಂಘದ ಸದಸ್ಯರಿರುತ್ತಾರೆ. ಹಿರಿಯ ನಾಗರಿಕರ ಸಹಾಯವಾಣಿಗೆ 1,54,000 ಅನುದಾನ ಬಿಡುಗಡೆಗೊಂಡಿದ್ದು ವೆಚ್ಚವಾಗಿದೆ. ಈವರೆಗೆ 1510 ಕರೆಗಳನ್ನು ಸ್ವೀಕರಿಸಲಾಗಿದೆ; 461 ವಿವಿಧ ಸೇವೆಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಹೇಳಿದರು.

ಜಿಲ್ಲೆಗೆ ಕಳೆದ ಸಾಲಿನಲ್ಲಿ ಹಿರಿಯ ನಾಗರೀಕ ಸೇವೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಮೊತ್ತದಲ್ಲಿ ಐಸಿಯು ವಾರ್ಡ್ ನಿರ್ಮಾಣಕ್ಕೆ ನೀಡಲಾಗಿದೆ ಎಂಬ ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ ರೋಹಿಣಿ ಹಿರಿಯ ನಾಗರಿಕರ ಆರೋಗ್ಯ ಶುಶ್ರೂಷೆಗೆ ಸರ್ಕಾರದ ಸೂಚನೆಯಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ , ಪ್ರಸಕ್ತ ಸಾಲಿನಲ್ಲಿ ಹಿರಿಯರ ಆರೋಗ್ಯ ಸೇವೆಗೆ 28 ಲಕ್ಷ ಅನುದಾನ ಬಿಡುಗಡೆಯಾಗಿದೆ , ಜಿಲ್ಲೆಯ ಹಿರಿಯ ನಾಗರಿಕರ ವಾರ್ಡ್‍ಗೆ ಐಸಿಯು ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಮುಖಾಂತರ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಮಾನವ ಹಕ್ಕುಗಳ ಪ್ರತಿಷ್ಠಾನದ ರವೀಂದ್ರನಾಥ್ ಶ್ಯಾನುಬೋಗ್ ಅವರು ಜಿಲ್ಲೆಯಲ್ಲಿರುವ ಹಿರಿಯ ನಾಗರಿಕ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಈ ಸಂಬಂಧ ಇನ್ನಷ್ಟು ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಸಂಘಟಿಸಬೇಕಿದೆ ಎಂದರು.

ಜೆನರಿಕ್ ಡ್ರಗ್ಸ್ ಆರಂಭಿಸುವ ಬಗ್ಗೆ, ಬಸ್‍ಗಳಲ್ಲಿ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಸ್ಟೆಪ್ ರಚಿಸಿಕೊಡುವ ಬೇಡಿಕೆಯನ್ನು ಸಭೆಯಲ್ಲಿ ಹಿರಿಯ ನಾಗರೀಕರು ಕೋರಿದರು.

ಯೋಜನಾ ನಿರ್ದೇಶಕ ಪ್ರಸನ್ನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಗ್ರೇಸಿ ಗೊನ್ಸಾಲ್ವಿಸ್, ಪೊಲೀಸ್ ಇಲಾಖೆಯಿಂದ ರಾಮಕೃಷ್ಣ, ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.

ಹಿರಿಯ ನಾಗರಿಕರ ಪ್ರತಿನಿಧಿಗಳಾಗಿ ಸಿ ಎಸ್ ರಾವ್, ವಾಸುದೇವ, ಸ್ಫೂರ್ತಿಧಾಮ ಕೋಟೇಶ್ವರ, ಲಕ್ಷ್ಮೀಬಾಯಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡರು.

Leave a Reply

Please enter your comment!
Please enter your name here