ಅಧಿಕಾರದ ಮದದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೆ ಸಹಿಸೋಲ್ಲ; ಪ್ರಮೋದ್ ಮಧ್ವರಾಜ್

Spread the love

ಅಧಿಕಾರದ ಮದದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರೆ ಸಹಿಸೋಲ್ಲ; ಪ್ರಮೋದ್ ಮಧ್ವರಾಜ್

ಉಡುಪಿ: ನನ್ನ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತನ ಮೇಲೆ ಬಿಜೆಪಿಗರು ಅಧಿಕಾರದ ಮದದಿಂದ ಹಲ್ಲೆ ನಡೆಸುವ ಕೆಲಸ ಮಾಡಿದರೆ ತಾನು ಸುಮ್ಮನಿರಲಾರೆ ಎಂದು ಉಡುಪಿಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಅವರು ಶನಿವಾರ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಮ್ಮ ಪಕ್ಷಕ್ಕೆ ಚುನಾವಣೆಯಲ್ಲಿ ಸೋಲಾದ ಕೂಡಲೇ ಅಲ್ಲಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವ ಪ್ರಯತ್ನಗಳು ನಡೆದಿದ್ದು ನಿಜಕ್ಕೂ ಬಿಜೆಪಿಗರ ಅಹಂಕಾರವನ್ನು ತೋರಿಸುತ್ತದೆ. ತಾನು ಐದು ವರ್ಷ ಈ ಕ್ಷೇತ್ರದ ಶಾಸಕನಾಗಿದ್ದ ವೇಳೆ ಎಲ್ಲಿಯೂ ಸಹ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಅಥವಾ ಅವರಿಗೆ ಸಮಸ್ಯೆಯಾಗದಂತೆ ನೋಡಿದ್ದೇನೆ. ಆದರೆ ಈಗಿನ ಬಿಜೆಪಿ ಶಾಸಕರು ಹಲ್ಲೆಗೆ ಕುಮ್ಮಕ್ಕು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ನನಗೆ ಅವರ ಜೊತೆ ಹೋಗಿ ಹೊಡೆದಾಡಲು ಸಾಧ್ಯವಿಲ್ಲ ಆದರೆ ತಾನೇ ಸ್ವತಃ ಸಂಬಂಧಪಟ್ಟ ಪೋಲಿಸ್ ಠಾಣೆಯ ಎದುರು ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದರು.

ನನ್ನ ಗೆಲುವಿಗಾಗಿ ನಮ್ಮ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿದ್ದಾರೆ ಅವರಿಗೆ ಧನ್ಯವಾದ ಸಮರ್ಪಿಸುವುದು ನನ್ನ ಕರ್ತವ್ಯವಾಗಿದೆ. ಚುನಾವಣಾ ಫಲಿತಾಂಶ ಬಂದ ಕೂಡಲೇ ತಾನು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಉಡುಪಿ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಧನ್ಯವಾದ ಸಲ್ಲಿಸಿದ್ದೆನೆ. ಕ್ಷೇತ್ರದ ಅಭಿವೃದ್ಧಿಗೆ ತಾನು ಕೇಳಿದಾಗಲೆಲ್ಲಾ ಅವರು ಕೋಟಿ ಕೋಟಿ ಅನುದಾನ ನೀಡಿದ್ದಾರೆ. ಅಂತಹ ಮುಖ್ಯಮಂತ್ರಿ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ.

ಸುಳ್ಳು ಮತ್ತು ಅಪಪ್ರಚಾರದ ಗೆಲುವು ಶಾಶ್ವತವಲ್ಲ. ಬಿಜೆಪಿ ಶಾಸಕ ರಘುಪತಿ ಭಟ್ ನನ್ನ ವಿರುದ್ದ ಸುಳ್ಳು ಅಪಪ್ರಚಾರ ಮಾಡಿ ಚುನಾವಣೆಯನ್ನು ಗೆದ್ದಿದ್ದಾರೆ. ಸುಳ್ಳು ಮತ್ತು ಅಪಪ್ರಚಾರದಿಂದ ಅಧಿಕಾರ ಪಡೆದುಕೊಂಡರೆ ಅದು ಶಾಶ್ವತವಲ್ಲ ಎನ್ನುವುದಕ್ಕೆ ಬಿ ಎಸ್ ಯಡ್ಯೂರಪ್ಪ ಉತ್ತಮ ಉದಾಹರಣೆಯಾಗಿದೆ.

ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕ ರಘುಪತಿ ಭಟ್ ಅವರು ಚುನಾವಣೆಯ ವೇಳೆ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಶಾಸಕರಾಗಿ ಆಯ್ಕೆಯಾದ ಒಂದು ತಿಂಗಳ ಒಳಗೆ ಮರಳು ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಅವರು ಒಂದು ವೇಳೆ ಅದನ್ನು ಪರಿಹರಿಸಲು ಅವರು ಸೋತರೆ ಅವರ ವಿರುದ್ದ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು. ಹಿಂದಿನ ಕಾಂಗ್ರೆಸ್ ಸರಕಾರ ಉಡುಪಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಪರ ಕೆಲಸಗಳನ್ನು ಆರಂಭಿಸಿದ್ದು ಅದನ್ನು ಪೂರ್ಣಗಳಿಸುವುದು ಹೊಸ ಶಾಸಕರ ಜವಾಬ್ದಾರಿಯಾಗಿದೆ ಎಂದರು.

ಮುಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಯಾಗಲಿದ್ದು ಕಾರ್ಯಕರ್ತರು ಇನ್ನಷ್ಟು ಜನರ ಸಹಾಯಕ್ಕಾಗಿ ಶ್ರಮಿಸುವ ಅಗತ್ಯವಿದೆ. ತಾನು ಕೂಡ ಹೆಚ್ಚಿನ ಸಮಯವನ್ನು ಜನರ ಸೇವೆಗಾಗಿ ಮೀಸಲಿಡಲಿದ್ದೇನೆ. ಸರಕಾರಿ ಕಚೇರಿಗಳಲ್ಲಿ ಜನರಿಗೆ ಸೇವೆ ನೀಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಮುಂದೆ ಬರುವ ವಿಧಾನಪರಿಷತ್, ನಗರಸಭೆ ಮತ್ತು ಲೋಕಸಭೆಯ ಚುನಾವಣೆಯನ್ನು ಗೆಲ್ಲುವ ಮೂಲಕ ಬಿಜೆಪಿಗೆ ಉತ್ತರ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಾಯಕರಾದ ಅಮೃತ್ ಶೆಣೈ, ಜನಾರ್ದನ ಭಂಡಾರ್ಕರ್, ಕಿಶನ್ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.


Spread the love