ಅಪ್ರಾಪ್ತರು ಬೈಕ್ ಸವಾರಿ ಮಾಡಿದರೆ ಪೋಷಕರ ವಿರುದ್ಧ ಕ್ರಮ: ಎಸ್ಪಿ ಸಂಜೀವ್ ಪಾಟೀಲ್

Spread the love

ಅಪ್ರಾಪ್ತರು ಬೈಕ್ ಸವಾರಿ ಮಾಡಿದರೆ ಪೋಷಕರ ವಿರುದ್ಧ ಕ್ರಮ: ಎಸ್ಪಿ ಸಂಜೀವ್ ಪಾಟೀಲ್

ಉಡುಪಿ: ಅಪ್ರಾಪ್ತ ವಯಸ್ಸಿನ ಯುವಕ ಯುವತಿಯರು ವಾಹನ ಚಲಾವಣೆ ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸುವುದರೊಂದಿಗೆ ಅವರ ಹೆತ್ತವರ ಮೇಲೆ ಕೂಡ ಪ್ರಕರಣ ದಾಕಲು ಮಾಡಲಾಗುವುದು ಅಲ್ಲದೆ ಎಲ್ಲಿಯಾದರೂ ಅಫಘಾತ ಸಂಭವಿಸಿ ಜೀವಹಾನಿಯಾದರೆ ಅದರ ಹೊಣೆಯನ್ನು ಹೆತ್ತವರ ಮೇಲೆ ಹಾಕಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಅವರು ಶನಿವಾರ ವಾರದ ಪೋನ್ ಇನ್ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಆಕಾಶವಾಣಿ, ಎಸ್ ಎಮ್ ಎಸ್ ಕಾಲೇಜು ಪರಿಸರದಲ್ಲಿ ಅಪ್ರಾಪ್ತ ಯುವಕರು ದ್ವಿಚಕ್ರ ವಾಹನ ಚಲಾಯಿಸುತ್ತಿರುವ ಕುರಿತು ಸಾರ್ವಜನಿಕರ ಕರೆಗೆ ಉತ್ತರಿಸಿ ಮಾತನಾಡಿದರು. ಅಂತಹ ಪ್ರಕರಣ ಕಂಡು ಬಂದಲ್ಲಿ ಕೂಡಲೇ ಅಂತಹ ಮಕ್ಕಳ ಪೋಷಕರನ್ನೇ ಜವಾಬ್ದಾರಿಯನ್ನಾಗಿಸಲಾಗುವುದು ಎಂದರು.

ನಗರದ ವಿವಿಧೆಡೆಯಲ್ಲಿ ಹಾಗೂ ಹಾಲಾಡಿಯಲ್ಲಿ ಪರವಾನಿಗೆ ಇಲ್ಲದೆ ಪಟಾಕಿ ಮಾರಾಟ ನಡೆಸುತ್ತಿದ್ದು, ರಸ್ತೆಯ ಫುಟ್ ಪಾತ್ ಮೇಲೆ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರ ಕರೆಗೆ ಉತ್ತರಿಸಿದ ಎಸ್ಪಿಯವರು ಅಂತಹ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದರು.

ಖಾಸಗಿ ಬಸ್ಸಗಳು ಕರ್ಕಶ ಹಾರ್ನ್ ಹಾಕಿ ಸಾರ್ವಜನಿಕರಿಗೆ ಸಮಸ್ಯೆ ನೀಡುತ್ತಿರುವ ಕುರಿತು ಸಾರ್ವಜನಿಕರ ಕರೆಗೆ ಉತ್ತರಿಸಿದ ಎಸ್ಪಿಯವರು ಪೋಲಿಸರು ನಿರಂತರವಾಗಿ ಅಂತಹ ಬಸ್ಸುಗಳ ವಿರುದ್ದ ಪ್ರಕರಣ ದಾಖಲು ಮಾಡುತ್ತಿದ್ದ ಕಳೆದ 7 ವಾರದ ಅವಧಿಯಲ್ಲಿ 929 ಕೇಸುಗಳು ದಾಖಲಾಗಿದೆ ಆದರೆ ಇನ್ನೂ ಕೂಡ ಮತ್ತೆ ಮತ್ತೆ ದೂರುಗಳು ಬರುತ್ತಿದ್ದು ಮುಂದಿನ ದಿನಗಳಲ್ಲಿ ಅಂತಹ ಕರ್ಕಶ ಹಾರ್ನ್ ಬಳಸುವ ಬಸ್ಸುಗಳನ್ನು ಸೀಝ್ ಮಾಡಿ ಕೋರ್ಟ್ ಮೂಲಕ ನೋಟಿಸ್ ನೀಡಿ ದಂಡ ಕಟ್ಟಿ ಬಿಡುಗಡೆಗೊಳಿಸುವ ಹೊಸ ವಿಧಾನ ಅನುಸರಿಸಬೇಕಾಗಿದೆ. ಅದನ್ನು ಮುಂದಿನ ದಿನಗಳಲ್ಲಿ ಜಾರಿಗೆ ಮಾಡಲಾಗುವುದು ಎಂದರು.

ಜ್ಯೋತಿಷಿಯವರು ಸಮಸ್ಯೆ ಪರಿಹಾರಕ್ಕೆ ಹಣ ಪಡೆದು ಸಮಸ್ಯೆ ಪರಿಹಾರ ಮಾಡದೆ ಹೆಚ್ಚು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಉಡುಪಿ ನಗರದ ನಿವಾಸಿಯೊಬ್ಬರ ಕರೆಗೆ ಉತ್ತರಿಸಿದ ಎಸ್ಪಿಯವರು ಅಂತಹ ವ್ಯಕ್ತಿಯ ವಿರುದ್ದ ಸ್ಥಳೀಯ ಠಾಣೆಗೆ ದೂರು ನೀಡುವಂತೆ ಸೂಚಿಸಿದರು ಅಲ್ಲದೆ ಜ್ಯೋತಿಷಿ, ಮಾಟ ಮಂತ್ರದ ಬಲೆ ಬೀಳದಂತೆ ಎಚ್ಚರಿಕೆ ನೀಡಿದರು.

ಕಲ್ಯಾಣಪುರ – ಸಂತೆಕಟ್ಟೆ ಬಸ್ಸಿನಲ್ಲಿ ಹಿರಿಯ ನಾಗರಿಕರಿಗೆ ಮೀಸಲಾಗಿರಿಸಿದ ಸೀಟಿನಲ್ಲಿ ಬೇರೆಯವರು ಕುಳಿತಿದ್ದದ್ದು ಸ್ಥಳ ಬಿಟ್ಟು ಕೊಡುವಂತೆ ಪ್ರಶ್ನಿಸಿದ್ದಕ್ಕೆ ತನ್ನ ಮೇಲೆಯೆ ಬಸ್ಸಿನ ಕಂಡಕ್ಟರ್ ಹಾಗೂ ಇತರರು ಹಲ್ಲೆ ನಡೆಸಲು ಬಂದಿದ್ದಾರೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿಯವರು   ಇಂದಿನಿಂದ ಕಡ್ಡಾಯವಾಗಿ ಹಿರಿಯ ನಾಗರಿಕರ ಸೀಟನ್ನು  ಹಿರಿಯನಾಗರಿಕರಿಗೆ ಮೀಸಲಾಗಿರುವಂತೆ ಪೋಲಿಸ್ ಇಲಾಖೆಗೆ ಸೂಚನೆ ನೀಡಿದರು. ಈ ಕುರಿತು ಡಿವೈಎಸ್ಪಿ ಕುಮಾರಸ್ವಾಮಿ ಸ್ವತಃ  ಆ ಭಾಗದ ಬಸ್ಸುಗಳ ತಪಾಸಣೆ ನಡೆಸುವಂತೆ ಸೂಚಿಸಿದರು.

ಶಿರೂರು – ಬೈಂದೂರು ಬಳಿಯ ಹೋಟೆಲ್ ಒಂದರಲ್ಲಿ ಉತ್ತರಕರ್ನಾಟಕದಿಂದ ಬಂದು ಇಸ್ಪಿಟ್ ಆಡುತ್ತಿರುವ ಕುರಿತು ಬಂದ ದೂರಿಗೆ ಉತ್ತರಿಸಿ ಇನ್ನೊಮ್ಮೆ ಅವರು ಬಂದ ಮಾಹಿತಿ ಸಿಕ್ಕಿದ್ದಲ್ಲಿ ಕೂಡಲೇ ನೇರವಾಗಿ ತನಗೆ ಸಂಪರ್ಕಿಸುವಂತೆ ಸೂಚಿಸಿದರು.

ಖಾಸಗಿ ಬಸ್ಸುಗಳಲ್ಲಿ ಹಣ ಪಡೆದು ಟಿಕೇಟ್ ನೀಡದೇ ಇರುವ ಕೂರಿತು ಸಾರ್ವಜನಿಕರ ದೂರಿಗೆ ಪ್ರತ್ರಿಕ್ರಿಯಿಸಿ ಇನ್ನೊಮ್ಮೆ ಅಂತಹ ಘಟನೆ ನಡೆದರೆ ಕೂಡಲೇ 100 ಕ್ಕೆ ಕರೆ ಮಾಡಿ ಕೂಡಲೇ ಅಂತಹ ಬಸ್ಸಿನ ನಿರ್ವಾಹಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಟಪಾಡಿ ಪಳ್ಳಿಗುಡ್ಡೆ ಪರಿಸರದ ಶಾಲಾ ಕಾಲೇಜು ಇರುವಲ್ಲಿ ಗೂಡಂಗಡಿಗಳಲ್ಲಿ ಸಿಗರೇಟ್ ಮಾರಾಟ ನಡೆಯುತ್ತಿದ್ದು ನಿಯಂತ್ರಿಸುವಂತೆ ಸಾರ್ವಜನಿಕರ ಕರೆಗೆ ಪ್ರತಿಕ್ರಿಯಿಸಿ ಸ್ಥಳೀಯ ಠಾಣಾದಿಕಾರಿಗಳ ಗಮನಕ್ಕೆ ತಂದು ನಿಯಂತ್ರಿಸಲಾಗುವುದು ಎಂದರು.

ಕಿನ್ನಿಮೂಲ್ಕಿ ಬಳಿಯ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವಿಸ ಜನರಿಗೆ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಯೋರ್ವರು ಮಾಡಿದ ಕರೆಗೆ ಉತ್ತರಿಸಿದ ಎಸ್ಪಿ ಕೂಡಲೇ ಕ್ರಮಕೈಗೊಳ್ಳಲಾಗುವುದು ಎಂದರು.

ಸಾಲಿಕೇರಿ –ಹೊನ್ನಾಳ, ಕುಂದಾಪುರ ಹಂಗಾರಕಟ್ಟೆ ಭಾಗಗಳಲ್ಲಿ ಪರವಾನಿಗೆ ಇದ್ದರೂ ಕೂಡ ಬಸ್ಸುಗಳು ಸರಿಯಾಗಿ ಬರುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗಿದೆ ಎಂಬ ದೂರಿಗೆ ಉತ್ತರಿಸಿದ ಎಸ್ಪಿಯವರು ಸೋಮವಾರದ ಒಳಗೆ ಇದಕ್ಕೆ ಪರಿಹಾರ ಕಂಡು ಹುಡುಕಲಾಗುವುದು ಎಂದರು.

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಬಳಿಯಲ್ಲಿ ರಾಹೆದ್ದಾರಿಯ ಬಳಿ ಶಾಲೆಯಿದ್ದು ಶಾಲೆ ಬಿಡುವ ವೇಳೆಯಲ್ಲಿ ಪೋಲಿಸ್ ಸಿಬಂದಿ ನೇಮಿಸುವಂತೆ ಮಾಡಿದ ಕರೆಗೆ ಉತ್ತರಿಸಿದ ಎಸ್ಪಿಯವರು ಜಿಲ್ಲಾ ಪೋಲಿಸ್ ಇಲಾಖೆಯಿಂದ ಪಾದಚಾರಿಗಳ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯ ಹಾದು ಹೋಗುವ ಜಿಲ್ಲೆಯ 26 ಕಡೆಗಳಲ್ಲಿ ಫೂಟ್ ಒವರ್ ಬ್ರಿಡ್ಜ್ ಮಾಡಲು ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ ನೀಡಲಾಗಿದೆ. ಅವುಗಳೆಂದರೆ ಕಟಪಾಡಿ ಜಂಕ್ಷನ್, ಪೊಲಿಪು, ಉಚ್ಚಿಲ, ಪಡುಬಿದ್ರೆ, ಅಂಬಲಪಾಡಿ, ಸಂತೆಕಟ್ಟೆ, ಬಲಾಯಿಪಾದೆ, ಕೋಟ ಹೈಸ್ಕೂಲ್, ಸಾಲಿಗ್ರಾಮ ದೇವಳ, ಬ್ರಹ್ಮಾವರ ಬಸ್ ನಿಲ್ದಾಣ, ಬ್ರಹ್ಮಾವರ ಎಸ್ ಎಮ್ ಎಸ್ ಕಾಲೇಜು, ಶೀರೂರು ಕೆಳಪೇಟೆ, ಯಡ್ತರೆ ಹೊಸ ಬಸ್ ಸ್ಟ್ಯಾಂಡ್ ಬಳಿ, ಬೈಂದೂರು ಜಂಕ್ಷನ್, ಅರೆಹೊಳೆ, ಅರಾಟೆ, ಮುಳ್ಳಿಕಟ್ಟೆ, ತ್ರಾಸಿ, ತ್ರಾಸಿ ಬೀಚ್ ರೋಡ್, ಮಾರಸ್ವಾಮಿ ದೇವಸ್ಥಾನ, ಟೈಗರ್ ಸರ್ಕಲ್, ಸಿಂಡಿಕೇಟ್ ಸರ್ಕಲ್, ಎಮ್ ಐ ಟಿ ಜಂಕ್ಷನ್ ಎಂದು ಎಸ್ಪಿಯವರು ತಿಳಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿಯವರು ಒಟ್ಟು 26 ಕರೆಗಳು ಬಂದಿದ್ದು, ಕಳೆದ ಒಂದು ವಾರದ ಅವಧಿಯಲ್ಲಿ ಒಟ್ಟು 15 ಮಟ್ಕಾ ಕೇಸುಗಳು ದಾಖಲಾಗಿದ್ದು 15 ಮಂದಿಯನ್ನು ಬಂಧಿಸಲಾಗಿದೆ. 8 ಗಾಂಜಾ ಸೇವನೆ ಪ್ರಕರಣದಲ್ಲಿ 11 ಮಂದಿಯನ್ನು ಬಂಧಿಸಲಾಗಿದೆ. ಕರ್ಕಶ ಹಾರ್ನಿಗೆ ಸಂಬಂಧಿಸಿ 93 ಪ್ರಕರಣ, ಹೆಲ್ಮೆಟ್ ರಹಿತ ಸವಾರಿ1119 ಕೇಸು ದಾಖಲಿಸಲಾಗಿದೆ. ದ್ವಿಚಕ್ರ ವಾಹನ ಚಾಲನೆ ಮಾಡುವವರ ಜೊತೆಯಲ್ಲಿ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. ಕುಡಿದು ವಾಹನ ಚಲಾಯಿಸಿದ್ದ ಕುರಿತು 28 ಹಾಗೂ ವಿಪರೀತ ವೇಗದ ಚಾಲನೆ ವಿರುದ್ದ 28 ಕೇಸು ದಾಖಲಾಗಿದೆ ಎಂದರು.


Spread the love