ಅಲ್ಪಸಂಖ್ಯಾತರ ಆಯೋಗಕ್ಕೆ ನ್ಯಾಯಾಂಗ ಅಧಿಕಾರ: ಬಲ್ಕೀಸ್ ಬಾನು

Spread the love

ಅಲ್ಪಸಂಖ್ಯಾತರ ಆಯೋಗಕ್ಕೆ ನ್ಯಾಯಾಂಗ ಅಧಿಕಾರ: ಬಲ್ಕೀಸ್ ಬಾನು

ಮ0ಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಆಯೋಗಕ್ಕೆ ರಾಜ್ಯ ಸರಕಾರವು ನ್ಯಾಯಾಂಗ ಅಧಿಕಾರವನ್ನು ನೀಡಿದೆ ಎಂದು ಆಯೋಗದ ಅಧ್ಯಕ್ಷೆ ಬಲ್ಕೀಸ್ ಬಾನು ತಿಳಿಸಿದ್ದಾರೆ.

minority

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಇದುವರೆಗೆ ಇತರೆ ಆಯೋಗಗಳಿಗೆ ಈ ಅಧಿಕಾರವಿದ್ದರೂ, ಅಲ್ಪಸಂಖ್ಯಾತರ ಆಯೋಗಕ್ಕೆ ಇರಲಿಲ್ಲ. ಈ ಬಗ್ಗೆ ಇತ್ತೀಚೆಗೆ ಸರಕಾರವು ಆಯೋಗಕ್ಕೆ ನ್ಯಾಯಾಂಗ ಅಧಿಕಾರ ನೀಡಿ ಆದೇಶ ಹೊರಡಿಸಿದೆ. ಇದರಿಂದ ಅಗತ್ಯಬಿದ್ದವರಿಗೆ ಸಮನ್ಸ್ ಸೇರಿದಂತೆ ಸಿವಿಲ್ ಅಧಿಕಾರವನ್ನು ಆಯೋಗವು ಹೊಂದಲಿದೆ ಎಂದು ಅವರು ಹೇಳಿದರು.

ತಾನು ಅಧಿಕಾರಕ್ಕೆ ಬಂದ ಬಳಿಕ ಇದುವರೆಗೂ 400ಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನೊಂದವರಿಗೆ ನ್ಯಾಯವನ್ನು ಒದಗಿಸುವುದು ಆಯೋಗದ ಮೊದಲ ಆದ್ಯತೆ. ಅಲ್ಪಸಂಖ್ಯಾತರು ನ್ಯಾಯಕ್ಕಾಗಿ ಆಯೋಗವನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತರ ಶಾಲೆಗಳ ಪ್ರಮಾಣಪತ್ರ ನೀಡುವಲ್ಲಿ ಸಮಸ್ಯೆಗಳುಂಟಾಗಿರುವುದು ತನ್ನ ಗಮನಕ್ಕೆ ಬಂದಿದೆ. ಅಲ್ಪಸಂಖ್ಯಾತರ ಶಾಲೆಗಳಲ್ಲಿ ಕನಿಷ್ಠ ಶೇ.25ರಷ್ಟಾದರೂ ಮಕ್ಕಳು ಇದ್ದರೆ, ಅಂತಹ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲಾಗುತ್ತದೆ. ಅಲ್ಪಸಂಖ್ಯಾತರಿಗೆ ಶೈಕ್ಷಣಿಕವಾಗಿ ಮುಂದೆ ಬರುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ. ಈ ಕುರಿತು ಆಯೋಗವು ಸೂಕ್ತವಾಗಿ ಸ್ಪಂದಿಸಲಿದೆ ಎಂದು ಬಲ್ಕೀಸ್ ಬಾನು ಹೇಳಿದರು.

ಇತ್ತೀಚೆಗೆ ಅರೇಬಿಕ್ ಭಾಷೆ ಕಲಿಸುತ್ತಿದ್ದಾರೆಂಬ ಕಾರಣಕ್ಕೆ ದುಷ್ಕರ್ಮಿಗಳು ದಾಳಿ ನಡೆಸಿದ ಮಂಗಳೂರಿನ ಬೊಂಡಂತಿಲ ಸೈಂಟ್ ಥಾಮಸ್ ಶಾಲೆಗೆ ಇಂದು ತಾನು ಭೇಟಿ ನೀಡಿ ಪರಿಶೀಲಿಸಿದ್ದೇನೆ. ವಿದ್ಯಾರ್ಥಿಗಳಿಗೆ ವಿನೂತನ ಕಲಿಕೆಯ ದೃಷ್ಠಿಯಿಂದ ಶಾಲೆಯಲ್ಲಿ ಅರೇಬಿಕ್ ಮತ್ತು ಜರ್ಮನ್ ಭಾಷೆ ಕಲಿಸಲಾಗುತಿತ್ತು. ಕರಾವಳಿಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿನವರು ಉದ್ಯೋಗದಲ್ಲಿರುವುದರಿಂದ, ಭವಿಷ್ಯದಲ್ಲಿ ಉದ್ಯೋಗಕ್ಕಾಗಿ ಗಲ್ಫ್ ರಾಷ್ಟ್ರಗಳಿಗೆ ತೆರಳುವ ಅಗತ್ಯ ಬಿದ್ದಲ್ಲಿ ಅರೇಬಿಕ್ ಭಾಷೆ ಕಲಿತರೆ ಸಹಕಾರಿಯಾಗಬಲ್ಲದು ಎಂಬ ದೃಷ್ಠಿಯಿಂದ ಶಾಲೆಯ ಆಡಳಿತ ಮಂಡಳಿಯು, ಪಾಲಕರೊಂದಿಗೆ ಚರ್ಚಿಸಿ, ವಿದೇಶಿ ಭಾಷೆಗಳ ತರಗತಿ ನಡೆಸುತ್ತಿತ್ತು ಎಂದು ಅವರು ಹೇಳಿದರು.

ಶಾಲೆಯ ಮೇಲಾಗಿರುವ ದಾಳಿಯ ಬಗ್ಗೆ ಶಾಲೆಯ ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಪಾಲಕರಿಂದ ಇಂದು ಮಾಹಿತಿ ಪಡೆದಿದ್ದು, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಂದ ವರದಿ ಪಡೆಸು, ಅಲ್ಪಸಂಖ್ಯಾತರ ಆಯೋಗವು ಸೂಕ್ತಕ್ರಮ ಕೈಗೊಳ್ಳಲಿದೆ ಎಂದು ಬಲ್ಕೀಸ್ ಬಾನು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಆಯೋಗದ ಸದಸ್ಯ ಮಾರ್ಸೆಲ್ ಮೊಂತೆರೋ, ಕಾರ್ಯದರ್ಶಿ ಸಲ್ಮಾ ಸಾಧೀಕ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಉಸ್ಮಾನ್, ಕೆಎಂಡಿಸಿ ವ್ಯವಸ್ಥಾಪಕ ಸಫ್‍ವಾನ್, ವಕ್ಫ್ ಅಧಿಕಾರಿ ಅಬೂಬಕ್ಕರ್ ಮತ್ತಿತರರು ಇದ್ದರು.

ಇದಕ್ಕೂ ಮೊದಲು ಆಯೋಗದ ಅಧ್ಯಕ್ಷರು, ಮಂಗಳೂರು ಬಿಷಪ್ ಅಲೋಸಿಯಸ್ ಪಾವ್ಲ್ ಡಿಸೋಜಾ ಅವರನ್ನು ಬಿಷಪ್ ಹೌಸ್‍ನಲ್ಲಿ ಭೇಟಿಯಾಗಿ ಚರ್ಚಿಸಿದರು.


Spread the love