ಉಡುಪಿ: ಜಿಲ್ಲಾ ಮಟ್ಟದ ಮುದ್ರಾ ಸಾಲದ ಮಹಾ ಮೇಳ

Spread the love

ಉಡುಪಿ:- ಕಿರು ಉದ್ದಿಮೆಗಳಿಗೆ ಬೆಂಬಲ ನೀಡಿ ಅವುಗಳ ಅಭಿವೃದ್ಧಿಗಾಗಿ ಭಾರತ ಸರಕಾರ ಲೋಕಾರ್ಪಣೆ ಮಾಡಿದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಮುದ್ರಾ ಸಾಲದ ಮಹಾ ಮೇಳ ಹಾಗೂ ಸಾಲ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳು ಹಾಗೂ ಪ್ರಧಾನ ಮಂತ್ರಿ ಜನ ಧನ ಯೋಜನೆಯ ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಡಾ. ವಿಶಾಲ್ ಆರ್. ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮುದ್ರಾ ಯೋಜನೆಯಡಿ ಜಿಲ್ಲೆಯ ವಿವಿಧ ಬ್ಯಾಂಕುಗಳ ಶಾಖೆಗಳು ಮಂಜೂರಿ ಮಾಡಿದ ಸಾಲ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಜನಧನ-ಆಧಾರ್-ಮೊಬೈಲ್ ಇವುಗಳ ಜೋಡಣೆಯಿಂದ ಮತದಾರ ಪಟ್ಟಿ ಶುದ್ಧೀಕರಣ, ಕಪ್ಪು ಹಣ ನಿಯಂತ್ರಣ, ಅರ್ಹ ಫಲಾನುಭವಿಗಳ ಗುರುತಿಸುವಿಕೆ ಮೂಲಕ ಸರಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ನಿರೀಕ್ಷಿತ ಅಭಿವೃದ್ಧಿ ಸಾಧಿಸಬಹುದು ಎಂದು ತಿಳಿಸಿದರು. ಮೇಕ್-ಇನ್-ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಕೇವಲ ರಫ್ತು ಆಧಾರಿತ ಉದ್ದಿಮೆಗಳಲ್ಲಿ ಹೂಡಿಕೆ ಮಾಡುವ ಬದಲು ರಪ್ತಿನ ಜೊತೆಗೆ ಆಂತರಿಕ ಬಳಕೆಗೆ ಒತ್ತು ನೀಡುವ ಉದ್ದಿಮೆಗಳನ್ನು ಪ್ರಾರಂಭಿಸುವುದರಿಂದ ನಿಜವಾದ ಅಭಿವೃದ್ಧಿ ಸಾಧ್ಯ ಎಂದು ಆಭಿಪ್ರಾಯಪಟ್ಟರು. ಉದ್ಯಮಗಳನ್ನು ಸ್ಥಾಪಿಸಲು ಬ್ಯಾಂಕುಗಳಿಂದ ಪಡೆದ ಸಾಲದ ಸದುಪಯೋಗ ಪಡಿಸುವುದಲ್ಲದೇ, ಪಡೆದ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿಯ ಪ್ರಾಮುಖ್ಯತೆಯನ್ನು ತಿಳಿಸುತ್ತಾ, ಇದರಿಂದ ಔಪಚಾರಿಕ ಹಣಕಾಸು ವ್ಯವಸ್ಥೆ ಬಲವರ್ಧನೆಗೊಂಡು ಇನ್ನೂ ಹೆಚ್ಚಿನ ಸಾಲ ಒದಗಿಸಲು ಮತ್ತು ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಸಹಕಾರಿ ಎಂದು ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಮಹಿಳಾ ಉದ್ಯಮಿಗಳು ಹೈನುಗಾರಿಕೆ ಮತ್ತು ಗೇರು ಸಂಸ್ಕರಣೆಯಲ್ಲಿ ತೊಡಗಿದ್ದು ಈ ಕ್ಷೇತ್ರಗಳಲ್ಲಿ ಮೌಲ್ಯವರ್ಧನೆಗೆ ಒತ್ತು ನೀಡಬೇಕೆಂದು ನಬಾರ್ಡ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಸಾಲ ಮಂಜೂರಾತಿ ಪತ್ರ ಪಡೆದ ಫಲಾನುಭವಿಗಳಿಗೆ ಸಾಲ ಮರುಪಾವತಿ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾದ ಶ್ರೀ ಕೆ.ಟಿ. ರೈ, ಮಹಾ ಪ್ರಬಂಧಕರು, ಸಿಂಡಿಕೇಟ್ ಬ್ಯಾಂಕ್ ಕ್ಷೇತ್ರ ಮಹಾ ಪ್ರಬಂಧಕರ ಕಚೇರಿ ಮಣಿಪಾಲ, ಇವರು ಮಾತನಾಡುತ್ತಾ ರಾಷ್ಟ್ತೀಯ ಅಂಕಿ-ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಅಂದಾಜು 5.77 ಲಕ್ಷ ಕಿರು ಉದ್ದಿಮೆಗಳಿದ್ದು, ಔಪಚಾರಿಕ ಬ್ಯಾಂಕಿಂಗ್ ವಲಯದಿಂದ ಹೊರಗುಳಿದಿರುವ ಉದ್ದಿಮೆಗಳು ಹಣಕಾಸಿನ ಕೊರತೆಯಿಂದಾಗಿ ಸುಸ್ಥಿರತೆ ಹಾಗೂ ಬೆಳವಣಿಗೆ ಹೊಂದಲು ಅಶಕ್ತವಾಗಿವೆ ಯಾ, ಅನಿಶ್ಚಿತ ಹಾಗೂ ದುಬಾರಿ ಸ್ಥಳೀಯ ಲೇವಾದೇವಿದಾರರ ಮೇಲೆ ಅವಲಂಬಿತರಾಗಿರಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಆದರೆ ನಮ್ಮ ಉಡುಪಿ ಜಿಲ್ಲೆಯು ಬ್ಯಾಂಕುಗಳ ತವರೂರಾಗಿದ್ದು ಮೊದಲಿನಿಂದಲೂ ಎಲ್ಲಾ ಬ್ಯಾಂಕುಗಳು ಕಿರು ಉದ್ದಿಮೆಗಳಿಗೆ ಆರ್ಥಿಕ ಸವಲತ್ತುಗಳನ್ನು ಒದಗಿಸಿ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ತಿಳಿಸಿದರು. ಕೇಂದ್ರ ಸರಕಾರ ಘೋಶಿಸಿರುವ ಮುದ್ರಾ ಸಾಲ ಯೋಜನೆ ಆರ್ಥಿಕವಾಗಿ ಹಿಂದುಳಿದ ಕಿರು ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ನಿರಂತರ ಸಾಲ ಯೋಜನೆಯಾಗಿದ್ದು ಈ ಯೋಜನೆಯಡಿ ಬರುವ ಉತ್ಪಾದನೆ, ವ್ಯಾಪಾರ ಮತ್ತು ಸೇವಾಕ್ಷೇತ್ರದ ಯಾವುದೇ ಕಿರು ಉದ್ದಿಮೆಗಳ ಹಣಕಾಸಿನ ಅವಶ್ಯಕತೆ ರೂ.50000/- ಕ್ಕಿಂತ ಕಡಿಮೆಯಾಗಿದ್ದರೆ ಅವುಗಳನ್ನು “ಶಿಶು” ಎಂದು, ರೂ.50000/- ಕ್ಕಿಂತ ಮೇಲ್ಪಟ್ಟು ರೂ.5.00 ಲಕ್ಷದ ವರೆಗಿನ ಉದ್ದಿಮೆಗಳನ್ನು “ಕಿಶೋರ” ಎಂದು ಹಾಗೂ ರೂ.5.00 ಲಕ್ಷಕ್ಕಿಂತ ಮೇಲ್ಪಟ್ಟು ರೂ.10.00 ಲಕ್ಷದ ವರೆಗೆ ಅವಶ್ಯಕತೆ ಇರುವ ಉದ್ದಿಮೆಗಳನ್ನು “ತರುಣ” ಎಂದು ವರ್ಗೀಕರಿಸಲಾಗಿದೆ ಎಂದು ತಿಳಿಸಿದರು.
ಬ್ಯಾಂಕುಗಳು ಸಾಲ ನೀಡುವಾಗ ಇವುಗಳಿಗೆ ಆದ್ಯತೆಯ ಮೇರೆಗೆ ಸಾಲ ಮಂಜೂರಿ ಮಾಡಿ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು. ಮುದ್ರಾ ಯೋಜನೆಯನ್ನು ಲೋಕಾರ್ಪಣೆ ಮಾಡಿದ ದಿನಾಂಕ 08.04.2015 ರಿಂದ ಇಲ್ಲಿಯ ವರೆಗೆ ಉಡುಪಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಮುದ್ರಾ ಯೋಜನೆಯಡಿ 8350 ಕಿರು ಉದ್ದಿಮೆದಾರರಿಗೆ ಒಟ್ಟು ರೂ. 97.28 ಕೋಟಿ ಸಾಲ ಮಂಜೂರಿ ಮಾಡಿದ್ದು ಈ ಪೈಕಿ ರೂ. 32.81 ಕೋಟಿ ಸಾಲವನ್ನು 3786 ಉದ್ದಿಮೆದಾರರಿಗೆ ಕಳೆದ ಒಂದು ತಿಂಗಳಲ್ಲಿ ಮಂಜೂರಿ ಮಾಡಿವೆ ಎಂದು ತಿಳಿಸಿದರು. ಈ ಯೋಜನೆ ಕಿರು ಉದ್ದಿಮೆದಾರರಿಗೆ ಅಭಿವೃದ್ಧಿ ಹೊಂದಲು ಒಳ್ಳೆಯ ಅವಕಾಶವಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಜನ ಧನ ಯೋಜನೆಯ ಕುರಿತು ಮಾತನಾಡುತ್ತಾ, ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಗಳ ನೋಂದಣಿ ಗಡುವನ್ನು ನವೆಂಬರ್ 30, 2015 ರ ವರೆಗೆ ವಿಸ್ತರಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿಸಿದರು.

ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರತಿನಿಧಿ ಶ್ರೀಮತಿ ಸುಪ್ರಿಯಾ ಮತ್ತು ಬಳಗದವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮೊದಲಿಗೆ ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ಶ್ರೀ ಕೆ. ಸುಬ್ಬ ರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮುದ್ರಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ ಪ್ರಮುಖ ಬ್ಯಾಂಕುಗಳ ಹಿರಿಯ ಅಧಿಕಾರಿಗಳಾದ ಶ್ರೀ ಪಿ. ಪಳನಿಸಾಮಿ, ಪ್ರಾದೇಶಿಕ ಪ್ರಬಂಧಕರು, ಸಿಂಡಿಕೇಟ್ ಬ್ಯಾಂಕ್; ಶ್ರೀಮತಿ ಶಾಲಿನಿ ಶೆಟ್ಟಿ, ಪ್ರಾದೇಶಿಕ ಪ್ರಬಂಧಕರು, ವಿಜಯಾ ಬ್ಯಾಂಕ್; ಶ್ರೀ ಟಿ.ಇ. ನಾಗಪ್ಪ, ಪ್ರಾದೇಶಿಕ ಪ್ರಬಂಧಕರು, ಭಾರತೀಯ ಸ್ಟೇಟ್ ಬ್ಯಾಂಕ್; ಡಾ. ವಿ. ರಾಜೇಂದ್ರಪ್ರಸಾದ್, ಪ್ರಾದೇಶಿಕ ಪ್ರಬಂಧಕರು, ಕಾರ್ಪೊರೇಶನ್ ಬ್ಯಾಂಕ್; ಶ್ರೀ ಎಮ್.ಜಿ. ಪಂಡಿತ್, ಸಹಾಯಕ ಮಹಾ ಪ್ರಬಂಧಕರು, ಕೆನರಾ ಬ್ಯಾಂಕ್; ಶ್ರೀ ಶ್ರೀಕಾಂತ್ ಹೆಗ್ಡೆ, ಪ್ರಾದೇಶಿಕ ಪ್ರಬಂಧಕರು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಶ್ರೀ ಪ್ರಸಾದ್ ರಾವ್, ಸಹಾಯಕ ಮಹಾ ಪ್ರಬಂಧಕರು, ನಬಾರ್ಡ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ವಿಜಯಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಮುಖ್ಯ ಪ್ರಬಂಧಕ ಶ್ರೀ ಕೆ. ಎನ್. ನಾಯ್ಕ ವಂದನಾರ್ಪಣೆ ಮಾಡಿದರು. ಸಿಂಡಿಕೇಟ್ ಬ್ಯಾಂಕಿನ ಸಾಸ್ತಾನ ಶಾಖಾ ಪ್ರಬಂಧಕ ಶ್ರೀ. ಪಿ. ಮಂಜುನಾಥ ಮತ್ತು ಬಳಗದವರು ಕಾರ್ಯಕ್ರಮ ನಿರೂಪಿಸಿದರು.


Spread the love

2 Comments

Comments are closed.