ಉದ್ಯೋಗ ಸೃಷ್ಟಿಸುವಲ್ಲಿ ಮೋದಿ ವಿಫಲ; ಅಂಚೆ ಕಚೇರಿಗೆ ಬೀಗ ಜಡಿದು ಯುವ ಕಾಂಗ್ರೆಸ್ ಪ್ರತಿಭಟನೆ

Spread the love

ಉದ್ಯೋಗ ಸೃಷ್ಟಿಸುವಲ್ಲಿ ಮೋದಿ ವಿಫಲ; ಅಂಚೆ ಕಚೇರಿಗೆ ಬೀಗ ಜಡಿದು ಯುವ ಕಾಂಗ್ರೆಸ್ ಪ್ರತಿಭಟನೆ

ಉಡುಪಿ:   ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಅಧಿಕಾರ ಬರುವ ಮುಂಚೆ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಉಮೇಶ್ ಬೊರೇಗೌಡ ಆರೋಪಿಸಿದರು.

ಅವರು ಮಂಗಳವಾರ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ದೇಶದ ಯುವಜನತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಆಯೋಜಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮೋದಿ ಸರಕಾರ ಕೇವಲ ಭರವಸೆ ನೀಡುವಲ್ಲಿ ಕಾಲ ಕಳೆಯುತ್ತಿದೆ. ಯಾವುದೇ ಹೊಸ ಕಾರ್ಯಕ್ರಮಗಳನ್ನು ಘೋಷಿಸುತ್ತಿಲ್ಲಘಿ. ಹಿಂದಿನ ಯುಪಿಎ ಸರಕಾರ ಜಾರಿಗೆ ತಂದ ಯೋಜನೆಗಳನ್ನೇ ಹೆಸರು ಬದಲಾಯಿಸಿ ಅನುಷ್ಠಾನಗೊಳಿಸುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ, ಶೇ. 10ರಷ್ಟು ಉದ್ಯೋಗ ಸೃಷ್ಟಿಸಲು ಕೇಂದ್ರ ಸರಕಾರದಿಂದ ಸಾಧ್ಯವಾಗಿಲ್ಲ. ಪೂರ್ವ ಸಿದ್ಧತೆಯಿಲ್ಲದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ದೇಶದ ಆರ್ಥಿಕತೆ ಸಂಪೂರ್ಣ ಕುಸಿದಿದೆ. ದೇಶದಾದ್ಯಂತ ಯುವಕರ ಆಕ್ರೋಶ ಭುಗಿಲೆಳುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು. ಯುವಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದರು.

ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವಿಘ್ನೇಶ್ ಕಿಣಿ ಮಾತನಾಡಿ ಕೇಂದ್ರ ಸರಕಾರ ಸಬ್ಕಾ ಸಾತ್ ಸಬ್ಕಾ ವಿಕಾಸ್ ಮಾಡುತ್ತಿಲ್ಲಘಿ, ಸಬ್ಕಾ ಸಾತ್ ಸಬ್ಕಾ ವಿನಾಶ್ ಮಾಡುತ್ತಿದೆ. ಅಧಿಕಾರಕ್ಕೆ ಬರುವ ಮೊದಲು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ, ಈಗ ಶೇ. 10ರಷ್ಟು ಉದ್ಯೋಗ ಸೃಷ್ಟಿಸಲು ಸರಕಾರದಿಂದ ಸಾಧ್ಯವಾಗಿಲ್ಲ. ಯುವಕರ ಜೀವನದ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಅಂಚೆ ಕಚೇರಿಯ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆ  ಕೂಗಿ ಕೆಲ ಕಾಲ ಅಂಚೆ ಕಚೇರಿಗೆ ಬೀಗಜಡಿದು ತಮ್ಮ ಆಕ್ರೋಶವನ್ನು ಹೊರಹಾಕಿದರು.

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೇಲ್ ಕಂದಕ್, ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್,  ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿಆಲ್ಮೇಡಾ, ಜಿಲ್ಲಾ ಕಾಂಗ್ರೆಸಿನ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ , ಮುಖಂಡರಾದ ಹರೀಶ್ ಕಿಣಿ, ಯತೀಶ್ ಕರ್ಕೇರಾ, ನೀರಜ್ ಪಾಟೀಲ್, ಮೆಲ್ವಿನ್ ಡಿಸೋಜಾ, ರಮೇಶ್ ಶೆಟ್ಟಿ, ನಾಗೇಶ್ ಕುಮಾರ್, ಸಾಯಿರಾಜ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 


Spread the love