ಉಳ್ಳಾಲ: ಗ್ರಾ.ಪಂ. ಸದಸ್ಯರಲ್ಲಿ ದೊಡ್ಡ ಕೆಲಸಗಳ ನಿರ್ವಹಣೆ ಕನಸು ಬೇಡ: ಜೆ.ಆರ್.ಲೋಬೊ ಕಿವಿಮಾತು

Spread the love

ಉಳ್ಳಾಲ: `ದೊಡ್ಡ ಕೆಲಸಗಳ ನಿರ್ವಹಣೆ ಗ್ರಾಮ ಪಂಚಾಯಿತಿ ಸದಸ್ಯರಿಂದ ಆಗದ ಮಾತು. ಈ ನಿಟ್ಟಿನಲ್ಲಿ ಅಂತಹ ಯೋಚನೆಗಳನ್ನು ಇಟ್ಟುಕೊಂಡು ಗ್ರಾಮಸ್ಥರಿಗೆ ಭರವಸೆ ಕೊಡುವ ಮುನ್ನ ಯೋಚಿಸುವುದು ಒಳಿದು’ ಎಂದು ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೊ ಕಿವಿಮಾತು ಹೇಳಿದರು.

12-mla-jr-lobo-011 04-mla-jr-lobo-003 05-mla-jr-lobo-004 02-mla-jr-lobo-001

ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇದರ ಆಶ್ರಯದಲ್ಲಿ ಮಂಗಳೂರು ದಕ್ಷಿಣ ವಾರ್ಡ್ ಸಮಿತಿಯಿಂದ ಭಾನುವಾರ ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರದ ಸಭಾಂಗಣದಲ್ಲಿ ಕೆಥೊಲಿಕ್ ಸಮುದಾಯದ ಜನಪ್ರತಿನಿಧಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.

ಆಯಾ ವಾರ್ಡಿನ ಮತದಾರರು ಅಪಾರ ನಂಬಿಕೆಗಳನ್ನು ಇಟ್ಟುಕೊಂಡು ಚುನಾಯಿಸುವ ಮೂಲಕ ಜವಾಬ್ದಾರಿ ನೀಡುತ್ತಾರೆ. ಐದು ವರ್ಷ ತನಗಿರುವ ಅವಧಿಯಲ್ಲಿ ವಾರ್ಡ್‍ಗೆ ಅಗತ್ಯವಿರುವ ಕೆಲಸಗಳನ್ನು ಇಲಾಖೆಗಳು, ರಾಜಕಾರಣಿಗಳ ಸಹಕಾರದಿಂದ ನಿರ್ವಹಿಸಿ ಮತದಾರರ ವಿಶ್ವಾಸ ಗಳಿಸಬೇಕು. ತನ್ನ ಬಳಿ ವಿರೋಧಿ ಬಂದರೂ ಆತನ ಸಮಸ್ಯೆ ಬಗ್ಗೆ ತಿಳಿದು ಪರಿಹಾರಕ್ಕೆ ಮುಂದಾಗಬೇಕು. ಎಷ್ಟೇ ಟೀಕೆಗಳು ಬಂದರೂ ಅದನ್ನು ತಾಳ್ಮೆಯಿಂದ ಸ್ವೀಕರಿಸುವ ಗುಣ ಹೊಂದಿರುವುದು ಅಗತ್ಯ ಎಂದರು.

1977ರಲ್ಲಿ ತಾನು ತಹಸೀಲ್ದಾರ್ ಆಗಿ ಅಧಿಕಾರ ವಹಿಸಿದ್ದ ದಿನಗಳಲ್ಲಿ ಭ್ರಷ್ಟಾಚಾರ ಎನ್ನುವ ಪದವೇ ಇರಲಿಲ್ಲ. ಅಂದು ಅಧಿಕಾರಿಗಳು, ರಾಜಕಾರಣಿಗಳಿಂದ ಸಣ್ಣ ತಪ್ಪು ನಡೆದರೂ ದೊಡ್ಡ ವಿಷಯವಾಗಿರುತ್ತಿತ್ತು. ಆದರೆ ಇಂದು ಭ್ರಷ್ಟಾಚಾರ ಎನ್ನುವ ಪದ ಸರ್ಕಾರಿ ಇಲಾಖೆ, ರಾಜಕೀಯವಾಗಿ ಸಾಮಾನ್ಯ ವಿಷಯ ಎನ್ನುವಂತಾಗಿದ್ದು ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಸಮರ್ಪಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸುವ ಮೂಲಕ ಭ್ರಷ್ಟಾಚಾರ ತೊಡೆದು ಹಾಕಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಕೆಥೊಲಿಕ್ ಸಭಾ ಕೇಂದ್ರೀಯ ಸಮಿತಿ ರಾಜಕೀಯ ಸಂಚಾಲಕ ಜೆರಾಲ್ಡ್ ಡಿಕೋಸ್ತ ಮಾತನಾಡಿ, ಹಿಂದಿಗಿಂತ ಇಂದು ರಾಜಕೀಯ ಸ್ಥಿತಿ ಬದಲಾಗಿದೆ. ಆದರೂ ಕೆಥೊಲಿಕ್ ಸಮುದಾಯ ರಾಜಕೀಯ ಎಂದರೆ ಹಿಂಜರಿಯುವ ಸ್ಥಿತಿ ಬದಲಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಕೆಥೊಲಿಕ್ ಸಭಾ ಕೇಂದ್ರೀಯ ಸಮಿತಿ ಅಧ್ಯಕ್ಷೆ ಪ್ಲೇವಿ ಡಿಸೋಜ, ಮಾಜಿ ಅಧ್ಯಕ್ಷ ವಲೇರಿಯನ್ ಡಿಸೋಜ ಮಜಿಕಟ್ಟ ಪಾವೂರು, ಪಾನೀರ್ ಚರ್ಚ್ ಧರ್ಮಗುರು ವಿಕಾರ್ ಡೆನ್ನಿಸ್ ಮೋರಸ್, ಮಾರ್ಸೆಲ್ ಡಿಸೋಜ, ರೋಶನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

ಕೆಥೊಲಿಕ್ ಸಭಾ ನಿರ್ದೇಶಕ ರೆ.ಫಾ.ಜೆ.ಬಿ.ಸಲ್ದಾನ, ಸರ್ಕಾರಿ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದವರನ್ನು ಸನ್ಮಾನಿಸಲಾಯಿತು.

ಕೆಥೊಲಿಕ್ ಸಭಾ ಮಂಗಳೂರು ದಕ್ಷಿಣ ಅಧ್ಯಕ್ಷ ವಿನ್ಸೆಂಟ್ ಡಿಸೋಜ ಧರ್ಮನಗರ ಬೋಳಿಯಾರ್ ಸ್ವಾಗತಿಸಿದರು. ಜೋಸೆಫ್ ಡಿಸೋಜ ಸನ್ಮಾನಿತರ ಹೆಸರು ಓದಿದರು. ಕಾರ್ಯದರ್ಶಿ ಸುನಿಲ್ ಡಿಸೋಜ ಬೋಳ ವಂದಿಸಿದರು. ಫೆಲಿಕ್ಸ್ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು.


Spread the love