ಎತ್ತಿನಹೊಳೆ ವಿರೋಧಿಸಿ ಜಿಲ್ಲೆಯಲ್ಲಿ ಡಿ.10ರಿಂದ ಸಂಸದ ನಳೀನ್ ನೇತ್ರತ್ವದಲ್ಲಿ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ

Spread the love

ಎತ್ತಿನಹೊಳೆ ವಿರೋಧಿಸಿ ಜಿಲ್ಲೆಯಲ್ಲಿ ಡಿ.10ರಿಂದ ಸಂಸದ ನಳೀನ್ ನೇತ್ರತ್ವದಲ್ಲಿ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ

ಮಂಗಳೂರು: ದಕ ಜಿಲ್ಲೆಯ ನೇತ್ರಾವತಿ ನದಿಯನ್ನು ಉಳಿಸಲು ಮತ್ತು ಎತ್ತಿನಹೊಳೆ ಯೋಜನೆ ವಿರೋಧಿಸಿ ಸಂಸದ ನಳೀನ್ ಕುಮಾರ್ ಕಟೀಲ್ ಡಿಸೆಂಬರ್ 10 ರಿಂದ 12 ರವರೆಗೆ ಆಯೋಜಿಸಿರುವ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಗೆ ಎತ್ತಿನ ಹೊಳೆ ಯೋಜನೆಯನ್ನು ಆರಂಭದಿಂದಲೇ ವಿರೋಧಿಸುತ್ತಾ ಬಂದಿರುವ ಕೇಂದ್ರದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿಯವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸ್ವತಹ ಬರಮಾಡಿಕೊಳ್ಳಲಿದ್ದಾರೆ ಎಂದು ಎತ್ತಿನ ಹೊಳೆ ಸಂಯುಕ್ತ ಹೋರಾಟ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಹೇಳಿದರು.

ಅವರು ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರೆ ನದಿಯ ನೀರನ್ನು ಕಳಶಕ್ಕೆ ತುಂಬುವ ಮೂಲಕ ಚಾಲನೆಗೊಳ್ಳುವ ರಥಯಾತ್ರೆಯು ಸಪ್ತಕ್ಷೇತ್ರಗಳಾದ ಧರ್ಮಸ್ಥಳ, ಉಪ್ಪಿನಂಗಡಿ, ಪೊಳಲಿ, ಕದ್ರಿ, ಬಪ್ಪನಾಡು, ಕಟೀಲು ಮೂಲಕ ಸಾಗಲಿದೆ. ಈ ಹಾದಿಯಲ್ಲಿ ಸಾಗುವಾಗ ನೇತ್ರಾವತಿ, ಫಲ್ಗುಣಿ, ಶಾಂಭವಿ ನೀರಿನ ಜೊತೆಗೆ ನಂದಿನಿ ನದಿಯ ಕಳಶಕ್ಕೆ ತುಂಬುವ ಮೂಲಕ ಸಮಾಪ್ತಿಗೊಳಿಸಲಾಗುವುದು.

ಹೋರಾಟಗಾರ ಕಿಶೋರ್ ಸಕಲೇಶಪುರ ಎತ್ತಿನಹೊಳೆಯ ನೀರನ್ನು ಕಳಶಕ್ಕೆ ತುಂಬಲಿದ್ದು ಹಾದಿಯಲ್ಲಿ ಸಿಗುವ ಮಸೀದಿ, ಹಾಗೂ ಚರ್ಚುಗಳ ಧರ್ಮಗುರುಗಳು ಮೆರವಣಿಗೆಯನ್ನು ಸ್ವಾಗತಿಸಲಿದ್ದಾರೆ. ಜಿಲ್ಲೆಯನ್ನು ಉಳಿಸುವ ನಿಟ್ಟಿನಲ್ಲಿ ಪಕ್ಷಾತೀತ, ಧರ್ಮಾತೀತ ಹೋರಾಟ ಇದಾಗಲಿದ್ದು, ನೇತ್ರಾವತಿಯ ನೀರನ್ನು ತಿರುಗಿಸಲು ಹೊರಟವರಿಗೆ ಜನವರಿ 26 ರ ವರೆಗೆ ಗಡುವು ನೀಡಲಾಗುವುದು. ನಂತರ ಅವರ ಅಸ್ತಿತ್ವವನ್ನು ತಿರುಗಿಸುತ್ತೇವೆ. ಜಿಲ್ಲೆಯ ಜನತೆಯ ತಾಳ್ಮೆಗೂ ಒಂದು ಮಿತಿಯಿದ್ದು ಯಾವುದೇ ಹೋರಾಟಕ್ಕೂ ಸಿದ್ದ. ಇದರ ಪರಿಣಾಮಕ್ಕೆ ಸರಕಾರವೇ ಹೊಣೆಯಾಗಲಿದೆ ಎಂದು ವಿಜಯ ಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಮೋನಪ್ಪ ಭಂಡಾರಿ, ಪುರುಷೋತ್ತಮ ಚಿತ್ರಾಪುರ, ಎಂಜಿಹೆಗಡೆ, ದಿನಕರ ಶೆಟ್ಟಿ ಇತರರು ಉಪಸ್ಥಿತರಿದ್ದರು.


Spread the love