ಕಂಬಳ ಮುಂದುವರೆಸಲು ಕೇಂದ್ರಕ್ಕೆ ಸಂಸದರ ಮನವಿ

Spread the love

ಕಂಬಳ ಮುಂದುವರೆಸಲು ಕೇಂದ್ರಕ್ಕೆ ಸಂಸದರ ಮನವಿ

ಮ0ಗಳೂರು : ಕಂಬಳ ಕ್ರೀಡೆಗೆ ಕೇಂದ್ರ ಸರಕಾರವು ಬೆಂಬಲ ನೀಡಬೇಕು ಎಂದು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರು ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ.

ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ಕೋಣಗಳನ್ನು ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಸಾಂಪ್ರದಾಯಿಕ ಕ್ರೀಡೆಯಾಗಿರುತ್ತದೆ. ಕಂಬಳದ ಇತಿಹಾಸದಲ್ಲಿ ಕೋಣಗಳನ್ನು ಯಾವುದೇ ರೀತಿಯಾಗಿ ಹಿಂಸಿಸುವ ಹಾಗೂ ಈ ಕ್ರೀಡೆಯ ಸಂದರ್ಭದಲ್ಲಿ ಕೋಣಗಳು ಮೃತಪಟ್ಟ ನಿದರ್ಶನಗಳಿಲ್ಲ. ಈ ಕ್ರೀಡೆಯು ಕರಾವಳಿ ರೈತರ ಆಚರಣೆ, ಸಂಪ್ರದಾಯ ಹಾಗೂ ಸಂಸ್ಕೃತಿಯ ಪ್ರತೀಕವಾಗಿದ್ದು, ಕಂಬಳಕ್ಕೆ ಅದರದ್ದೇ ಆಗಿರುವ ಇತಿಹಾಸವಿದ್ದು ದಾಖಲೆಗಳು ಹಾಗೂ ಶಾಸನಗಳು ಇದಕ್ಕೆ ಸಾಕ್ಷಿಯಾಗಿರುತ್ತದೆ. ಕರಾವಳಿ ಕರ್ನಾಟಕದ ಬೈಂದೂರಿನಿಂದ ಕೇರಳದ ಕಾಸರಗೋಡಿನವರೆಗೆ ನೂರಾರು ಕಂಬಳ ಗದ್ದೆಗಳಿರುತ್ತವೆ.

ಕರ್ನಾಟಕ ಸೇರಿದಂತೆ ನಮ್ಮ ದೇಶದ ಸಂಸ್ಕೃತಿ, ಜನಪದ ಕ್ರೀಡೆ ಹಾಗೂ ಆಚರಣೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿರುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರವು ಕಂಬಳದಂತಹ ಗ್ರಾಮೀಣ ಕ್ರೀಡೆಗಳಿಗೆ ಅನುದಾನ ನೀಡಿ ಹಾಗೂ ಈ ಕ್ರೀಡೆಗಳಲ್ಲಿನ ಸಾಧಕರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಬೇಕು.
ಕರ್ನಾಟಕದ ಕಂಬಳಾಭಿಮಾನಿಗಳು ಕಂಬಳದ ಮೇಲೆ ಹೇರಲಾದ ನಿಷೇಧವನ್ನು ತೆರವುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ. ಗ್ರಾಮೀಣ ಕ್ರೀಡೆಗಳ ಪ್ರಾಮುಖ್ಯೆತೆಗಳನ್ನು ಮನಗಂಡು ಕೇಂದ್ರ ಸರಕಾರವು ಕಂಬಳ ಹಾಗೂ ಕಂಬಳದಂತಹ ಜಾನಪದ ಕ್ರೀಡೆಗಳನ್ನು ನಡೆಸಲು ಅನುಮತಿ ನೀಡುವುದಲ್ಲದೆ ಸರಕಾರವೇ ಇಂತಹ ಕ್ರೀಡೆಗಳನ್ನು ನಡೆಸಲು ಪ್ರೋತ್ಸಾಹವನ್ನು ನೀಡಬೇಕು. ಆದುದರಿಂದ ಕರ್ನಾಟಕದ ತುಳು ಭಾಷಿಕರ ಗುರುತಾಗಿರುವ ಕಂಬಳ ಕ್ರೀಡೆಯನ್ನು ನಡೆಸಲು ಕೇಂದ್ರ ಸರಕಾರವು ಈ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದರಾದ.ನಳಿನ್ ಕುಮಾರ್ ಕಟೀಲ್ ಇವರು ಮಂಗಳವಾರ ಚಳಿಗಾಲದ ಅಧಿವೇಶನದಲ್ಲಿ ನಿಯಮ 377ರ ಅಡಿಯಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸಿದರು.


Spread the love