ಕಾಮಧೇನು ಗೋಶಾಲೆ ಮತ್ತು ಗೋಧೂಳಿ ಸಭಾಗೃಹವನ್ನು ಉದ್ಘಾಟನೆ

Spread the love

ಕಾಮಧೇನು ಗೋಶಾಲೆ ಮತ್ತು ಗೋಧೂಳಿ ಸಭಾಗೃಹವನ್ನು ಉದ್ಘಾಟನೆ

ಉಡುಪಿ: ಉಡುಪಿ ಪೇಜಾವರ ಮಠದ ಗೋವರ್ಧನ ಗಿರಿ ಟ್ರಸ್ಟ್ ನಿಂದ ನಡೆಯುತ್ತಿರುವ ನೀಲಾವರ ಗೋಶಾಲೆಯಲ್ಲಿ ನೂತನವಾದ ಕಾಮಧೇನು ಗೋಶಾಲೆ ಮತ್ತು ಗೋಧೂಳಿ ಸಭಾಗೃಹವನ್ನು ಭಾವಿ ಪರ್ಯಾಯ ಪೀಠಧೀಶರಾದ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಉದ್ಘಾಟನೆ ಮಾಡಿ, ಅಂದು ಶ್ರೀ ಕೃಷ್ಣನು ವೃಂದಾವನದಲ್ಲಿ ಗೋವರ್ಧನ ಗಿರಿಗೆ ಪೂಜೆ ಮಾಡಲು ಗೋಪಾಲಕರಿಗೆ ಆದೇಶಿಸಿ ತಾನು ಸ್ವೀಕರಿಸಿದಂತೆ, ಇಂದು ಗೋವುಗಳ ಪೂಜೆ, ಸೇವೆ, ರಕ್ಷಣೆ ಮಾಡಿದರೆ ಕೃಷ್ಣ ಸ್ವೀಕಾರ ಮಾಡುತ್ತಾನೆ. ಈ ನಿಟ್ಟಿನಲ್ಲಿ ನೀಲಾವರ ಗೋಶಾಲೆಯಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥರು ಎಲ್ಲರಿಗೂ ಸೇವೆ ಮಾಡಲು ಅವಕಾಶ, ಅನುಕೂಲ ಮಾಡಿಕೊಟ್ಟು ಗೋರಕ್ಷಣೆಯ ಕಾರ್ಯ ಮಾಡುತಿದ್ದಾರೆ ಇದಕ್ಕೆ ಎಲ್ಲರೂ ಕೈ ಜೋಡಿಸಿ ಕೃಷ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ಆಶೀರ್ವಚನ ಮಾಡಿದರು.

ಟ್ರಸ್ಟ್ ನ ಅಧ್ಯಕ್ಷರು ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಕೃಷ್ಣನು ಗೋಪಾಲಕರೊಂದಿಗೆ ಗೋಸೇವೆ ಮಾಡಿದಂತೆ ನಾವೆಲ್ಲರೂ ಸೇರಿ ಗೋಸೇವೆ ಮಾಡಬೇಕು.ಗೋವಿನ ಹಾಲು,ಮೊಸರು,ಬೆಣ್ಣೆ,ತುಪ್ಪ,ಗೋಮೂತ್ರ ಗೋಮಯ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ.ಗೋಶಾಲೆಯಲ್ಲಿ ಪ್ರತಿ ತಿಂಗಳಿಗೆ ಸುಮಾರು 13 ಲಕ್ಷ ರೂಪಾಯಿ ಖರ್ಚು ಆಗುತ್ತದೆ ದಾನಿಗಳ ಸಹಕಾರದಿಂದ ನಡೆಯುತ್ತಿದೆಯೆಂದರು.

ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಗೋವಿನಲ್ಲಿ ಎಲ್ಲಾ ದೇವರ ಸನ್ನಿಧಾನವಿರುವುದರಿಂದ ಪ್ರತಿಯೊಂದು ಪದಾರ್ಥವು ಕೂಡ ಔಷಧಿಯ ಗುಣ ಹೊಂದಿರುತ್ತದೆ ಆದುದರಿಂದ ಪ್ರತಿಯೊಬ್ಬರು ಗೋಸೇವೆ ಮಾಡಬೇಕು ಎಂದು ಅನುಗ್ರಹ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಇಸ್ಕೊನ್ ಸಂಸ್ಥೆಯ ಮುಖ್ಯಸ್ಥರಾದ ಕಾರುಣ್ಯ ಪಂಡಿತ್ ದಾಸ್, ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರು,ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಯರಾಮ ಭಟ್ ಉಪಸ್ಥಿತರಿದ್ದರು.

ಸಭೆಯಲ್ಲಿ ಧಾನಿಗಳಿಗೂ ಹಾಗೂ ಕರ್ನಾಟಕ ಬ್ಯಾಂಕಿನ ಅಧಿಕಾರಿಗಳಿಗೂ ಸ್ವಾಮೀಜಿಯವರು ಶಾಲು ಹೊದಿಸಿ ಅನುಗ್ರಹಿಸಿದರು.


Spread the love