ಕಾರಂತ ಸಂಸ್ಮರಣೆ, ಕಾರಂತ ಕಲಾ ಕುಟೀರ ಉದ್ಘಾಟನೆ

Spread the love

ಕಾರಂತ ಸಂಸ್ಮರಣೆ, ಕಾರಂತ ಕಲಾ ಕುಟೀರ ಉದ್ಘಾಟನೆ

ಕೋಟ : ಸಮಯವನ್ನು ಮೀರಿ ಆಲೋಚನೆ ಮಾಡುವ ವ್ಯಕ್ತಿತ್ವ ಕಾರಂತರದ್ದು. ಗಾಂಧಿಯನ್ನು ಮೀರಿದವರು. ಕಾರಂತರ ಕೃತಿಗಳು ರಂಜನೀಯವಾಗಿರಲಿಲ್ಲ. ಜೀವನ ಮತ್ತು ಸಮಾಜದ ಎಲ್ಲ ಸಮಸ್ಯೆಗಳನ್ನು ಅರ್ಥೈಸಿಕೊಂಡು ತಮ್ಮ ಕೃತಿಗಳ ಮೂಲಕ ಹೊರಹಾಕಿದ್ದರು. ಅವರ ಮಾನವೀಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಪ್ರೇರಣೆ ನೀಡುವ ಕೆಲಸವಾಗಬೇಕು ಎಂದು ಎಂದು ಬೆಂಗಳೂರು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಹೇಳಿದರು.

ಸಾಲಿಗ್ರಾಮದ ಡಾ.ಶಿವರಾಮ ಕಾರಂತ ರಂಗರಥ ಮಾನಸದಲ್ಲಿ ಡಾ.ಕೋಟ ಶಿವರಾಮ ಕಾರಂತ ಸಂಶೋಧನ ಮತ್ತು ಅಧ್ಯಯನ ಸಂಸ್ಥೆಯ ವತಿಯಿಂದ ಭಾನುವಾರ ಡಾ.ಕಾರಂತರ 114ನೇ ಜನ್ಮ ಜಯಂತಿಯ ಪ್ರಯುಕ್ತ ಡಾ.ಕಾರಂತ ಸಂಸ್ಮರಣೆ, ವಿಶೇಷ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

malini

ಡಾ.ಕಾರಂತರ ಸಂಸ್ಮರಣೆ ಮಾಡಿದ ಪತ್ರಕರ್ತ ಹಾಗೂ ಲೇಖಕ ಚ.ಹ.ರಘುನಾಥ್ ಸಮಾಜದಲ್ಲಿ ಇಂದು ನಾವು ಕೃತಿಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದೇವೆಯೇ ಹೊರತು ವ್ಯಕ್ತಿಗೆ ಅಲ್ಲ. ಸರ್ಕಾರವಾಗಲೀ, ಯಾವುದೇ ಪರಿಷತ್ ಆಗಲೀ ಕಾರಂತರನ್ನು ಗುರುತಿಸದೇ ಇರುವುದರಿಂದ ಕಾರಂತರು ಕೇವಲ ಕರಾವಳಿ ಜಿಲ್ಲೆಗೆ ಸೀಮಿತವಾಗಿದ್ದಾರೆ ಎಂದು ಅವರು ವಿಷಾಧ ವ್ಯಕ್ತ ಪಡಿಸಿದರು.

ಸಮಾರಂಭದಲ್ಲಿ ಮಣೂರಿನ ಉದ್ಯಮಿ ಎಂ.ಸುಬ್ರಾಯ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಲೇಖಕ ಹಾಗೂ ಸಾಹಿತಿ ಮುರಳೀಧರ ಉಪಾಧ್ಯಾಯ ಉಪಸ್ಥಿತರಿದ್ದರು.

ಕಾರಂತ ಸಂಶೋಧನ ಮತ್ತು ಅಧ್ಯಯನ ಸಂಸ್ಥೆಯ ಅಧ್ಯಕ್ಷೆ ಬಿ.ಮಾಲಿನಿ ಮಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಘುರಾಮ್ ಬೈಕಾಡಿ ಅತಿಥಿಗಳನ್ನು ಪರಿಚಯಿಸಿದರು.

ಇದೇ ಸಂದರ್ಭ ರಂಗನಟ ಕಾರಂತರು ವಿವಿಧ ಪಾತ್ರಗಳಲ್ಲಿ ಮಿಂಚಿದ ವಿವಿಧ ಭಂಗಿಗಳ ಛಾಯಾಚಿತ್ರಗಳು ಮತ್ತು ಕಾರಂತರ ಕುಂಚದಿಂದ ಅರಳಿದ ಆಯ್ದ ವರ್ಣರಂಜಿತ ಛಾಯಾಚಿತ್ರಗಳ ಪ್ರದರ್ಶನ ಶಾಲೆ ಕಾರಂತ ಕಲಾ ಕುಟೀರವನ್ನು ಬೆಂಗಳೂರು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಉದ್ಘಾಟಿಸಿದರು.


Spread the love