ಕಾರ್ಕಳದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥ ಮತ್ತು ಮಾಹಿತಿ ಕಾರ್ಯಕ್ರಮ

Spread the love

ಕಾರ್ಕಳದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥ ಮತ್ತು ಮಾಹಿತಿ ಕಾರ್ಯಕ್ರಮ

ಕಾರ್ಕಳ: ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಾರ್ಕಳ, ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ಶ್ರೀ ನೇಮಿಸಾಗರ  ವರ್ಣೀಜಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಹಿರಿಯಂಗಡಿ ಕಾರ್ಕಳ, ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ 2017 ರ ಅಂಗವಾಗಿ ವಿದ್ಯಾರ್ಥಿಗಳಿಂದ ಜನಜಾಗೃತಿ ಜಾಥ ಮತ್ತು ಮಾಹಿತಿ ಕಾರ್ಯಕ್ರಮವನ್ನು ಶ್ರೀ ನೇಮಿಸಾಗರ ವಿದ್ಯಾಸಂಸ್ಥೆಯಲ್ಲಿ ಇತ್ತೀಚಿಗೆ ಆಚರಿಸಲಾಯಿತು.

ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಉದಯ ಎಸ್ ಕೋಟ್ಯಾನ್ ಇವರು ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ಕಾರ್ಯಕ್ರಮಗಳು , ಮಾಹಿತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು. ಹೆಚ್ಚುತ್ತಿರುವ ಜನಸಂಖ್ಯೆಯು ಹೇಗೆ ಅವಕಾಶಗಳನ್ನು ವಂಚಿಸುತ್ತದೆ, ಯಾವ ರೀತಿ ಸಮಸ್ಯೆಗಳು ಉಲ್ಬಣಗೊಳ್ಳುವುದು ಎಂಬುದರ ಬಗ್ಗೆ ತಿಳಿಸಿದರು.

 ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭಾ ಅಧ್ಯಕ್ಷರಾದ ಅನಿತಾ ಆರ್ ಅಂಚನ್ ಜನಸಂಖ್ಯಾ ಹೆಚ್ಚಳ ದೇಶದ ಅಭಿವೃದ್ಧಿಗೆ ಯಾವ ರೀತಿ ಹಾನಿಕಾರಕ, ಜನಸಂಖ್ಯಾ ಸ್ಥಿರತೆ ಸಾಧಿಸುವ ಅಗತ್ಯತೆ ಬಗ್ಗೆ ಹೇಳಿದರು.

ಮಾಹಿತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ ಜನಸಂಖ್ಯಾ ಹೆಚ್ಚಳ, ಸ್ಥಿರತೆ, ನಿಯಂತ್ರಣ ಮೊದಲಾದ ವಿಷಯದ ಕುರಿತುಸಮುದಾಯಕ್ಕೆ ಮಾಹಿತಿ ಹೇಗೆ ಸಹಕಾರಿ ಎಂಬುದರ ಕುರಿತು ತಿಳಿಸಿದರು.

ಜನಸಂಖ್ಯಾ  ದಿನಾಚರಣೆ ಕುರಿತು ಕರಪತ್ರ ಬಿಡುಗಡೆಗೊಳಿಸಿದ ಗಿರಿಧರ್ ಕಾಮತ್ ಅವರು ಜನಸಂಖ್ಯಾ ಸ್ಪೋಟದ ಪರಿಣಾಮಗಳೇನು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ರಾಮರಾವ್ ಇಂದಿನ ಸಮಾಜದಲ್ಲಿ ಜನಸಂಖ್ಯೆ ಬಗ್ಗೆ ಇರುವ ನಂಬಿಕೆಗಳೇನು ನಿಯಂತ್ರಣದ ಅಗತ್ಯತೆಗಳೇನು, ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಅಗತ್ಯತೆ, ಜನಸಂಖ್ಯಾ ಹೆಚ್ಚಳದಲ್ಲಿ ಸ್ಥಿರತೆ ಇಲ್ಲದಿದ್ದರೆ ಏನಾಗುತ್ತದೆ ಎಂಬುದರ ಕುರಿತು ಅಂಕಿಅಂಶಗಳ ಜೊತೆಗೆ ತಿಳಿಸಿದರು.

 ಕಾರ್ಯಕ್ರಮದಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಸಾಧನೆಗೈದ ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ  ಡಾ.ಮಹಂತ್ ಹೆಗ್ಡೆ, ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಶೇಖರ್ ಪೂಜಾರಿ, ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ವಿತನಾ ಹಾಗೂ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಲಕ್ಷ್ಮೀ ಇವರನ್ನು ಸನ್ಮಾನಿಸಲಾಯಿತು.

ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಶಿಧರ್ ಹೆಚ್ ಸ್ವಾಗತಿಸಿದರು, ಹಿರಿಯ ವೈದ್ಯೇತರ ಮೇಲ್ವಿಚಾರಕರಾದ ವಿ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು,ಹಿರಿಯ ಆರೋಗ್ಯ ಸಹಾಯಕಿ ವಿ.ಜೆ.ಅನ್ನಕುಟ್ಟಿ ವಂದಿಸಿದರು.


Spread the love