ಕಾಲೇಜು ಪ್ರಾದ್ಯಾಪಕರಿಗೆ ಪರಿಷ್ಕೃತ ಯುಜಿಸಿ ವೇತನ: ಕಾರ್ಣಿಕ್ ಅಭಿನಂದನೆ

Spread the love

ಕಾಲೇಜು ಪ್ರಾದ್ಯಾಪಕರಿಗೆ ಪರಿಷ್ಕೃತ ಯುಜಿಸಿ ವೇತನ: ಕಾರ್ಣಿಕ್ ಅಭಿನಂದನೆ

ಮಂಗಳೂರು: ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ಮಾದರಿಯಲ್ಲೇ ಕೇಂದ್ರೀಯ ವಿಶ್ವವಿದ್ಯಾನಿಲಯಗಳ, ರಾಜ್ಯದ ವಿಶ್ವವಿದ್ಯಾನಿಲಯಗಳ, ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ, ಸಹಪ್ರಾದ್ಯಾಪಕ ಹಾಗೂ ಪ್ರಾಧ್ಯಾಪಕರ ವೇತನ ಶ್ರೇಣಿಯನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದನ್ನು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಸ್ವಾಗತಿಸಿದ್ದಾರೆ.

ರಾಜ್ಯದ ಪ್ರಾಧ್ಯಾಪಕರು ಸೇರಿದಂತೆ ದೇಶದಾದ್ಯಂತ ಸುಮಾರು 8 ಲಕ್ಷ ಶಿಕ್ಷಕರಿಗೆ ಅನುಕೂಲವಾಗಲಿರುವ ಈ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಗೂ ಮಾನವ ಸಂಪನ್ಮೂಲ ಸಚಿವರಾದ ಪ್ರಕಾಶ್ ಜಾವಡೇಕರ್ ಇವರನ್ನು ವಿಶೇಷವಾಗಿ ಅಭಿನಂದಿಸಿರುತ್ತಾರೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವರು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದಾಗ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ಸಿಂಧನಕೇರಿ, ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ   ಅರುಣ್ ಶಹಪುರ, ಮಹಾವಿದ್ಯಾಲಯ ಶೈಕ್ಷಿಕ ಸಂಘದ ಪ್ರೊ. ರಘು ಅಕಮಂಚಿ ಒಳಗೊಂಡ ನಿಯೋಗ ಮನವಿ ಸಲ್ಲಿಸಿ ಪರಿಷ್ಕೃತ ಯುಜಿಸಿ ವೇತನ ಶ್ರೇಣಿಯನ್ನು ಜನವರಿ 1, 2016 ರಿಂದಲೇ ಪೂರ್ವಾನ್ವಯವಾಗುವಂತೆ ಶೀಘ್ರದಲ್ಲೇ ಜಾರಿಮಾಡುವಂತೆ ವಿನಂತಿಸಿದ್ದನ್ನು ಸ್ಮರಿಸಬಹುದಾಗಿದೆ. ಯುಜಿಸಿಯ ಪರಿಷ್ಕೃತ ವೇತನ ಶ್ರೇಣಿಯನ್ನು ರಾಜ್ಯದ ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳ ಶಿಕ್ಷಕರಿಗೆ ಕೂಡಲೇ ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.


Spread the love