ಕಾವ್ಯಶ್ರೀ ಪೂಜಾರಿ ಸಾವು ನ್ಯಾಯಸಮ್ಮತವಾಗಿ ತನಿಖೆಯಾಗಲಿ: ಜಯ ಸಿ.ಸುವರ್ಣ

Spread the love

ಕಾವ್ಯಶ್ರೀ ಪೂಜಾರಿ ಸಾವು ನ್ಯಾಯಸಮ್ಮತವಾಗಿ ತನಿಖೆಯಾಗಲಿ: ಜಯ ಸಿ.ಸುವರ್ಣ

ಮುಂಬಯಿ : ಕಾವ್ಯಶ್ರೀ ಪೂಜಾರಿ ಓರ್ವ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟು, ಬ್ಯಾಡ್ಮಿಂಟನ್ ತಾರೆ ಈಕೆ ಭಾರತ ದೇಶದ ಧ್ರುವತಾರೆಯೇ ಸರಿ. ಆದುದರಿಂದ ಈಕೆಯ ನಿಗೂಢ ಸಾವು ಪ್ರತೀಯೊಬ್ಬ ಭಾರತೀಯರ ಕಾಳಜಿಯಾಗಿದೆ. ಈಗಿರುವಾಗ ಬರೇ ಮನೆಮಂದಿ, ಕುಟುಂಬಸ್ಥರು, ಸಮುದಾಯಕ್ಕೆ ಸಾವಿನ ಸಂದೇಹಗಳು ಕಾಡುತ್ತಿರುವುದು ಸಹಜ. ಆ ನಿಟ್ಟಿನಲ್ಲಿ ನಿಷ್ಪಕ್ಷ ತನಿಖೆಯಾಗಿ ಕಾವ್ಯಳ ಸಾವಿಗೆ ಮತ್ತು ಹೆತ್ತವರಿಗೆ ನ್ಯಾಯ ಸಿಗಬೇಕೆಂಬ ಆಶಯ ನಮ್ಮದಾಗಿದೆ ಎಂದು ಬಿಲ್ಲವರ ಸರ್ವೋಚ್ಛ ನಾಯಕ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ತಿಳಿಸಿದರು.

ಇಂದಿಲ್ಲಿ ಸೋಮವಾರ ಪೂರ್ವಾಹ್ನ ಮುಂಬಯಿ ಉಪನಗರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಮಾಲೋಚನಾ ಸಭಾಗೃಹದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಜಯ ಸುವರ್ಣರು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಮೋಗವೀರರು, ಬಂಟರು, ಬಿಲ್ಲವರು ಅಕ್ಕತಂಗಿಯ ಮಕ್ಕಳಂತೆಯೇ ಬದುಕು ಸಾಗಿಸಿದವರು. ಸಾಮರಸ್ಯದ ಜೀವನ ಇತಿಹಾಸ ನಮ್ಮದು. ಆಳ್ವರು ಸ್ವಂತಿಕೆಯ ಪ್ರತಿಷ್ಠೆವುಳ್ಳವರಾಗಿದ್ದು ರಾಷ್ಟ್ರೀಯ ಮನ್ನಣೆಯ ಶೈಕ್ಷಣಿಕ ಸಂಸ್ಥೆಯನ್ನು ಮುನ್ನಡೆಸುವವರು. ಅವರ ಸಂಸ್ಥೆಯೂ ಒಳ್ಳೆಯ ಸಂಸ್ಥೆಯಾಗಿದ್ದು ಲಕ್ಷಾಂತರ ಮಕ್ಕಳಿಗೆ ಶಿಕ್ಷಣವನ್ನಿತ್ತು ಸುಶಿಕ್ಷಿತರನ್ನಾಗಿಸಿ ಜೀವನೋಪಾಯಕ್ಕೆ ಶ್ರಮಿಸಿದ ಸಂಸ್ಥೆ. ಘಟನೆಯನ್ನೇ ವಸ್ತುಸ್ಥಿತಿಯಾಗಿಸಿ ಸಮಾಜ, ಸಮುದಾಯಗಳಲ್ಲಿ ಶಾಂತಿ ಕದಡುವುದು ಸರಿಯಲ್ಲ. ಎಲ್ಲರೂ ಶಾಂತಿಯನ್ನು ಕಾಪಾಡಿಕೊಂಡು ತನಿಖೆಗೆ ಸಹಕರಿಸಬೇಕು. ಉಭಯ ಸಂಸ್ಥೆಗಳಾದ ನಾವು ಈ ಘಟನೆಯ ಸೂಕ್ತ ತನಿಖೆಗೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೂ ಲಿಖಿತವಾಗಿಯೇ ಮನವಿ ಮಾಡುತ್ತಿದ್ದೇವೆ. ಘಟನೆಯ ಹಿಂದಿನ ಕಳಂಕ ಶೀಘ್ರವೇ ನಿವಾರಣೆಯಾಗಬೇಕು ಎಂದರು.

ತುಳುನಾಡಿನ ಆದಿಯಿಂದಲೇ ನಾವೆಲ್ಲರೂ ಸಹೋದರತ್ವ ಬಾಂಧವ್ಯತ್ವದಿಂದಲೇ ಮುನ್ನಡೆದು ಬದುಕು ಕಟ್ಟಿ ಕೊಂಡವರು. ನಮ್ಮಲ್ಲಿ ಯಾವೊತ್ತೂ ಬಂಟ್ಸ್ ಬಿಲ್ಲವಸ್ ಎನ್ನುವ ಮನಸ್ತಾಪ ಉಂಟಾಗಿಲ್ಲ. ನಾವು ಪೂಜಿಸುವ ಬ್ರಹ್ಮಶ್ರೀ ನಾರಯಣ ಗುರುಗಳ ತತ್ವಗಳೇ ನಮಗೆ ವೇದವಾಕ್ಯ. ಅಂದಮೇಲೆ ನಮ್ಮಲ್ಲಿ ಅಂದೂ ಇಂದೂ ಮುಂದೆಂದೂ ಜಾತೀಯ ಸಂಘರ್ಷ ಉದ್ಭವಿಸದು. ಏನಿದ್ದರೂ ನಾವು ಮಾತುಕತೆ ಮೂಲಕವೇ ಪರಿಹರಿಸಿ ಕೊಳ್ಳುತ್ತಿದ್ದೇವೆ. ಈ ಪ್ರಕರಣದಲ್ಲೂ ಅಷ್ಟೇ ನಾವು ನ್ಯಾಯಪರವಾಗಿ ದನಿಗೂಡಿಸುತ್ತಿದ್ದೇವೆ. ಇದೀಗಲೇ ಈ ಪ್ರಕರಣ ತನಿಖೆ ಸಾಗುತ್ತಿದೆ. ಅಲ್ಲಿ ತನಕ ನಾವೇನೂ ಪ್ರತಿಕ್ರಿಯಿಸಲು ಅಸಾಧ್ಯ. ತನಿಖಾ ಫಲಿತಾಂಶ ನಂತರವಷ್ಟೇ ನಾವು ಸಮುದಾಯದ ಸಂಸ್ಥೆಗಳ ಅಭಿಪ್ರಾಯ, ಅಭಿಮತಗಳನ್ನು ಕ್ರೋಢಿಕರಿಸಿ ಮುಂದಿನ ಹೆಜ್ಜೆಗಳನ್ನಿರಿಸಲಿದ್ದೇವೆ. ಸಂಸ್ಥೆಗಳ ಒಟ್ಟು ನಿರ್ಣಾಯಕ್ಕೆ ಬದ್ಧರಾಗಿ ಕ್ರಮ ಕೈಗೊಳ್ಳಲಿದ್ದೇವೆ.

ನಾವು ಕಳೆದ ಐದಾರು ದಶಕಗಳಿಂದ ಸಕ್ರೀಯವಾಗಿ ಸರ್ವರಲ್ಲೂ ಬಂಧುತ್ವವನ್ನು ಮೈಗೂಡಿಸಿ ಜಾತಿಮತ ಧರ್ಮಪಂಥದ ವ್ಯತ್ಯಾಸ ಕಾಣದೆ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡು ಎಲ್ಲರಿಗೂ ನ್ಯಾಯಪರ ಸೇವೆ ಸಲ್ಲಿಸಿದವರು. ಯಾವುದೇ ಘಟನೆ, ವಿಚಾರಗಳನ್ನು ಸೂಕ್ಷ್ಮಗ್ರಹಿಕೆಯಿಂದ ಪರಿಗಣಿಸಿ ಮನವರಿಕೆ ಮಾಡಿಕೊಂಡು ನಿಧಾನಗತಿಯಲ್ಲಿ ಹೆಜ್ಜೆಗಳನ್ನಿಟ್ಟು ನ್ಯಾಯಯುತವಾಗಿಯೇ ಶ್ರಮಿಸಿದ್ದೇವೆ. ಇದೊಂದು ಸ್ವಜಾತೀಯ ಹೆಣ್ಣುಮಗಳಂತೆ ರಾಷ್ಟ್ರದ ಮಿನುಗುತಾರೆಯಾಗಿ ಬೆಳಗಿತ್ತಿರುವಂತೆಯೇ ಕಣ್ಮರೆಯಾಗಿರುವುದು ನಮ್ಮೆಲ್ಲರಲ್ಲೂ ತುಂಬಾ ನೋವು ತಂದಿದೆ ನಿಜ. ಕಾವ್ಯಶ್ರೀ ಸಾವು ಬಗ್ಗೆ ತಿಳಿದಿದ್ದರೂ ನನ್ನ ಆರೋಗ್ಯದ ದೃಷ್ಠಿಯಿಂದಾಗಿ ನಾನು ಈ ತನಕ ತನ್ನ ನಿಲುವು ಕೈಗೊಳ್ಳಲು ಸಾಧ್ಯವಾಗಿಲ್ಲ. ಆದರೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾರ್ಯಕಾರಿ ಸದಸ್ಯ ಡಾ| ರಾಜಶೇಖರ್ ಆರ್.ಕೋಟ್ಯಾನ್ ಘಟನೆಯ ಬೆನ್ನಲ್ಲೇ ತನ್ನ ನಿಯೋಗದೊಂದಿಗೆ ಕಾವ್ಯಳ ನಿವಾಸಕ್ಕೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ನೀಡಿ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಶೀಘ್ರವೇ ಕಾವ್ಯಳ ನಿವಾಸಕ್ಕೆ ಭೇಟಿ ನೀಡುವವನಿದ್ದು ಈ ಬಗ್ಗೆ ಡಾ| ಮೋಹನ್ ಆಳ್ವರಲ್ಲೂ ಮಾತುಕತೆ ನಡೆಸಲಿದ್ದೇನೆ. ಅಂದಮೇಲೆ ನಾವು ಸಾಮಾಜಿಕವಾಗಿ ಆತಂಕ ಸೃಷ್ಠಿಸಿ ಮನಸ್ತಾಪಕ್ಕೆ ಅವಕಾಶ ಕೊಡುವುದು ಸರಿಯಲ್ಲ. ತಪ್ಪಿಸ್ಥರಿಗೆ ಶಿಕ್ಷೆಯಾಗಲೇ ಬೇಕು. ಆ ಹಿನ್ನಲೆಯಲ್ಲೇ ನಮ್ಮ ಹೋರಾಟ ಮುನ್ನಡೆಯುವುದು ಎಂದೂ ಜಯ ಸುವರ್ಣರು ಪ್ರತಿಕ್ರಿಯಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮಾತನಾಡಿ ಡಾ| ಮೋಹನ್ ಆಳ್ವರ ಬಗ್ಗೆ ನಾನೂ ವೈಯಕ್ತಿಕ ನಂಟನಿರಿಸಿದ್ದವನು. ಅವರೊಬ್ಬ ಸಾಂಸ್ಕೃತಿಕ ರಾಯಭಾರಿ ಆಗಿದ್ದು ಅವರ ಗುಣಮಟ್ಟವುಳ್ಳ ಜಾಗತಿಕವಾದ ಶೈಕ್ಷಣಿಕ, ಸಾಮಾಜಿಕ ಸೇವೆ ಎಲ್ಲರಿಗೂ ಮಾದರಿ. ಎಲ್ಲರೊಂದಿಗೆ ಉತ್ತಮ ಒಡನಾಟವಿರಿಸಿರುವ ಅವರ ನಡೆನುಡಿಗಳೇ ಅವರ ಪ್ರತಿಷ್ಠೆಯಾಗಿದೆ. ಕಾವ್ಯಳ ಸಾವಿನ ಕುರಿತು ಅವರು ಸಂಪೂರ್ಣವಾಗಿ ಸಹಕರಿಸುವ ಬಗ್ಗೆ ಕೇಳಿ ತಿಳಿದಿದ್ದೇನೆ. ಅವರೋರ್ವ ಮೇಧಾವಿಯಾಗಿದ್ದು ತನ್ನ ಶೈಕ್ಷಣಿಕ ಕ್ಯಾಂಪಸ್‍ನಲ್ಲಾದ ಅಸಹಜ ಸಾವಿನ ಬಗ್ಗೆ ಸೂಕ್ತ ತನಿಕೆ ಆಗುವ ರೀತಿಯಲ್ಲಿ ಸಹರಿಸುವ ವಿಶ್ವಾಸವೂ ನಮ್ಮಲ್ಲಿದೆ ಎಂದರು.

ಕಾವ್ಯಳ ಸಾವು ಎಲ್ಲರಲ್ಲೂ ನೋವನ್ನುಂಟುಮಾಡಿದೆ. ಇದು ಕೂಲಂಕುಷವಾಗಿ ತನಿಖೆಯಾಗಿ ಎಲ್ಲರಿಗೂ ನ್ಯಾಯ ಸಿಗಬೇಕಾಗಿದೆ ಎನ್ನುವುದು ನಮ್ಮೆಲ್ಲರ ಕೋರಿಕೆ. ನಮ್ಮ ದೃಷ್ಟಿಯಲ್ಲಿ ಅದೂವೊಂದು ದೊಡ್ಡದಾದ ಸಂಸ್ಥೆ. ಆದರೆ ದೊಡ್ಡಸಂಸ್ಥೆಯಲ್ಲೂ ಸಮಸ್ಯೆ ಏನಾದರೂ ಆಗಿದ್ದಾದರೆ ಅದು ಒಳ್ಳೆಯ ಬೆಳವಣಿಗೆಯಲ್ಲಿ ನ್ಯಾಯಸಮ್ಮತವಾಗಿ ತನಿಖೆಯಾಗಲಿ ಎಂದು ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಧ್ಯಕ್ಷ ಎನ್.ಟಿ ಪೂಜಾರಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ವೇದಿಕೆಯಲ್ಲಿ ಅಸೋಸಿಯೇಶನ್‍ನ ಪೂರ್ವಾಧ್ಯಕ್ಷ ಎಲ್.ವಿ ಅವಿೂನ್, ಬಿಲ್ಲವರ ಹಿರಿಯ ಮುತ್ಸದ್ಧಿ ವಾಸುದೇವ ಆರ್.ಕೋಟ್ಯಾನ್ ಆಸಿನರಾಗಿದ್ದರು.

ಗೋಷ್ಠಿಯಲ್ಲಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್, ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ.ಬಂಗೇರ, ಪುರುಷೋತ್ತಮ ಎಸ್.ಕೋಟ್ಯಾನ್, ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್, ಎನ್.ಎಂ ಸನೀಲ್, ಚಂದ್ರಶೇಖರ ಎಸ್.ಪೂಜಾರಿ, ಜ್ಯೋತಿ ಕೆ.ಸುವರ್ಣ, ಸಿ.ಟಿ ಸಾಲ್ಯಾನ್, ಹರೀಶ್ ಮೂಲ್ಕಿ, ಶ್ರೀನಿವಾಸ ಆರ್. ಕರ್ಕೇರ, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ, ಪ್ರೇಮನಾಥ ಕೆ.ಕೋಟ್ಯಾನ್, ನಾಗೇಶ್ ಎಂ.ಕೋಟ್ಯಾನ್, ಉಮೇಶ್ ಎನ್.ಕೋಟ್ಯಾನ್, ಸುಮಿತ್ರಾ ಎಸ್.ಬಂಗೇರ, ವಿಲಾಸಿನಿ ಪೂಜಾರಿ, ಸುಜತಾ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.


Spread the love