ಕುಂದಾಪುರ : ತಾಲೂಕಿಗೆ ನಾಲ್ಕು ಕಡೆ ಜಪಾನ್ ಮಾದರಿ ರಸ್ತೆ  ಅಧಿಕಾರಿಗಳಿಂದ ಸಮೀಕ್ಷೆ ಆರಂಭ 

Spread the love

ಕುಂದಾಪುರ: ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಲ್ಲಿ ಅಂತ್ರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುವತ್ತ ಜಪಾನ್ ಮಾದರಿಯ ರಸ್ತೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಕುಂದಾಪುರ ತಾಲೂಕಿನ ನಾಲ್ಕು ಗ್ರಾಮೀಣ ರಸ್ತೆಗಳಿಗೆ ಜಪಾನ್ ಮಾದರಿಯ ರಸ್ತೆ ನಿರ್ಮಾಣ ಭಾಗ್ಯ ಒದಗಿಬಂದಿದೆ. ಅದಕ್ಕಾಗಿ ಈಗಾಗಲೇ ಸರ್ವೇ ಕಾರ್ಯ ಆರಂಭಗೊಂಡಿದ್ದು, ಮಳೆಗಾಲದ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಗೆ ಚಾಲನೆ ದೊರಕುವ ಸಾಧ್ಯತೆಗಳು ನಿಚ್ಚಳವಾಗಿದೆ.

unnamed (1)

ತಾಲೂಕಿನ ಅತ್ಯಂತ ಕುಗ್ರಾಮಗಳಾದ ಕೆರಾಡಿ ಹಾಗೂ ಮುದೂರಿಗೂ ಜಪಾನ್ ತಂತ್ರಜ್ಞಾನದ ರಸ್ತೆ ನಿರ್ಮಾಣ ಭಾಗ್ಯ ಒದಗಿ ಬಂದಿದ್ದು, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಎರಡು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಎರಡು ರಸ್ತೆಗಳ ಪ್ರಾಯೋಗಿಕ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ.

ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಡುಪಿ ತಾಲೂಕಿನ ಆವರ್ಸೆ ಗ್ರಾಮ ಪಂಚಾಯಿತಿ ವ್ಯಾಫ್ತಿಯ ವಂಡಾರು – ಮಾರ್ವಿ ರಸ್ತೆ, ತೆಕ್ಕಟ್ಟೆ-ದಬ್ಬೆಕಟ್ಟೆ-ಹೆಸ್ಕತ್ತೂರು ರಸ್ತೆ, ಬೈಂದೂರು ವಿಧಾನಸಭಾ ಕ್ಷೇತ್ರದ ಕೆರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಡೇಬೇರು – ಹೊಸಿಮನೆ ರಸ್ತೆ, ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದೂರು ಮೈದಾನದಿಂದ ಉದಯನಗರಕ್ಕೆ ಹೋಗುವ ರಸ್ತೆಯನ್ನು ಜಪಾನ್ ಮಾದರಿ ರಸ್ತೆ ನಿರ್ಮಾಣಕ್ಕೆ ಗುರುತಿಸಲಾಗಿದೆ.

ಏನಿದು ಜಪಾನ್ ಮಾದರಿ: ಜಪಾನ್ ಮಾದರಿಯ ರಸ್ತೆ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಜಪಾನ್ ತಂತ್ರಜ್ಞಾನವನ್ನೇ ಅಳವಡಿಸಲಾಗುತ್ತದೆ. ಕನಿಷ್ಟ ಮೂರು ಕಿ.ಮೀ. ಉದ್ದವಿರಬೇಕು ಎನ್ನುವ ನಿಯಮದಡಿಯಲ್ಲಿ ಸರ್ಕಾರ ಆಯ್ಕೆ ಮಾಡಿದ ರಸ್ತೆಗಳನ್ನು ಈ ತಂತ್ರಜ್ಞಾನದಲ್ಲಿ ಅನುಷ್ಟಾನಗೊಳಿಸಲಾಗುತ್ತದೆ. ಅಲ್ಲದೇ ಈ ರಸ್ತೆ ಕಾಮಗಾರಿಗೆ ಜಪಾನ್ ದೇಶವೇ ಹಣ ವಿನಿಯೋಗಿಸುತ್ತದೆ. ಭಾರತದ ರಸ್ತೆ ಅಭಿವೃದ್ಧಿಗಿಂತ ಜಪಾನ್ ತಂತ್ರಜ್ಞಾನದಲ್ಲಿ ಬಹಳಷ್ಟು ಅಭಿವೃದ್ಧಿ ಸಾಧಿಸಲಾಗಿದ್ದು, ಇದೇ ಮಾದರಿಯಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಎರಡೆರಡು ರಸ್ತೆಗಳನ್ನು ಪ್ರಾಯೋಗಿಕವಾಗಿ ಅನುಷ್ಟಾನಕ್ಕೆ ತರಲಾಗುತ್ತದೆ. ಯೋಜನೆ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಮತ್ತಷ್ಟು ರಸ್ತೆಗಳಿಗೆ ಜಪಾನ್ ತಂತ್ರಜ್ಞಾನ ಭಾಗ್ಯ ದೊರೆಯಲಿದೆ.

ಈ ಬಗ್ಗೆ ಸಮೀಕ್ಷೆ ಕಾರ್ಯ ಆರಂಭಗೊಂಡಿದ್ದು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಸಹಾಯಕ ಇಂಜಿನಿಯರ್ (ಅಭಿಯಂತರ) ದುರ್ಗಾದಾಸ್ ಹಾಗೂ ಕಿರಣ್ ಕನ್ಸಲ್ಟೆನ್ಸಿ ಸಂಸ್ಥೆಯ ಸರ್ವೇಯರ್ ಮಧು ಸಮೀಕ್ಷೆಗಾಗಿ ಮುದೂರಿಗೆ ಆಗಮಿಸಿದ್ದು, ಸರ್ವೇ ಕಾರ್ಯ ನಡೆದಿದೆ. ಸರ್ವೇ ಮುಗಿದ ನಂತರ ರರಸ್ತೆ ಕಾಮಗಾರಿಗೆ ತಗುಲುವ ಅಂದಾಜು ಪಟ್ಟಿ(ಎಸ್ಟಿಮೇಟ್)ಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ನಂತರ ಕಾಮಗಾರಿ ಗುತ್ತಿಗೆಗಾಗಿ ಟೆಂಡರ್ ಕರೆಯಲಾಗುತ್ತದೆ. ಟೆಂಡರ್ ಪ್ರಿಕ್ರಿಯೆಗೆ ಕನಿಷ್ಟ ಎರಡು ತಿಂಗಳುಗಳ ಕಾಲಾವಕಾಶ ನೀಡಲಾಗುತ್ತಿದ್ದು, ಮುಂದಿನ ನಾಲ್ಕು ತಿಂಗಳುಗಳೊಳಗೆ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Spread the love