ಕೃಷಿ ಇಲಾಖೆ ಯೋಜನೆಗಳನ್ನು ಬಳಸಿಕೊಳ್ಳಿ- ದಿನಕರ ಬಾಬು

Spread the love

ಕೃಷಿ ಇಲಾಖೆ ಯೋಜನೆಗಳನ್ನು ಬಳಸಿಕೊಳ್ಳಿ- ದಿನಕರ ಬಾಬು

ಉಡುಪಿ: ಜಿಲ್ಲೆಯ ಕೃಷಿ ಇಲಾಖೆಯಲ್ಲಿ ರೈತರಿಗಾಗಿ ಹಲವು ಯೋಜನೆಗಳಿದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸದ ಕಾರಣ ಯೋಜನೆಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧ್ಯವಾಗುತ್ತಿಲ್ಲ, ರೈತರು ಇಲಾಖೆಯಲ್ಲಿನ ಯೋಜನೆಗಳ ಪ್ರಯೋಜನ ಪಡೆಯುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿ ಇಲಾಖೆಯಲ್ಲಿ ಶೇ.90 ರ ಸಬ್ಸಿಡಿ ದರದಲ್ಲಿ ರೈತರಿಗೆ ಸ್ಪಿಂಕ್ಲರ್ ಸೌಲಭ್ಯ ಒದಗಿಸಲು ಹಾಗೂ ಕೃಷಿ ಯಂತ್ರೋಪಕರಣ ವಿತರಿಸಲು, ಮಿನಿ ಟ್ರಾಕ್ಟರ್ ಖರೀದಿಸಲು ಸಹಾಯಧನ ನೀಡಲಾಗುತ್ತಿದ್ದು, ರೈತರು ಈ ಯೋಜನೆಗಳ ಪ್ರಯೋಜನ ಪಡೆಯುವಂತೆ ತಿಳಿಸಿದ ದಿನಕರ ಬಾಬು, ಭೂ ಸಮೃದ್ದಿ ಯೋಜನೆಯ ಹಾಗೂ ಕೃಷಿ ಭಾಗ್ಯ ಯೋಜನೆಯ ಪ್ರಯೋಜನ ಪಡೆಯುವಂತೆ ತಿಳಿಸಿದರು.

ಪ್ರಸ್ತುತ ಇದುವರೆವಿಗೂ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ 18% ಕಡಿಮೆ ಮಳೆ ಆಗಿದೆ, ಆದರೆ ಕಳೆದ ವಾರ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಆರೋಗ್ಯಕರ ಬೆಳೆಯ ಬೆಳವಣಿಗೆ ಆಗಿದೆ, ರಾಸಾಯನಿಕ ಗೋಬ್ಬರಗಳ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಆಂಥೋನಿ ಮರಿಯಾ ಇಮಾನ್ಯುಯಲ್ ತಿಳಿಸಿದರು.

ಜಿಲ್ಲೆಯ ಎಲ್ಲಡೆ ಸ್ಚಚ್ಛತೆಯ ಬಗ್ಗೆ ಪರಿಣಾಮಕಾರಿಯಾಗಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು, ಯುವಕ ಮಂಡಲಗಳು ಗಮನಾರ್ಹವಾಗಿ ಕೆಲಸ ಮಾಡುತ್ತಿದ್ದಾರೆ ಆದರೆ ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಚತೆಯ ನಿರ್ವಹಣೆ ಕಳಪೆಯಾಗಿದೆ, ಇಂದಿನಿಂದಲೇ ಎಲ್ಲಾ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಹಸಿರು ಶಿಷ್ಠಾಚಾರ ಪಾಲಿಸುವಂತೆ ದಿನಕರ ಬಾಬು ಸೂಚಿಸಿದರು.

ಉಡುಪಿಯಲ್ಲಿ ಸ್ಥಳಾಂತರಿಸಲಾಗಿರುವ ಮಹಾತ್ಮಗಾಂಧಿ ಹಿರಿಯ ಪ್ರಾಥಮಿಕ ಶಾಲೆಯನ್ನು ದುರಸ್ತಿ ಮಾಡಿಸಿ, ಅಕ್ಟ್ಕೋಬರ್ ರಜೆಯ ನಂತರ ಪುನ: ಪ್ರಾರಂಭಿಸುವಂತೆ ಡಿಡಿಪಿಐ ರವರಿಗೆ ಸೂಚಿಸಿದ ದಿನಕರ ಬಾಬು, ಒಳಕಾಡು ಶಾಲೆಯಲ್ಲಿ ಸ್ಥಳಿಯ ಜಿ.ಪಂ ಸದಸ್ಯರ ಗಮನಕ್ಕೆ ಹಾಗೂ ಜಿಲ್ಲಾ ಪಂಚಾಯತ್ ಗಮನಕ್ಕೆ ತರದೇ ಕಾರ್ಯಕ್ರಮ ಆಯೋಜಿಸುವ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಈ ಕುರಿತು ವರದಿ ನೀಡುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ವಿತರಣೆ ವಿಳಂಬವಾಗಿರುವುದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗಿದೆ ಎಂದು ದಿನಕರ ಬಾಬು ತಳಿಸಿದರು, ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿರುವ ಅರ್ಹ ಫನಾನುಭವಿಗೆ ಚಿಕಿತ್ಸೆ ಉದ್ದೇಶಕ್ಕಾಗಿ ತಾತ್ಕಾಲಿಕ ಕಾರ್ಡ್ ನೀಡಲಾಗುವುದು ಎಂದು ಆಹಾರ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ 1191 ಬಿಪಿಎಲ್ ಕಾರ್ಡ್ ಮುದ್ರಣ ಆಗಿದ್ದು, ಶೀಘ್ರದಲ್ಲಿ ಅಂಚೆ ಮೂಲಕ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಲಿದೆ ಎಂದು ಹೇಳಿದರು.

ಮಾಹಿತಿ ಮರಳು ತೆಗೆಯುವ ಪಂಚಾಯತ್‍ಗೆ ನೇರವಾಗಿ ರಾಜಧನವನ್ನು ಪಾವತಿಸುವಂತೆ ಹಾಗೂ ಶಿರೂರು ಕುಂದಾಪುರ ನಡುವೆ ಪರ್ಮಿಟ್ ಪಡೆದರೂ ಬಸ್ ವ್ಯವಸ್ಥೆ ಕಲ್ಪಿಸಿದ ಕ.ರಾ.ರ.ಸಾ.ನಿಗಮದ ಅಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಿರುದ್ಧ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಅಸಮಧಾನ ವ್ಯಕ್ತಪಡಿಸಿ, ಸೂಕ್ತ ವರದಿ ನೀಡುವಂತೆ ಸೂಚಿಸಿದರು.

ನಾಲ್ಕೂರು ಗ್ರಾಮ ಪಂಚಾಯತ್‍ನಲ್ಲಿ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಇಲ್ಲದ ಕಾರಣ ತೊಂದರೆಯಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಲೀಡ್ ಬ್ಯಾಂಕ್ ಮೆನೇಜರ್ ಅವರಿಗೆ ಉಪಾಧ್ಯಕ್ಷ ಶೀಲಾ ಶೆಟ್ಟಿ ತಿಳಿಸಿದರು.

ಜಿಲ್ಲೆಯಲ್ಲಿ ಅಕ್ಟೋಬರ್ 1 ರಿಂದ 15 ರವರೆಗೆ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಸಮೃದ್ಧಿ ಹಾಗೂ ಸ್ವಚ್ಛತಾ ಪಾಕ್ಷಿಕ ಆಚರಿಸುತ್ತಿದ್ದು, ಈ ಕುರಿತು ಎಲ್ಲಾ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಸಿಇಓ ಶಿವಾನಂದ ಕಾಪಶಿ ತಿಳಿಸಿದರು.

ಸಭೆಯಲ್ಲಿ ಆರೋಗ್ಯ ಮತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಜಿ.ಪಂ. ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹಾಗೂ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love